(ನ್ಯೂಸ್ ಕಡಬ) newskadaba.com ಬೆಂಗಳೂರು. ಜ. 02. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರಿಂದ ಕೋಪಗೊಂಡ ಅಬಕಾರಿ ಇನ್ಸ್ ಪೆಕ್ಟರ್ ಬಾರ್ ಗೆ ಬೆಂಕಿ ಹಚ್ಚಿಸಿರುವ ಘಟನೆ ನಗರದ ಸುಂಕದಕಟ್ಟೆಯಲ್ಲಿ ಸಂಭವಿಸಿದೆ.
ಕೆಂಗೇರಿ ವಲಯ ಅಬಕಾರಿ ಇನ್ಸ್ ಪೆಕ್ಟರ್ ಮಂಜುನಾಥ ಬೆಂಕಿ ಹಚ್ಚಿಸಿದ ಅಧಿಕಾರಿ ಎಂದು ತಿಳಿದುಬಂದಿದೆ. ಈತನ ವಿರುದ್ದ ಬಾರ್ ಮಾಲೀಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾರ್ ಗೆ ಬೆಂಕಿ ಹಚ್ಚಿದ್ದು, ಒಟ್ಟು 45 ಲಕ್ಷಕ್ಕೂ ಹೆಚ್ಚು ಮೌಲ್ಯದ ನಗದು ಮತ್ತು ಮದ್ಯ ಬೆಂಕಿಗಾಹುತಿಯಾಗಿದೆ. ಮೊದಲು ಇದು ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದೆ ಎಂದು ಭಾವಿಸಲಾಗಿತ್ತು. ಆದರೆ, ಬೆಸ್ಕಾಂ ಅಧಿಕಾರಿಗಳು ಶಾರ್ಟ್ ಸರ್ಕ್ಯೂಟ್ ನಿಂದ ಅಪಘಾತ ಸಂಭವಿಸಿಲ್ಲ ಎಂದ ವರದಿ ನೀಡಿದ್ದಾರೆ ಎನ್ನಲಾಗಿದೆ.
ಅಬಕಾರಿ ಇನ್ಸ್ ಪೆಕ್ಟರ್ ಮಂಜುನಾಥ್ 15 ಲಕ್ಷ ಬೇಡಿಕೆ ಇಟ್ಟಿದ್ದರು. ಅದಕ್ಕೆ, ಬಾರ್ ಮಾಲೀಕ ರಾಮಕೃಷ್ಣ ಬಂಗಾರ ಅಡ ಇಟ್ಟು 10 ಲಕ್ಷ ಹಣ ಕೊಟ್ಟಿದ್ದರು. ಉಳಿದ ಐದು ಲಕ್ಷ ಕೊಡಲೇಬೇಕು ಎಂದು ಒತ್ತಾಯಿಸಿದ್ದರು. ಇದರಿಂದ ಬೇಸತ್ತ ರಾಮಕೃಷ್ಣ ಎಸಿಬಿಗೆ ದೂರು ನೀಡಿದ್ದರು. ಇದೇ ಪ್ರಕರಣದಲ್ಲಿ ಎಸಿಬಿ ದಾಳಿಗೆ ಒಳಗಾಗಿ ಇನ್ಸ್ ಪೆಕ್ಟರ್ ಮಂಜುನಾಥ್ ಬಂಧನಕ್ಕೊಳಗಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ರಾಮಕೃಷ್ಣ ಅವರ ಮಾಲಿಕತ್ವದ ಬಾರ್ ಗೆ ಬೆಂಕಿ ಇರಿಸಿದ ಗಂಭೀರ ಆರೋಪ ಕೇಳಿ ಬಂದಿದೆ ಎಂದು ವರದಿಯಾಗಿದೆ.