ಹೆತ್ತವರೊಂದಿಗೆ ಕೂಲಿ ಮಾಡುತ್ತಿದ್ದಾತ ಇದೀಗ ಕೊಣಾಜೆ ಠಾಣೆಯ ಎಸ್ಐ ► ಯುವಕರಿಗೆ ರೋಲ್ ಮಾಡೆಲ್ ಆದ ಸಾಧಕನ ಯಶೋಗಾಥೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.09. ಸುಮಾರು 13 ವರ್ಷಗಳ ಹಿಂದೆ ಬಂಜರು ಭೂಮಿಯಲ್ಲಿ ಬೆಳೆ ಬೆಳೆಯಲಾಗದೆ ಬಾಗಲಕೋಟೆಯಿಂದ ಕುಟುಂಬ ಸಮೇತರಾಗಿ ಮಂಗಳೂರಿಗೆ ಬಂದ ಪೀರು ಪವಾರ್‌‌ ಎಂಬಾತ ತನ್ನ ಮಗನಿಂದಾಗಿ ಕನಸಲ್ಲೂ ಅಂದುಕೊಳ್ಳದ ಎತ್ತರಕ್ಕೆ ಬೆಳೆದು ನಿಂತಿದ್ದಾರೆಂದರೆ ನಿಜಕ್ಕೂ ಆಶ್ಚರ್ಯವಾದೀತು. ಹಾಗಾದರೆ ಅವರು ಮಾಡಿದ ಸಾಧನೆ ಏನು ಗೊತ್ತಾ? ಈ ಯಶೋಗಾಥೆಯ ಡೀಟೈಲ್ಸ್‌ ಇಲ್ಲಿದೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದ ಪೀರು ಪವಾರ್‌ ಹಾಗೂ ಸುಮಿತ್ರಾ ಅವರ ನಾಲ್ವರು ಮಕ್ಕಳಲ್ಲಿ ಓರ್ವನಾದ ರವಿ ಪವಾರ್‌ ಇದೀಗ ಮಂಗಳೂರಿನ ಕೊಣಾಜೆ ಠಾಣೆಯಲ್ಲಿ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಆಗುವ ಮೂಲಕ ಮಾದರಿ ವ್ಯಕ್ತಿಯಾಗಿ, ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

ಪೀರು ಪವಾರ್ ಅವರಿಗೆ ನಾಲ್ವರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು ಊರಲ್ಲೇ ನೆಲೆಸಿದರೆ, ಗಂಡು ಮಕ್ಕಳಾದ ರವಿ ಹಾಗೂ ಮೋಹನ್‌‌ ತಮ್ಮ ತಂದೆ-ತಾಯಿ ಜೊತೆಗೆ 13 ವರ್ಷಗಳ ಹಿಂದೆ ಮಂಗಳೂರಿಗೆ ಬಂದರು. ಕೂಲಿ ಕೆಲಸ ಮಾಡುತ್ತಿದ್ದ ಪೀರು ಕುಟುಂಬ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಪಾಳು ಬಿದ್ದಿರುವ ಕಾರ್ಖಾನೆಯೊಂದರ ಕಟ್ಟಡದಲ್ಲಿ (ಶುಕೂರು ಅವರಿಗೆ ಸೇರಿದ ಕಟ್ಟಡ) ವಾಸ ಮಾಡಿದ್ದರು. ಅಲ್ಲೇ ಪಕ್ಕದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ರವಿ 8ನೇ ತರಗತಿ, ಮೋಹನ್ 5ನೇ ತರಗತಿಗೆ ಸೇರಿದರು. ಹಾಗಂತ ಅವರೇನೂ ಸುಮ್ಮನೆ ಕೂತಿರಲಿಲ್ಲ. ಶಾಲೆ ಮುಗಿದ ತಕ್ಷಣ ಅಣ್ಣ-ತಮ್ಮ ತಂದೆ-ತಾಯಿ ಜೊತೆಗೆ ತಾವೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಬಳ್ಳಾರಿಯಿಂದ ಎನ್‌‌ಎಂಪಿಟಿಗೆ ರೈಲಿನಲ್ಲಿ ಬರುತ್ತಿದ್ದ ಅದಿರನ್ನು ಖಾಲಿ ಮಾಡಿದರೆ ಒಂದು ಬೋಗಿಗೆ 900 ರೂ. ಸಿಗುತ್ತಿತ್ತಂತೆ.

