(ನ್ಯೂಸ್ ಕಡಬ) newskadaba.com ಕಡಬ, ಡಿ.08. ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ‘ಯೋಗಕ್ಷೇಮ’ ಸಹಕಾರ ಸೌಧದ ಉದ್ಘಾಟನಾ ಸಮಾರಂಭ ಡಿಸೆಂಬರ್ 24 ನೇ ಭಾನುವಾರದಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುಂದರ ಗೌಡ ಮಂಡೆಕರ ಹೇಳಿದರು.
ಅವರು ಶುಕ್ರವಾರ ಕಟ್ಟಡದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕಡಬ ಶ್ರೀಕಂಠ ಸ್ವಾಮಿ ಮಹಾಗಣಪತಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದ ಬಳಿಕ ಬ್ಯಾಂಕಿನ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಸಂಘದ ನೂತನ ಕಟ್ಟಡ ಸುಮಾರು ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದರಲ್ಲಿ ಹವಾನಿಯಂತ್ರಿತ ಆಡಳಿತ ಕಛೇರಿ, ಅತಿಥಿಗೃಹ, ಸಭಾಕೊಠಡಿ, ಸೇಫ್ ಲಾಕರ್ ವ್ಯವಸ್ಥೆ, 6000 ಚದರ ಅಡಿ ವಿಸ್ತೀರ್ಣದ ಗೋದಾಮು ಸೇರಿದಂತೆ ಸುಸಜ್ಜಿತ ವ್ಯವಸ್ಥೆಗಳೊಂದಿಗೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಸೌರ ವಿದ್ಯುತ್ ಅಳವಡಿಸಿ ವಿದ್ಯುತ್ ಬಳಕೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಈಗಾಗಲೇ ಬ್ಯಾಂಕಿನ ಸದಸ್ಯರು ತಮ್ಮ ಲಾಭಾಂಶದಲ್ಲಿ ಶೇ 3 ರಷ್ಟು ನೀಡಿದ್ದಾರೆ. ಒಟ್ಟು ಮೂರು ಲಕ್ಷ ರೂ ವೆಚ್ಚದಲ್ಲಿ ಸೋಲಾರ್ ಅಳವಡಿಕೆಯನ್ನು ಇನ್ನು ಒಂದು ವಾರದಲ್ಲಿ ಮಾಡಲಾಗುವುದು. ನೂತನ ಕಟ್ಟಡ ಉದ್ಘಾಟನೆಯಾಗಿ ಎಲ್ಲಾ ಬ್ಯಾಂಕಿಂಗ್ ವ್ಯವಹಾರ ಅಲ್ಲಿ ಪ್ರಾರಂಭಿಸಲಿದೆ. ಬಳಿಕ ನೂತನ ಕಟ್ಟಡದ ಮುಂದುವರಿದ ಭಾಗವಾದ ವಾಣಿಜ್ಯ ಸೇರಿದಂತೆ ಇತರ ಉದ್ದೇಶಗಳಿಗೆ ಸುಮಾರು 2.5 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗುವುದು. 2018 ಒಳಗೆ ಕಟ್ಟಡ ಕಾಮಗಾರಿ ಮುಗಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ ಎಂದು ಹೇಳಿದ ಸುಂದರ ಗೌಡ ಇದೀಗ ನೂತನ ಕಟ್ಟಡದ ಉದ್ಘಾಟನೆಗೆ ಮುನ್ನ ಡಿಸೆಂಬರ್ 14 ಮತ್ತು 15 ರಂದು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದರು.
ನೂತನ ಕಟ್ಟಡವನ್ನು ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರಕುಮಾರ್ ಉದ್ಘಾಟಿಸಲಿದ್ದಾರೆ. ಸುಳ್ಯ ಶಾಸಕ ಎಸ್.ಅಂಗಾರ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಭಧ್ರತಾ ಕೊಠಡಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಆಡಳಿತ ಸಭಾ ಭವನವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಲಿದ್ದಾರೆ. ಗೋದಾಮು ಕಟ್ಟಡವನ್ನು ನಬಾರ್ಡ್ ಸಂಸ್ಥೆಯ ಮಂಗಳೂರು ವಿಭಾಗದ ಎ.ಜಿ.ಎಂ ಹರೀಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಲಾಕರ್ನ ಪ್ರಥಮ ಕೀ ಹಸ್ತಾಂತರವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ. ವರ್ಗೀಸ್ ನೆರವೇರಿಸಲಿದ್ದಾರೆ. ಸಹಕಾರ ಭಾರತಿಯ ರಾಜ್ಯ ಸಂಘಟನಾ ಪ್ರಮುಖ್, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್, ಪುತ್ತೂರು ತಾಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೆಶಕ ಶಶಿಕುಮಾರ್ ಬಾಲ್ಯೊಟ್ಟು, ಪುತ್ತೂರು ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷ ಎ.ಬಿ.ಮನೋಹರ ರೈ, ಸಹಕಾರಿ ಸಂಘಗಳ ದ.ಕ ಜಿಲ್ಲಾ ಉಪನಿಬಂಧಕ ಬಿ.ಕೆ.ಸಲೀಂ, ಪುತ್ತೂರು ಸಹಾಯಕ ನಿಬಂಧಕ ಗೋಪಾಲಯ್ಯ ಎನ್.ಕೆ, ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು ಮುಗೇರ ತುಂಬೆತಡ್ಕ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ರಮೇಶ್ ಕಲ್ಪುರೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಚಾಕೋ, ನಿರ್ದೆಶಕರಾದ ಸೀತಾರಾಮ ಗೌಡ ಪೊಸವಳಿಕೆ, ಪುವಪ್ಪ ಗೌಡ ಐತ್ತೂರು, ನಿತ್ಯಾನಂದ ಗೌಡ ಬೊಳ್ಳಾಜೆ, ರಘುಚಂದ್ರ ಕೆ, ಸುದರ್ಶನ ಗೌಡ ಕೋಡಿಂಬಾಳ, ರಾಜೀವಿ, ಲೀಲಾವತಿ ಅಮ್ಮು ಶೆಟ್ಟಿ, ಅಂಗಜ, ಮೊದಲಾದವರು ಉಪಸ್ಥಿತರಿದ್ದರು.