(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.10. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುರಿತಾದ ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದ ಪುರಭವನದಲ್ಲಿ ಹೈಡ್ರಾಮಾವೇ ನಡೆಯಿತು. ಪುಸ್ತಕ ಬಿಡುಗಡೆ ವಿಚಾರ ಚರ್ಚೆ ಆಗುತ್ತಿದ್ದಂತೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು, ನ್ಯಾಯಾಲಯದ ಮೊರೆ ಹೋಗಿ ಪುಸ್ತಕ ಬಿಡುಗಡೆಗೆ ತಡೆ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನಗರದ ಸಿಟಿ ಸಿವಿಲ್ ಕೋರ್ಟ್ ಪುಸ್ತಕ ಬಿಡುಗಡೆಗೆ ತಡೆ ನೀಡಿತು. ಪುಸ್ತಕ ಬಿಡುಗಡೆ, ಮಾರಾಟ ಅಲ್ಲದೇ ಮಾಧ್ಯಮ ಪ್ರಸಾರಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆಯನ್ನು ಫೆ.9ಕ್ಕೆ ಮುಂದೂಡಿತು ಎನ್ನಲಾಗಿದೆ.
ಈ ನಡುವೆ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಪುರಭವನದ ಎದುರು ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಸೇರಿ, ಪ್ರತಿಭಟನೆ ಆರಂಭಿಸಿದರು. ಕೆಲವರು ಪುರಭವನದ ಒಳಗಡೆ ನುಗ್ಗಿದ್ದರು. ಹೀಗಾಗಿ ಒಳಗಡೆ ಭಾರೀ ಹೈಡ್ರಾಮಾವೇ ನಡೆಯಿತು. ಪ್ರತಿಭಟನಾನಿರತರಾಗಿದ್ದ ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ನಂತರ ಆಯೋಜಕರು ಇಂದಿನ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ರದ್ದು ಮಾಡುತ್ತೇವೆ ಎಂದು ವೇದಿಕೆ ಮೇಲೆ ಪ್ರಕಟಿಸಿದರು ಎನ್ನಲಾಗಿದೆ.