ಪೇರಡ್ಕ – ಪೊಸೊಳಿಗೆ ನವೀಕೃತ ಮಸೀದಿ ಉದ್ಘಾಟನೆ ► ಹಾಗೂ ಸೌಹಾರ್ದ ಸಮಾವೇಶ

(ನ್ಯೂಸ್ ಕಡಬ) newskadaba.com ಕಡಬ, ಡಿ.10. ರೆಂಜಿಲಾಡಿ ಗ್ರಾಮದ ಪೇರಡ್ಕ ಪೊಸೊಳಿಗೆ ನವೀಕೃತ ಜುಮ್ಮಾ ಮಸೀದಿಯ ಉದ್ಘಾಟನಾ ಸಮಾರಂಭದ ಅಂಗವಾಗಿ ಮಸೀದಿ ವಠಾರದಲ್ಲಿ ಡಿ.7ರಂದು ಸೌಹಾರ್ದ ಸಂಗಮ ಸಭೆ ನಡೆಸಲಾಯಿತು. ಸಮಾರಂಭದಲ್ಲಿ  ಮಸೀದಿಯ ಧರ್ಮಗುರುಗಳಾದ ಹಸನ್ ಮದನಿ ಉಸ್ತಾದ್ರವರು ದುಃವಾ ಪ್ರಾರ್ಥನೆಯೊಂದಿಗೆ ಆಶೀರ್ವಚನ ನೀಡಿ ಅಲ್ಲಾಹುವಿನ ನಾಮದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ರವರು ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಈ ಪೊಸೊಳಿಗೆ ಜುಮ್ಮಾ ಮಸೀದಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಜಾತಿ ಧರ್ಮದವರು  ಸೇರುವುದರೊಂದಿಗೆ ಸೌಹಾರ್ದತೆಗೆ ಇತಿಹಾಸವನ್ನು ಬರೆದಿದ್ದಾರೆ. ಇದೇ ರೀತಿ ಎಲ್ಲಾ ಕಡೆಗಳಲ್ಲೂ ಒಮ್ಮತದಿಂದ ಒಗ್ಗಟ್ಟಾಗಿ ಬಾಳುವುದರೊಂದಿಗೆ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳಲು ಈ ಪ್ರಾರ್ಥನಾ ಮಂದಿರ ಸಾಕ್ಷಿಯಾಗಲಿ ಎಂದ ಅವರು ಸರಕಾರದಿಂದ ಸಿಗುವಂತಹ  ಸೌಲಭ್ಯಗಳನ್ನು ಈ ಭಾಗಕ್ಕೂ ನೀಡಿ ಸಹಕರಿಸಲು  ಬದ್ದನಿರುವೆನು ಎಂದರು.

ರಾಷ್ಟ್ರೀಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹೈದರ್ ಪರ್ತಿಪ್ಪಾಡಿಯವರು ಮಾತನಾಡಿ ಸಾಮರಸ್ಯಕ್ಕೆ ಮಾದರಿಯಾದ ಈ ಪೊಸೊಳಿಗೆ ಮಸೀದಿಯ ಕಾರ್ಯಕ್ರಮ ನಮಗೆ ಇಲ್ಲಿ ವೇದಿಕೆಯಲ್ಲಿ ಹಾಗೂ ಸೇರಿದಂತಹ ವಿವಿಧ ಜನಾಂಗದ ಜನಸಮೂಹವನ್ನು ನೋಡಿದಾಗಲೇ ಈ ಭಾಗದಲ್ಲಿ ಸೌಹಾರ್ದತೆಗೆ ಎಷ್ಟು ಪ್ರಾಮುಖ್ಯತೆ ಇದೆ ಎಂಬುದು  ಅರ್ಥವಾಗುತ್ತಿದೆ. ಇದೇರೀತಿ ದೇಶಾದ್ಯಂತ ನಾವೆಲ್ಲರೂ ದೇವಸ್ಥಾನ, ಚರ್ಚ್, ಮಸೀದಿ ನಿರ್ಮಾಣದೊಂದಿಗೆ ದೇವರ ಅನುಯಾಯಿಗಳಾಗಿ ಹೃದಯವಂತಿಗೆಯಿಂದ ಪ್ರಾರ್ಥಿಸಿಕೊಂಡು ಮುನ್ನಡೆದಲ್ಲಿ ಜಾತ್ಯಾತೀತ ಭಾರತದ ನಿರ್ಮಾಣಕ್ಕೆ ಸಾಕ್ಷಿಯಾದೀತು ಎಂದ ಅವರು ಅಲ್ಲಾಹು ನಮ್ಮೆಲ್ಲರನ್ನು ಇದೇ ರೀತಿ ಪ್ರೀತಿ ವಿಶ್ವಾಸದಿಂದ ಮುಂದುವರೆಯುವಂತೆ ಅನುಗ್ರಹಿಸಲಿ ಎಂದರು.

