(ನ್ಯೂಸ್ ಕಡಬ) newskadaba.com ಕಡಬ, ಡಿ.11. ಪೇಜಾವರಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ವರ್ಷ ವಾರ್ಷಿಕೋತ್ಸವನ್ನು ವಿಶಿಷ್ಠವಾಗಿ ಆಚರಿಸಲಾಗುತ್ತಿದ್ದು ದಶಂಬರ್ 16 ನೇ ಶನಿವಾರ ನಮ್ಮ ಮಕ್ಕಳ ಶೈಕ್ಷಣಿಕ ಜಾತ್ರೆ-2017 ಎಂದು ಆಚರಿಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ತಿಳಿಸಿದರು.
ಅವರು ಸೋಮವಾರ ರಾಮಕುಂಜದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶೈಕ್ಷಣಿಕ ಜಾತ್ರೆಯಲ್ಲಿ ಮಕ್ಕಳ ವಾರ್ಷಿಕ ಸಾಧನಾ ಚಟುವಟಿಕೆಗಳ ಶೋಧನಾ ಕಾರ್ಯ ನಡೆಯಲಿದೆ ಎಂದು ಹೇಳಿದರು. ಶಿಕ್ಷಣ ಮಾಧ್ಯಮ ಯಾವುದೇ ಇರಲಿ ಅದರಲ್ಲಿ ಭಾರತೀಯ ಸಂಸ್ಕೃತಿ ಅಡಕವಾಗಿರಲಿ ಎನ್ನುವ ಶ್ರೀಗಳ ಮಹೋನ್ನತ ಉದ್ದೇಶಗಳೊಂದಿಗೆ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕದ ಅಧೀನದಲ್ಲಿರುವ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಪ್ರಾಥಮಿಕ ಶಾಲೆ, ವಿದ್ಯಾರ್ಥಿನಿಲಯ, ಕಿಂಡರ್ ಗಾರ್ಟನ್ ಹಾಗೂ ಕಂಪ್ಯುಟರ್ ತರಬೇತಿ ಕೇಂದ್ರವನ್ನು ನಡೆಸಿಕೊಂಡು ಬರಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಥಿನಿಲಯದಲ್ಲಿದ್ದಕೊಂಡು ವ್ಯಾಸಂಗ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣದೊಂದಿಗೆ ಜೀವನ ಮೌಲ್ಯಗಳನ್ನು ಭೋಧಿಸಿ ರಾಷ್ಟ್ರ ನಿರ್ಮಾಣಕ್ಕೆ ಪ್ರೇರಣೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಹೊರಹೊಮ್ಮುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ನಮ್ಮ ವಿದ್ಯಾ ಸಂಸ್ಥೆಯಲ್ಲಿ ಪ್ರತೀ ವರ್ಷ ವಿದ್ಯಾರ್ಥಿಗಳ ವರ್ಷವಿಡೀ ಶೈಕ್ಷಣಿಕ ಪ್ರಗತಿ ಮತ್ತು ಸಾಧನೆಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಈ ವರ್ಷಕೂಡಾ ಈಗಾಗಲೇ ಪ್ರತಿಭಾ ಪುರಸ್ಕಾರ, ಬೇರೆ, ಬೇರೆ ದತ್ತಿ ನಿಧಿಗಳನ್ನು ನೀಡಿ ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಆದರೆ ಈ ವರ್ಷದ ವಾರ್ಷಿಕೋತ್ಸವನ್ನು ಲರ್ನಿಂಗ್ ಇನ್ಟು ಲರ್ನಿಂಗ್ ಫೆಸ್ಟ್ 2017-18 ಎಂಬ ಶಿರ್ಷಿಕೆಯಡಿ ಆಚರಿಸಲಾಗುವುದು, ಈ ಮಕ್ಕಳ ಶೈಕ್ಷಣಿಕ ಜಾತ್ರೆಯಲ್ಲಿ ಸಂಸ್ಥೆಯ ಪ್ರತಿಯೊಬ್ಬ ವಿದ್ಯಾರ್ಥಿಗಳ ಅಂತರಿಕ ಪ್ರತಿಭೆಯನ್ನು ಗುರುತಿಸಿ ಹೊರತೆಗೆಯುವ ವಿಶೇಷ ಪ್ರಯತ್ನ ನಡೆಸಲಾಗುತ್ತಿದೆ. ಪಾಠದ ಜೊತೆಗೆ ಅವರಲ್ಲಿರುವ ಸೃಜನಾತ್ಮಕತೆಯನ್ನು ಪ್ರಚೋದಿಸುವ ಚಟುವಟಿಕೆಗಳು ನಡೆಯುತ್ತಿವೆ. ಎಲ್ಲಾ ಪಾಠದ ವಿಷಯಕ್ಕೆ ಪುರಕವಾದ ಚಾಟ್ರ್ಸ್, ಮೋಡೆಲ್(ವರ್ಕಿಂಗ್ ಆ್ಯಂಡ್ ಸ್ಟಿಲ್ ಮೋಡ್), ಹಳೆಯ ವಸ್ತುಗಳ ಸಂಗ್ರಹಣೆ, ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಸಂಬಂಧಪಟ್ಟ ವಸ್ತುಗಳ ಸಂಗ್ರಹಣೆ, ಹಾಗೂ ಇತರ ಪುರಕ ಚಟುವಟಿಕೆಗಳು ನಡೆಯಲಿವೆ, ಈ ಶೈಕ್ಷಣಿಕ ಜಾತ್ರೆಯಲ್ಲಿ ವಿದ್ಯಾರ್ಥಿಗಳಿಂದ ಆಹಾರ ಮೇಳ, ಪುಸ್ತಕ ಪ್ರದರ್ಶನ ನಡೆಯಲಿದೆ. ಸಂಸ್ಥೆಯ ಎಲ್ಲಾ ಶಿಕ್ಷಕರ ಮಾರ್ಗದರ್ಶನದಿಂದ ಪುರ್ವ ಪ್ರಾಥಮಿಕದಿಂದ ಪಿ.ಯು.ಸಿ ತನಕದ ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಪ್ರತಿಭೆಯ ಅನಾವರಣ ಮಾಡಲಿದ್ದಾರೆ ಎಂದರು.
ದಶಂಬರ್ 16 ರಂದು ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 5.00 ರ ತನಕ ಈ ಜಾತ್ರೆ ನಡೆಯಲಿದ್ದು ಮಧ್ಯಾಹ್ನ 2.00 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದರ ಜೊತೆಯಲ್ಲಿ ನಮ್ಮ ಸಂಸ್ಥೆ ಬೆಳೆದು ಬಂದ ಹಾದಿಯ ವಿಡಿಯೋ ಚಿತ್ರೀಕರಣ ಪ್ರದರ್ಶನ ಮಾಡಲಾಗುತ್ತದೆ ಎಂದು ಹೇಳಿದ ಸೇಸಪ್ಪ ರೈ ಈ ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಅಂಗಾರ, ಶಕುಂತಳಾ ಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ ಸೇರಿದಂತೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಮಾಧ್ಯಮ ಕ್ಷೇತ್ರಗಳ ಮುಂದಾಳುಗಳು, ಇಲಾಖಾಧಿಕಾರಿಗಳು ಸೇರಿದಂತೆ 49 ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್ ಮಾತನಾಡಿ ಶ್ರೀ ರಾಮಕುಂಜೇಶ್ವರ ಪದವಿಪುರ್ವ ಕಾಲೇಜಿನಲ್ಲಿ ದಶಂಬರ್ 16 ರಿಂದ 18 ರ ತನಕ ನಡೆಯುವ ವಾರ್ಷಿಕೋತ್ಸವ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು. ದಶಂಬರ್ 16 ರಂದು ವೀಶೆಷವಾಗಿ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸೆಲ್ಕೋ ಇಂಡಿಯಾದ ಸಂಸ್ಥಾಪಕ ಡಾ|ಹರೀಶ್ ಹಂದೆಯವರು ಶೈಕ್ಷಣಿಕ ಸಂವಾದ ನಡೆಸಿಕೊಡಲಿದ್ದಾರೆ. ಹಾಗೂ ದಶಂಬರ್ 18 ರಂದು ಸಾಹಿತಿ ಜೋಗಿ ಬೆಂಗಳೂರು ಅವರು ಪತ್ರಿಕೋದ್ಯಮ ವಿದ್ಯಾಥಿಗಳೊಂದಿಗೆ ಕಾರ್ಯಾಗಾರ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷ ಇ.ಕೃಷ್ಣಮೂರ್ತಿ ಕಲ್ಲೇರಿ, ಪದವಿ ಪುರ್ವ ಕಾಲೇಜಿನ ಪ್ರಿನ್ಸಿಪಾಲ್ ಎಂ.ಸತೀಶ್ ಭಟ್, ಕನ್ನಡ ಮಾಧ್ಯಮ ಪ್ರೌಢ ಶಾಲಾ ಮುಖ್ಯಗುರು ಸತೀಶ್ ಭಟ್, ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಆಡಳಿತಾಧಿಕಾರಿ ಆನಂದ ಪುಜಾರಿ, ಮುಖ್ಯಶಿಕ್ಷಕಿ ಗಾಯತ್ರಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಲೋಹಿತಾ ಮೊದಲಾದವರು ಉಪಸ್ಥಿತರಿದ್ದರು.