Also Read  ನ.19ರಂದು ಯಕ್ಷಗಾನ ಅಕಾಡೆಮಿ ವತಿಯಿಂದ ವಿವಿಧ ಪ್ರಶಸ್ತಿ ಪ್ರದಾನ


ಹೀಗೆ ಮೂಲಭೂತ ಸೌಕರ್ಯವೇ ಇಲ್ಲದ ಮನೆ ಎಂಬ ನಾಲ್ಕು ಗೋಡೆಗಳಿರುವ ಕಟ್ಟಡದಲ್ಲಿ ದೀಪದಲ್ಲೇ ಮಕ್ಕಳು ಓದು ನಡೆಸಿದರು. ಆದರೆ, ರವಿ ಎಸ್‌ಎಸ್‌ಎಲ್‌ಸಿಯಲ್ಲಿ 523 ಅಂಕಗಳೊಂದಿಗೆ ಶಾಲೆಗೆ ಟಾಪರ್‌ ಆಗಿ ಮಿಂಚಿದಾಗ ಈ ಹುಡುಗ ಏನಾದರೂ ಸಾಧನೆ ಮಾಡುತ್ತಾನೆಂದು ಆಗಲೇ ಶಿಕ್ಷಕರು ಅಂದುಕೊಂಡರಂತೆ. ಈ ಕುಟುಂಬವನ್ನು ಕಂಡ ಮಂಗಳೂರಿನ ವೈದ್ಯ ಚಂದ್ರಶೇಖರ್‌ ಹುಡುಗನಿಗೆ ವಿಜ್ಞಾನ ವಿಷಯದಲ್ಲಿ ಶಿಕ್ಷಣ ಮುಂದುವರಿಯಲು ಸಲಹೆ ನೀಡಿದರು. ಅದರಂತೆ ಗೋಕರ್ಣನಾಥ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿ ನಂತರ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇನ್ಫಾರ್ಮೇಶನ್‌ ಸೈನ್ಸ್‌ ಓದಿದರು. ಆಗ ಮನೆಯ ಪರಿಸ್ಥಿತಿ ಇನ್ನೂ ಹದಗೆಟ್ಟಿತು.

ತಂದೆ ಪೀರು ಸಹೋದರಿಯರು ಹಾಗೂ ಇಬ್ಬರು ಹೆಣ್ಣುಮಕ್ಕಳ ಮದುವೆ ಮಾಡಿ ಸಾಲದಲ್ಲಿದ್ದರು. ತಾಯಿ ಸುಮಿತ್ರಾ ಕೂಲಿ ಜೊತೆಗೆ ಗುಜರಿ ಹೆಕ್ಕಿ ರವಿ ಓದಿಗೆ ಇನ್ನಷ್ಟು ನೆರವಾದರು. ರವಿ ಕೂಡಾ ಕೂಲಿ ಕೆಲಸಕ್ಕೆ ಹೋದರು. ಸೋದರ ಮೋಹನ್‌ ಕೂಡಾ ಅಣ್ಣನಿಗಾಗಿ ಎಸ್‌ಎಸ್‌ಎಲ್‌ಸಿ ಬಳಿಕ ಶಿಕ್ಷಣ ಮೊಟಕುಗೊಳಿಸಿದರು. ಎಂಜಿನಿಯರಿಂಗ್‌ ಪದವಿ ಪಡೆದ ಮೇಲೆ ಕೆಲದಿನ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ನೌಕರಿ ಮಾಡಿದರು. ಆದರೆ, ರವಿ ಅಷ್ಟಕ್ಕೇ ತೃಪ್ತಿ ಪಡಲಿಲ್ಲ. ಮುಂದೇನು ಎಂದು ಯೋಚಿಸುವಾಗಲೇ ಅದೊಂದು ದಿನ ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗೂ ಅರ್ಜಿ ಸಲ್ಲಿಸಿದ್ದರು.

Also Read  ಇಂದು ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣಾ ವೇಳಾಪಟ್ಟಿ ಪ್ರಕಟ

ಪರೀಕ್ಷೆಯಲ್ಲಿ 22ನೇ ಸ್ಥಾನ ಪಡೆದಾಗ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದೀಗ ಎರಡು ವರ್ಷಗಳ ಪ್ರೊಬೇಷನರಿ ಅವಧಿ ಮುಗಿಸಿ ಕೊಣಾಜೆ ಠಾಣೆಯಲ್ಲಿ ಪೂರ್ಣಕಾಲಿಕ ಸಬ್‌ಇನ್ಸ್‌ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಟುಂಬ ಸಮೇತರಾಗಿ ಅಸೈಗೋಳಿಯಲ್ಲಿರುವ ಪೊಲೀಸ್‌ ವಸತಿ ಗೃಹದಲ್ಲಿ ನೆಲೆಸಿದ್ದಾರೆ. ತಮ್ಮ ಮೋಹನ್‌ ಶಿವಮೊಗ್ಗದಲ್ಲಿ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೊನೆಗೂ ಕಷ್ಟದ ಜೀವನ ಕೊನೆಗೊಂಡಿತು. ಕೂಲಿ-ನಾಲಿ ಮಾಡಿಯಾದರೂ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಕ್ಕೆ ಅದರ ಫಲ ಉಣ್ಣುತ್ತಿದ್ದೇವೆ ಎನ್ನುವ ಮೂಲಕ ಮಕ್ಕಳ ಸಾಧನೆ ಕಂಡು ತಂದೆ-ತಾಯಿ ಕಣ್ಣೀರು ಹಾಕಿದರು. ಇನ್ನು ರವಿ ಪವಾರ್ ತಮ್ಮ ಮುಂದಿನ ಗುರಿ ಸಾಧನೆಗಾಗಿ ಕೆಎಎಸ್‌ ಪರೀಕ್ಷೆಗೆ ತಯಾರಿ ಸಹ ನಡೆಸುತ್ತಿದ್ದಾರೆ.

error: Content is protected !!
Scroll to Top