ಧಾರ್ಮಿಕ ಮುಂದಾಳು ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್ ಮಾತನಾಡಿ ಹಿಂದಿನಿಂದಲೂ ಈ ಭಾಗದಲ್ಲಿರುವ ಎಲ್ಲಾ ಧರ್ಮದವರು ಅನ್ಯೋನ್ಯತೆಯಿಂದ ಬಾಳ್ವೆ ನಡೆಸುತ್ತಿದ್ದು ಪ್ರೀತಿ ಸೌರ್ಹಾದಕ್ಕೆ ಪ್ರತೀಕವಾಗಿ ನಮ್ಮ ಈ ನಾಡಿನಲ್ಲಿ ನಾವೆಲ್ಲರೂ ದೇವಸ್ಥಾನ ದೈವಸ್ಥಾನ ಮಂದಿರ, ಚರ್ಚ್, ಮಸೀದಿಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರೊಂದಿಗೆ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಿದ್ದೇವೆ. ನಮ್ಮ ಮುಂದಿನ ಪೀಳೀಗೆಗೂ ಇದೇ ರೀತಿಯ ಜೀವನ ಮಾದರಿಯಾಗಲಿ ಎಂದು ಶುಭಹಾರೈಸಿದರು.

ಧರ್ಮಗುರುಗಳಾದ ಅಬ್ರಹಾಂ ಪಿ.ಕೆ ಮಾತನಾಡಿ ಗ್ರಾಮೀಣ ಪ್ರದೇಶವಾಗಿದ್ದರೂ ಇಲ್ಲಿ ವಿನೂತನವಾಗಿ ನಿರ್ಮಿಸಿದ ಈ ಮಸೀದಿಯ ಕಾರ್ಯಕ್ರಮದಲ್ಲಿ ಈ ಪ್ರದೇಶದ ಎಲ್ಲಾ ಧರ್ಮದವರು ಭಾಗವಹಿಸುವುದರ ಮೂಲಕ ಮಾನವ ಧರ್ಮ ಒಂದೇ ಎಂದು ಸಾಬೀತುಪಡಿಸಿದ್ದಾರೆ. ಇದೇ ರೀತಿ ಎಲ್ಲಾ ಭಾಗಗಳಲ್ಲೂ ನಾವು ಎಲ್ಲಾ ಧರ್ಮದವರು ಒಂದಾಗಿ ಬಾಳುವುದರೊಂದಿಗೆ ಸಾಮರಸ್ಯದ ಬದುಕನ್ನು ನಡೆಸುವುದರ ಮೂಲಕ ಈ ಸೌಹಾರ್ದ ಸಂಗಮವನ್ನು ಯಶಸ್ವಿಗೊಳಿಸೋಣ ಎಂದರು.

