ಮಕ್ಕಳ ರಕ್ಷಣೆಯಲ್ಲಿ ವೈಯ್ಯಕ್ತಿಕ ಗಮನ ಹರಿಸಬೇಕು ➤ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಸಲಹೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 05. ಮಕ್ಕಳ ರಕ್ಷಣೆಯ ಕೆಲಸದಲ್ಲಿ ತೊಡಗಿರುವ ಅಧಿಕಾರಿಗಳು ಆ ಕಾರ್ಯಕ್ಕೆ ವೈಯಕ್ತಿಕವಾಗಿ ಹೆಚ್ಚಿನ ಗಮನ ಹರಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ. ನಾಗಣ್ಣ ಗೌಡ ಅವರು ಸಲಹೆ ನೀಡಿದರು. ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರ್.ಟಿ.ಇ -2009, ಪೋಕ್ಸೋ-2021 ಹಾಗೂ ಬಾಲ ನ್ಯಾಯ ಕಾಯ್ದೆ-2015ರ ಅನುಷ್ಠಾನದ ಕುರಿತು ಭಾಗಿದಾರರೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿವೃತ್ತಿಯಾದ ನಂತರವೂ ಅಧಿಕಾರಿಗಳ ಪಾಲಿಗೆ ಮಕ್ಕಳ ರಕ್ಷಣೆಯ ಸಂದರ್ಭದಲ್ಲಿ ಮಾಡುವ ಸೇವೆ ಮಾತ್ರ ಶಾಶ್ವತವಾಗಿ ಉಳಿಯುತ್ತದೆ, ಅದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಇಲಾಖೆಗಳು ಪರಸ್ಪರ ಸಹಕಾರದಿಂದ ಈ ಕಾರ್ಯದಲ್ಲಿ ತೊಡಗಿದರೆ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬಹುದಾಗಿದೆ.‌ಮಕ್ಕಳ ಏಳಿಗೆಯಲ್ಲಿ ಒದಗಿಸುವ ಸಂಪನ್ಮೂಲಗಳನ್ನು ನೇರವಾಗಿ ಅವರಿಗೆ ತಲುಪುವಂತಾಗಬೇಕು, ಅದರಲ್ಲಿ ಯಾವುದೇ ರೀತಿಯ ಲೋಪಗಳಿಗೆ ಅವಕಾಶವಿರಬಾರದು ಎಂದರು. ನಿಜ ಹೇಳಬೇಕೆಂದರೆ ಮಕ್ಕಳ ರಕ್ಷಣಾ ಕಾರ್ಯ ನಾಲ್ಕು ತಿಂಗಳ ಗರ್ಭದಿಂದಲೇ ಆರಂಭವಾಗುತ್ತದೆ. ಈ ವೇಳೆ ಗರ್ಭಿಣಿಯರು ರಕ್ತಹೀನತೆಯಿಂದ ಬಳಲಬಾರದು.‌ ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಮಕ್ಕಳ ಬೆಳವಣಿಗೆ ಸಮಗ್ರವಾಗಿ ತಾಯಿಯ ಗರ್ಭದಿಂದಲೇ ಆಗಬೇಕು ಗರ್ಭಿಣಿಯರ ಆರೋಗ್ಯ ಸುಧಾರಿಸಬೇಕು ಇದಕ್ಕಾಗಿ ಆರೋಗ್ಯ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.

Also Read  ಅರಣ್ಯ ಭೂಮಿ ಸಮೀಕ್ಷೆಗೆ 15 ದಿನಗಳಲ್ಲಿ ಸಮಿತಿ ರಚನೆ: ರಾಜ್ಯ ಸರ್ಕಾರ


ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ನ್ಯಾಯಾಧೀಶರಾದ ಶೋಭಾ ಬಿ.ಜಿ. ಅವರು ಮಾತನಾಡಿ, ಮಕ್ಕಳ ರಕ್ಷಣಾ ಕಾರ್ಯದಲ್ಲಿ ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿಗೆ ಬರುವ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು.‌ ಈ ಇಲಾಖೆಗಳ ನಡುವೆ ಸಂಬಂಧ ಉತ್ತಮಗೊಳ್ಳಬೇಕು, ಮಕ್ಕಳ ರಕ್ಷಣಾ ಕಾರ್ಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ನೆರವು ಬೇಕಿದ್ದಲ್ಲಿ ತಮಗೆ ನೇರವಾಗಿ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು. ಜಿಲ್ಲೆಯ ಮಕ್ಕಳ ರಕ್ಷಣೆ ಕುರಿತಂತೆ ವಿವಿಧ ಇಲಾಖೆಗಳ ಪಾತ್ರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ., ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದಕುಮಾರ್ ಹಾಗೂ ಪೊಲೀಸ್ ಅಪರ ವರಿಷ್ಠಾಧಿಕಾರಿ ವೇದಿಕೆಯಲ್ಲಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಾಪ ಭೋವಿ ಸ್ವಾಗತಿಸಿದರು. ಜಿಲ್ಲೆಯ ಇಲಾಖೆಗಳ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಡಿಪಿಓಗಳು, ಸ್ವಯಂಸೇವಾ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.

Also Read  ಶಾಲಾ-ಕಾಲೇಜು ದೋಚುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ     

error: Content is protected !!
Scroll to Top