(ನ್ಯೂಸ್ ಕಡಬ) newskadaba.com, ಬೆಂಗಳೂರು ಜ. 07 ಲೋಕಾಯುಕ್ತ ಸಂಸ್ಥೆಗೆ ದಕ್ಷ, ಕಳಂಕರಹಿತ ಪೊಲೀಸ್ ಅಧಿಕಾರಿಗಳ ನೇಮಕ ಮಾಡಿಕೊಳ್ಳಲು ಮೊದಲ ಬಾರಿಗೆ ರಾಜ್ಯದಲ್ಲಿ ಚೆಕ್ ಲಿಸ್ಟ್ ವ್ಯವಸ್ಥೆ ಮಾಡಲಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತದಲ್ಲಿ ಕೆಲಸ ಮಾಡಲು ಅರ್ಜಿ ಸಲ್ಲಿಸುವ ಪೊಲೀಸ್ ಅಧಿಕಾರಿಗಳಿಗೆ ಚೆಕ್ ಲಿಸ್ಟ್ ಕೊಟ್ಟು ಅದರಲ್ಲಿ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಿದ್ದೇವೆ ಎಂದರು.
ಈ ಚೆಕ್ ಲಿಸ್ಟ್ ನಲ್ಲಿ ಅಧಿಕಾರಿಯ ಎಲ್ಲಾ ವಿವರಗಳು ದೊರೆಯಲಿದೆ. ಈ ಹಿಂದೆ ಎಸಿಬಿಯಲ್ಲಿ ಕೆಲಸ ಮಾಡಿದ್ದರೆ ಎಷ್ಟು ಕೇಸ್ ಮಾಡಿದ್ದಾರೆ, ಎಷ್ಟು ಬಿ ರಿಪೋರ್ಟ್ ಹಾಕಿದ್ದಾರೆ. ಎಷ್ಟು ಪ್ರಕರಣಗಳಲ್ಲಿ ಚಾರ್ಜ್ ಶೀಟ್ ದಾಖಲಿಸಿ ಶಿಕ್ಷೆ ಕೊಡಿಸಿದ್ದಾರೆ. ಆ ಅಧಿಕಾರಿಯ ಮೇಲೆ ಇಲಾಖೆ ವಿಚಾರಣೆ ಬಾಕಿ ಇದೆಯೇ? ಇದ್ದರೆ ಯಾವ ಪ್ರಕರಣ, ಈ ಹಿಂದೆ ಲೋಕಾಯುಕ್ತ ದಾಳಿ ಆಗಿದೆಯಾ? ಇತ್ಯಾದಿ ಮಾಹಿತಿಗಳು ಈ ಚೆಕ್ ಲಿಸ್ಟ್ ನಲ್ಲಿ ಸಿಗಲಿದೆ ಎಂದರು.