Also Read  ಗೋಮಾಳ ಜಾಗ ಒತ್ತುವರಿ ವಿರುದ್ಧ ಕ್ರಮಕ್ಕೆ ತಾ.ಪಂ. ಸೂಚನೆ

ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಮಾತನಾಡಿ ಧರ್ಮೋ ರಕ್ಷತಿ ರಕ್ಷಿತಾಃ, ಧರ್ಮವನ್ನು ನಾವು ರಕ್ಷಿಸಿ ಸೌಹಾರ್ದತೆಯಿಂದ ನಡೆದುಕೊಂಡಲ್ಲಿ ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರಲ್ಲದೆ ದೇವಸ್ಥಾನವಾಗಿರಲಿ, ಮಸೀದಿಯಾಗಿರಲಿ, ಮಂದಿರವಾಗಿರಲಿ ಚರ್ಚ್ಗಳಾಗಿರಲಿ ಎಲ್ಲಿ ನಾವು ಹೃದಯಾಂತರಾಳದಿಂದ ಪುಜನೀಯ ಸ್ಥಳಗಳಲ್ಲಿ ಒಟ್ಟು ಸೇರುವುದರ ಮೂಲಕ ದೇವರನ್ನು ಪುಜಿಸುತ್ತೇವೋ ಅಲ್ಲಿ ಖಂಡಿತಾ ದೇವರು ಒಲಿಯುತ್ತಾರೆ ಎಂಬುದಕ್ಕೆ ಈ ಪೊಸೊಳಿಗೆ ಮಸೀದಿಯ ಉದ್ಘಾಟನಾ ಕಾರ್ಯಕ್ರಮವೇ ಸಾಕ್ಷಿ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಸದಸ್ಯರಾದ ರಶೀದ್ ಹಾಜಿ ವಿಟ್ಲ ಮಾತನಾಡಿ ಈ ಪ್ರದೇಶದಲ್ಲಿ ನಾವು ನಮ್ಮ ಎಂ ಫ್ರೆಂಡ್ಸ್‌ ಸಂಘಟನೆಯ ಮೂಲಕ ವೀಕ್ಷಿಸಿದಂತೆ ಸುಮಾರು 42 ಮನೆಗಳಿದ್ದು ಅದರಲ್ಲಿ ಕೆಲವರು ಮಾತ್ರ ಆರ್ಥಿಕವಾಗಿ ಮುಂದುವರೆದಿದ್ದು ಕೆಲವರು ಸಾಧಾರಣವಾಗಿದ್ದು ಇನ್ನು ಕೆಲವರು ವಿಧವೆಯರು, ಬಡವರೂ ಆಗಿದ್ದು ಅವರ ಜೀವನ ಮಟ್ಟ ತುಂಬಾ ಕಷ್ಟದಾಯಕವಾಗಿದೆ. ಆದರೆ ಇಲ್ಲಿಯ ಒಂದು ಮಸೀದಿ ನಿರ್ಮಾಣದಲ್ಲಿ ಈ ಜಮಾಅತರ ಒಗ್ಗಟ್ಟನ್ನು ಗಮನಿಸಿದಾಗ ಪ್ರತಿಯೊಬ್ಬರ ಹೃದಯವಂತಿಕೆ ಅರ್ಥವಾಗುತ್ತದೆ. ಇಲ್ಲಿಯ ನಿರ್ಗತಿಕ ಬಡವರ ಸಮಸ್ಯೆಗಳಿಗೆ ನಮ್ಮ ಸಂಘದಿಂದ ಕೂಡಾ ಸಹಾಯ ಸಹಕಾರ ನೀಡಲು ಬದ್ದರಿದ್ದೇವೆ ಎಂದರು.

ಜಿಲ್ಲಾ ಮದ್ರಸ ಮೇನೆಜ್ಮೆಂಟ್ ಉಪಾಧ್ಯಕ್ಷ ಇಕ್ಬಾಲ್ ಅಹಮ್ಮದ್ ಮುಲ್ಕಿ ಮಾತನಾಡಿ ಅದೃಷ್ಟ ಕೂಡಿ ಬಂದಾಗ ಅಲ್ಲಾಹುವಿನ ಅನುಗ್ರಹ ನಮ್ಮೆಲ್ಲರ ಮೇಲೆ ಇರುತ್ತದೆ. ಈ ನಿಟ್ಟಿನಲ್ಲಿ ಈ ಪೊಸೊಳಿಗೆ ವಿನೂತನ ಮಸೀದಿ ಉದ್ಘಾಟನೆಗೆ ಆಗಮಿಸಲು ಅವಕಾಶ ಸಿಕ್ಕಿದ್ದು ಸಂತೋಷ ತಂದಿದೆ. ಇಲ್ಲಿ ಒಂದು ಸುಸಜ್ಜಿತ ಮದರಸ ನಿರ್ಮಾಣವಾಗಬೇಕಿದೆ. ಈ ಬಗ್ಗೆ ನಮ್ಮ ಸಂಸ್ಥೆಯಿಂದ ಆಗುವಂತಹ ಎಲ್ಲಾ ಸಹಾಯ ಸಹಕಾರ ನೀಡಲು ನಾವು ಕೂಡ ನಿಮ್ಮೊಟ್ಟಿಗೆ ಕೈಜೋಡಿಸಲು ತಯಾರಿದ್ದೇವೆ. ಒಟ್ಟಿನಲ್ಲಿ ಈ ಭಾಗದಲ್ಲಿ ದೀನಿ ವಿದ್ಯಾಭ್ಯಾಸ ಹಾಗೂ ದೀನಿ ಕಾರ್ಯಕ್ರಮ ನಿರಂತರ ನಡೆಯುವಂತಾಗಬೇಕು ಎಂದರು.

