(ನ್ಯೂಸ್ ಕಡಬ)newskadaba.com ಮೈಸೂರು, ಜ.07. ಅಪರಾದ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾದದ್ದು. ಕ್ಷಣ ಮಾತ್ರದಲ್ಲಿ ಆಗುವ ಅಹಿತಕರ ಘಟನೆಗಳ ಬಗ್ಗೆ ನಾವು ಎಚ್ಚೆತ್ತುಕೊಳ್ಳದೆ ಹೋದಲ್ಲಿ ನಾವು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ದುರ್ಬಳಕೆ, ಸೈಬರ್ ಕ್ರೈಂ ಇವುಗಳ ಬಗ್ಗೆ ಜಾಗೃತಿ ಹೊಂದುವುದು ಅತಿ ಅವಶ್ಯಕ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿಯ ಡಿವೈಎಸ್ಪಿ ಎಚ್.ಎಸ್.ರೇಣುಕಾರಾಧ್ಯ ತಿಳಿಸಿದರು.
ಸರಸ್ವತಿಪುರಂನಲ್ಲಿರುವ ಟಿಟಿಎಲ್ ಕಾಲೇಜಿನಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕವು ಆಯೋಜಿಸಿದ್ದ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಅಂತರ್ಜಾಲದ ದುರುಪಯೋಗ ಹೆಚ್ಚಾಗುತ್ತಿದೆ. ಜನರು ಒಂದು ಸಣ್ಣ ತಪ್ಪಿನಿಂದಾಗಿ ಹಣ ಹಾಗೂ ಮಹತ್ವದ ಮಾಹಿತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಮೂಲಕ ತಿಳಿದೋ ಅಥವಾ ತಿಳಿಯದೆಯೋ ವಿವಿಧ ಸಂಕಷ್ಟಗಳಿಗೆ ಸಿಲುಕಿ ನಲುಗುತ್ತಿದ್ದಾರೆ ಎಂದರು. ಸೈಬರ್ ಕ್ರೈಂ ತಡೆಯುವ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯಗತ್ಯ. ಸರ್ಕಾರಿ ಸಂಸ್ಥೆಗಳಲ್ಲೂ ಪ್ರತಿ ಕೆಲಸದಲ್ಲಿಯೂ ಕಂಪ್ಯೂಟರ್, ವಾಟ್ಸಪ್, ಪೇಸ್ಬುಕ್ ಹೀಗೆ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತೇವೆ. ಆದ್ದರಿಂದ ಈ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಜಾಗೃತರಾಗಬೇಕು ಎಂದು ಹೇಳಿದರು.