?ಎಚ್‌ಐವಿ/ಏಡ್ಸ್ ಪ್ರಕರಣ ► ದಕ್ಷಿಣ ಕನ್ನಡ ಜಿಲ್ಲೆಗೆ ಮೂರನೇ ಸ್ಥಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ,11. ಎಚ್‌ಐವಿ ಪೀಡಿತ ರೋಗಿಗಳ ಸಂಖ್ಯೆ ಈ ವರ್ಷ ಶೇ 50 ರಷ್ಟು ಕಡಿಮೆಯಾಗಿದ್ದು, ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೂರನೇ ಸ್ಥಾನದಲ್ಲಿದೆ ಎಂದು ಏಡ್ಸ್‌ ನಿಯಂತ್ರಣ ಅಧಿಕಾರಿ ಡಾ. ಬದ್ರುದ್ದೀನ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬಾಗಲಕೋಟೆ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಎಂದರು. ವರ್ಷದಿಂದ ವರ್ಷಕ್ಕೆ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ವರ್ಷ ಜನವರಿಯಿಂದ ಅಕ್ಟೋಬರ್‌ವರೆಗೆ ಒಟ್ಟು 512 ಜನರಲ್ಲಿ ರೋಗ ಪತ್ತೆಯಾಗಿದೆ ಎಂದ ಅವರು, ಬೇರೆ ರಾಜ್ಯಗಳಿಂದ ವಲಸೆ ಬರುತ್ತಿರುವ ಜನರು ಹಾಗೂ ಚಿಕಿತ್ಸೆಗಾಗಿ ಕೇರಳದಿಂದ ಇಲ್ಲಿಗೆ ಬರುವ ಜನರಲ್ಲಿಯೇ ಹೆಚ್ಚಿನ ಪ್ರಮಾಣದ ಎಚ್‌ಐವಿ ಪತ್ತೆಯಾಗಿದೆ. ರೋಗಿಗಳಲ್ಲಿ ಶೇ 40 ರಷ್ಟು ಸ್ಥಳೀಯರಿದ್ದರೆ, ಶೇ 60 ರಷ್ಟು ಹೊರಗಿನವರೇ ಇದ್ದಾರೆ ಎಂದು ಹೇಳಿದರು.

ಎಚ್‌ಐವಿ ಸೋಂಕಿತರಿಗೆ ಮತ್ತು ಬಾಧಿತರಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳಾದ ವಸತಿ, ಸ್ವಉದ್ಯೋಗ, ಸಾಲ ಸೌಲಭ್ಯ ಹಾಗೂ ತರಬೇತಿಗಳನ್ನು ನೀಡಲಾಗುತ್ತಿದೆ. ಮಾಹಿತಿ ಶಿಕ್ಷಣ ಕಾರ್ಯಕ್ರಮದಡಿ ಮಂಗಳೂರು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲ್ಲೂಕಿನ ವಿವಿಧೆಡೆ ಇದೇ 5 ರಿಂದ 15ರವರೆಗೆ ಯಕ್ಷಗಾನ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

Also Read  ಕೊನೆಗೂ ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ► ಕಲ್ಲುಗುಡ್ಡೆ: ಅಕ್ರಮ ಕಟ್ಟಡದಲ್ಲಿನ ಮದ್ಯದಂಗಡಿ ಮುಚ್ಚಲು ಆದೇಶ

ಯುವ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯ 64 ಪದವಿ ಕಾಲೇಜುಗಳಲ್ಲಿ ರೆಡ್‌ ರಿಬ್ಬನ್‌ ಕ್ಲಬ್‌ ಗಳನ್ನು ಸ್ಥಾಪಿಸಲಾಗಿದೆ. ಹದಿಹರೆಯದ ಶಿಕ್ಷಣ ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ 182 ಪ್ರೌಢಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವ ದಲ್ಲಿ ಜಿಲ್ಲೆಯ ಲೈಂಗಿಕ ಕಾರ್ಯಕರ್ತರು, ವಲಸಿಗರು, ವಾಹನ ಚಾಲಕರಿಗೆ ನಿಯಮಿತವಾಗಿ ಎಚ್‌ಐವಿ ಮತ್ತು ಸುರಕ್ಷಿತ ಲೈಂಗಿಕತೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಐಸಿಟಿಸಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

Also Read  ಮಂಗಳೂರು :ತಡರಾತ್ರಿ ಯುವಕನ ಮೇಲೆ ತಲವಾರ್ ನಿಂದ ದಾಳಿ

ಮಾಹಿತಿ ಶಿಕ್ಷಣ ಕಾರ್ಯಕ್ರಮದಡಿ ಯಕ್ಷಗಾನ, ಬೀದಿ ನಾಟಕಗಳ ಮೂಲಕ ಜನಜಾಗೃತಿ ಕಾರ್ಯಕ್ರಮ, ಆರೋಗ್ಯೇತರ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಹಾಗೂ ಸ್ವಸಹಾಯ ಗುಂಪು, ಯುವಕ, ಯುವತಿ ಮಂಡಲದ ಸದಸ್ಯರಿಗೆ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.

error: Content is protected !!
Scroll to Top