ನೂಜಿಬಾಳ್ತಿಲ ಗ್ರಾ.ಪಂ.ಮಾಜಿ ಅಧ್ಯಕ್ಷ ಶ್ರೀಧರ ಗೌಡ ಗೋಳ್ತಿಮಾರ್ ಮಾತನಾಡಿ ಸೌಹಾರ್ದತೆ ಎಂಬುದು ಬಾಯಿ ಮಾತಿನಿಂದ ಸಾಧ್ಯವಾಗುವುದಿಲ್ಲ. ನಮ್ಮ ಹೃದಯದಲ್ಲಿ ಜಾತ್ಯಾತೀತತೆಯ ನರಗಳು ಇದ್ದು ನಮ್ಮೆಲ್ಲರ ರಕ್ತ ಒಂದೇ ಆಗಿದ್ದು ಒಗ್ಗಟ್ಟಿನಲ್ಲಿ ಬಾಳುವ ಮೂಲಕ ಸೌಹಾರ್ದತೆಯನ್ನು ಮುಂದುವರೆಸೋಣ ಎಂದರು.

Also Read  ಸುಬ್ರಹ್ಮಣ್ಯ: ಗುಡ್ಡ ಕುಸಿದು ಮಕ್ಕಳಿಬ್ಬರು ಮೃತಪಟ್ಟ ಪ್ರಕರಣ ➤ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಬೇಟಿ

ನೂಜಿಬಾಳ್ತಿಲ ಗ್ರಾ.ಪಂ.ಸದಸ್ಯ ಕೆ.ಜೆ ತೋಮಸ್ ಪೊಸೊಳಿಗೆ ಮಸೀದಿಯ ಸಂಪುರ್ಣ ವಿವರವನ್ನು ವಿವರಿಸಿದಲ್ಲದೆ ಮಸೀದಿ ನಿರ್ಮಾಣದಲ್ಲಿ  ಇಲ್ಲಿಯ ಆಡಳಿತ ಮಂಡಳಿಯವರು ಊರಿನ ಪರವೂರಿನವರು ಸೇರಿಕೊಂಡು ಯಾವ ರೀತಿಯಲ್ಲಿ ಒಗ್ಗಟ್ಟಿನಲ್ಲಿ ಸಹಕರಿಸಿದ್ದಾರೆ ಎಂಬುದಕ್ಕೆ ಈ ವಿನೂತನ ಮಸೀದಿ ಕಟ್ಟಡವೇ ಸಾಕ್ಷಿ ಎಂದು ಆಡಳಿತ ಮಂಡಳಿಯವರನ್ನು ಅಭಿನಂದಿಸಿದರು. ಮಸೀದಿಯ ಅಧ್ಯಕ್ಷ ಪುತ್ತುಕುಂಞಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಆರ್ಥಿಕವಾಗಿ ಹಿಂದುಳಿದಂತಹ ಈ ಪ್ರದೇಶದಲ್ಲಿ ಕಳೆದ 40 ವರ್ಷಗಳ ಹಿಂದೆ ಬರೇ 5 ಮನೆಗಳಿದ್ದ ಈ ಪೊಸೊಳಿಗೆ ಪೆಲತ್ರಾಣೆ ನಿಡ್ಮೇರು ಪ್ರದೇಶದಲ್ಲಿ ಪ್ರಸ್ತುತ 40 ಕುಟುಂಬಗಳೊಂದಿಗೆ ವಾಸಿಸುವುದರೊಂದಿಗೆ ದೂರದ ಕಡಬ ಮಸೀದಿಗೆ ಹೋಗುತ್ತಿದ್ದ ಇಲ್ಲಿಯ ಮುಸ್ಲಿಂ ಬಾಂಧವರು ಪ್ರಸ್ತುತ ಕಳೆದ 35 ವರ್ಷಗಳಿಂದ ಇಲ್ಲಿಯೇ ಮದ್ರಸ ನಿರ್ಮಿಸಿ ಧಾರ್ಮಿಕ ವಿದ್ಯಾಭ್ಯಾಸ ಪಡೆಯುವುದಲ್ಲದೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುತ್ತಾ ಬರುತ್ತಿದ್ದು 15 ವರ್ಷದ ಹಿಂದೆ ಇಲ್ಲಿಯೊಂದು ಮಸೀದಿಯೊಂದನ್ನು ನಿರ್ಮಿಸಿ ಪ್ರಾರ್ಥನೆ ನಡೆಸುತ್ತಾ ಬರುತ್ತಿದ್ದೇವೆ. ಪ್ರಸ್ತುತ ಸುಸಜ್ಜಿತವಾದ ಒಂದು ಮಸೀದಿ ನಿರ್ಮಾಣಗೊಂಡಿದ್ದು ಇದಕ್ಕೆ ಸಂಪುರ್ಣ ದಾನಿಯಾಗಿ ಸಹಕರಿಸಿದ ಅಬ್ದುಲ್ ರಹ್ಮಾನ್ ಬಿನ್ ಅಬ್ದುಲ್ಲರವರನ್ನು ಅಭಿನಂದಿಸಿದ ಅವರು ಊರಪರವೂರ ಎಲ್ಲರ ಸಹಕಾರದೊಂದಿಗೆ ಅವಿರತವಾಗಿ ದುಡಿದ ನಮ್ಮ ಜಮಾಅತಿನ ಸಹೋದ್ಯೋಗಿ ಬಂಧುಗಳು ಧನ್ಯರು ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ವಕ್ಫ್‌ ಸದಸ್ಯ ನ್ಯಾಯವಾದಿ ಇಸ್ಮಾಯಿಲ್, ನೆಲ್ಯಾಡಿ ಎಂ ಫ್ರೆಂಡ್ಸ್‌ನ ಹಾಜಿ ಇಸ್ಮಾಯಿಲ್ ಮಾತನಾಡಿ ಶುಭಹಾರೈಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಸೀದಿಯ ಗೌರವಾಧ್ಯಕ್ಷ ಹಾಜಿ ಎಸ್.ಅಬ್ದುಲ್ ಖಾದರ್ ನವೀಕೃತ ಮಸೀದಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ನಡೆದ ಸೌಹಾರ್ದ ಸಭೆಯು ಅತ್ಯಂತ ಅರ್ಥಪೂರ್ಣವಾಗಿದ್ದು, ಈ ಭಾಗದ ಎಲ್ಲಾ ಧರ್ಮೀಯರು ಒಟ್ಟು ಸೇರಿಕೊಂಡು ಹಲವಾರು ವರ್ಷಗಳಿಂದ ಇದೇ ರೀತಿಯ ಸೌಹಾರ್ದ ಸಭೆಗಳನ್ನು ನಡೆಸುತ್ತಾ ಬಂದಿದ್ದು ಈ ಪ್ರದೇಶದಲ್ಲಿ ಶಾಂತಿಯ ಸೌಹಾರ್ದತೆಯ ನಾಡಾಗಿರುವ ಪೊಸೊಳಿಗೆಯು ಸಮಾಜಕ್ಕೆ ಮಾದರಿಯಾಗಿದ್ದು ಮುಂದೆಯೂ ಇದೇ ರೀತಿಯ ಒಗ್ಗಟ್ಟಿನೊಂದಿಗೆ ಈ ಮಸೀದಿಯ ಅಭಿವೃದ್ದಿ ಆಗಲಿ ಎಂದು ಶುಭಹಾರೈಸಿದರು.

Also Read  ಕಡಬ: ತೋಟಕ್ಕೆ ನುಗ್ಗಿದ ಕಾಡಾನೆ ➤ ಅಪಾರ ಕೃಷಿ ನಾಶ

ಗೋಳಿಯಡ್ಕ ಶ್ರೀಅಯ್ಯಪ್ಪ ಸ್ವಾಮಿ ಧರ್ಮಶಿಖರದ ರವೀಂದ್ರನ್ ಗುರುಸ್ವಾಮಿ, ಜಿ.ಪ.ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್, ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಪತ್ರಕರ್ತ ಖಾದರ್ ಸಾಹೇಬ್ ಕಲ್ಲುಗುಡ್ಡೆ, ಕಡಬ ವಲಯ ಎಸ್ಕೆಎಸ್ಎಫ್ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಮಸೀದಿಯ ಲೆಕ್ಕಪರಿಶೋಧಕ ಹಮೀದ್ ಬದ್ರಿಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಧರ್ಮಗುರುಗಳಾದ ಶೌಕತ್ ಆಲಿ ವಂದಿಸಿದರು. ಅಶ್ರಫ್ ಕೋಲ್ಪೆ ಹಾಗೂ ದಿಲ್ಫರ್ ಫಾರೂಕ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸಹಕರಿಸಿದರು.

error: Content is protected !!
Scroll to Top