(ನ್ಯೂಸ್ ಕಡಬ) newskadaba.com ಕಡಬ, ಡಿ.06. ಉಪ್ಪಿನಂಗಡಿ-ಕಡಬ-ಸಬ್ರಹ್ಮಣ್ಯ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಏಣಿತಡ್ಕ-ಗೋಳಿತ್ತಡಿ ರಸ್ತೆಯ ಸುಮಾರು ಒಂದೂವರೆ ಕಿಲೋಮೀಟರ್ ಉದ್ದ ರಸ್ತೆಗೆ ಡಾಮರೀಕರಣಕ್ಕಾಗಿ ಮಂಗಳವಾರ ಸಂಜೆ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ರಾಮಕುಂಜದ ಗೋಳಿತ್ತಡಿಯಲ್ಲಿ ನಾಮ ಫಲಕ ಅನಾವರಣ ಮಾಡುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ಉದನೆಯಲ್ಲಿ ರಸ್ತೆ ಡಾಮರೀಕರಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಬಳಿಕ ಶಾಂತಿಮೊಗೇರು ನೂತನ ಸೇತುವೆ ಉದ್ಘಾಟನೆ ಮಾಡಿದ ಸಚಿವರು ಸಂಜೆ ತರಾತುರಿಯಲ್ಲಿ ಗೋಳಿತ್ತಡಿಯಲ್ಲಿ ನಬಾರ್ಡ್ ಯೋಜನೆಯಡಿ ಸುಮಾರು 49 ಲಕ್ಷ ರೂನಲ್ಲಿ ನಡೆಯುವ ಕಾಮಗಾರಿಗೆ ಶಿಲಾನ್ಯಾಸ ನೆವೇರಿಸಿದರು.
ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ|ರಘು ಬೆಳ್ಳಿಪ್ಪಾಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ, ರಾಜ್ಯ ಸಮಾಜಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಕಾಂಗ್ರೇಸ್ ಮುಖಂಡರಾದ ಆದಂ ಪಿಕುಡೇಲ್, ಯತೀಶ್ ಮೊದಲಾದವರು ಉಪಸ್ಥಿತರಿದ್ದರು.
ಒಮ್ಮೆ ಗುದ್ದಲಿಪುಜೆ, ಮತ್ತೊಮ್ಮೆ ಶಂಕುಸ್ಥಾಪನೆ:
ಗೋಳಿತ್ತಡಿ-ಏಣಿತಡ್ಕ ರಸ್ತೆಗೆ ಗೋಳಿತ್ತಡಿಯಿಂದ ಸುಮಾರು ಒಂದೂವರೆ ಕಿಲೋಮೀಟರ್ನಷ್ಟು ದೂರ ಡಾಮರೀಕರಣಕ್ಕೆ ಅನುದಾನ ಮಂಜೂರಾಗಿದ್ದು ಇದರ ಶಂಕುಸ್ಥಾಪನೆಗೆ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಆಗಮಿಸಲಿದ್ದಾರೆ ಎಂದು ಗೋಳಿತ್ತಡಿ ಪರಿಸರದಲ್ಲಿ ಕಾಂಗ್ರೇಸ್ ಮುಖಂಡರು ಹೇಳಿಕೊಂಡಿದ್ದರು. ಮಾತ್ರವಲ್ಲ ಬ್ಯಾನರ್ ಕೂಡಾ ಹಾಕಲಾಗಿತ್ತು. ಉದನೆಗೆ ಆಗಮಿಸುವ ಸಚಿವ ಮಹದೇವಪ್ಪನವರು ಗೋಳಿತ್ತಡಿಗೂ ಆಗಮಿಸುತ್ತಾರೆ ಎನ್ನುವ ಬಾರೀ ಪ್ರಚಾರ ಮಾಡಲಾಗಿತ್ತು. ಯಾವತ್ತು ಸಚಿವರು ಉದನೆಗೆ ಆಗಮಿಸುವುದಿಲ್ಲ ಎನ್ನುವ ಸುಳಿವು ದೊರೆಯಿತೋ ಆಗ ಇಲ್ಲಿನ ಕಾಂಗ್ರೇಸ್ ಮುಖಂಡರ ವರಸೆ ಬದಲಾಯಿತು. ಕಳೆದ ಶನಿವಾರ ಬೆಳಿಗ್ಗೆ 9.30 ರ ವೇಳೆಗೆ ತರಾತುರಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಸರ್ವೋತ್ತಮ ಗೌಡ ಗುದ್ದಲಿಪುಜೆ ನೆರವೇರಿಸಿ ಡಿಸೆಂಬರ್ 6 ರಂದು ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿಕೆ ನೀಡಲಾಯಿತು. ಇದಾದ ನಾಲ್ಕೇ ದಿನದಲ್ಲಿ ಮತ್ತೊಂದು ಬೆಳವಣಿಗೆ ನಡೆಯಿತು. ಉದನೆಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವರನ್ನು ಹೇಗಾದರು ಮಾಡಿ ಗೋಳಿತ್ತಡಿಗೆ ಕರೆಸಬೇಕೆಂದು ಇಲ್ಲಿನ ಕಾಂಗ್ರೇಸ್ ಮುಖಂಡರು ಸಚಿವ ರೈ ಅವರಿಗೆ ದುಂಬಾಲು ಬಿದ್ದರು. ಪರಿಣಾಮ ಈಗಾಲೇ ಗುದ್ದಲಿಪುಜೆ ನೆರವೇರಸಿದ ಗೋಳಿತ್ತಡಿ ರಸ್ತೆ ಕಾಮಗಾರಿಗೆ ಮಂಗಳವಾರ ಸಂಜೆ ಮತ್ತೊಮ್ಮೆ ಶಂಕುಸ್ಥಾಪನೆ ಮಾಡಲಾಯಿತು. ಒಂದೇ ದಿನದಲ್ಲಿ ಕಾರ್ಯಕ್ರಮ ನಿಗದಿ ಮಾಡಿ ಮಧ್ಯಾಹ್ನದ ವೇಳೆಗೆ ಬ್ಯಾನರ್ಗಳನ್ನು ಹಾಕಿ, ನಾಮಫಲಕವನ್ನು ತಂದು ಸ್ಥಾಪನೆ ಮಾಡಲಾಗಿತ್ತು.
ನಾಮಫಲಕದಲ್ಲಿ ಸುಳ್ಯ ಶಾಸಕ ಎಸ್.ಅಂಗಾರ ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳ ಹೆಸರಗಳನ್ನು ಹಾಕಲಾಗಿದ್ದರೂ ಅವರ್ಯಾರು ಶಂಕುಸ್ಥಾಪನಾ ಕಾರ್ಯದಲ್ಲಿ ಕಾಣಿಸಿಕೊಂಡಿಲ್ಲ. ಅಷ್ಟೇ ಏಕೆ ಸಚಿವರೊಂದಿಗೆ ಆಗಮಿಸಿದ್ದ ಕೆಲವು ಪ್ರಭಾವಿ ಕಾಂಗ್ರೇಸ್ ಮುಖಂಡರು ಕೂಡಾ ಪಕ್ಕದಲ್ಲೇ ಇದ್ದರೂ ಶಂಕುಸ್ಥಾಪನೆ ನಡೆಸುವ ಹತ್ತಿರ ಸುಳಿಯಲಿಲ್ಲ. ಒಟ್ಟಾರೆ ಒಂದೇ ರಸ್ತೆಗೆ ಎರಡೆರುಡು ಬಾರಿ ಗುದ್ದಲಿ ಪುಜೆ ಶಂಕುಸ್ಥಾಪನೆ ಎಂದು ಮಾಡುವ ಮೂಲಕ ಜನರಲ್ಲಿ ಗೊಂದಲ ಏರ್ಪಟ್ಟಿತ್ತು. ಇದೆಲ್ಲಾ ಚುನಾವಣೆ ಹತ್ತಿರ ಬರುವಾರ ಸಾಮಾನ್ಯ ಸಂಗತಿ ಎಂದು ಇಲ್ಲಿ ನಾಗರೀಕರು ಸುಮ್ಮನಾಗಿದ್ದಾರೆ. ಏನೇ ಆಗಲಿ ಎಕ್ಕುಟ್ಟು ಹೋಗಿರುವ ರಸ್ತೆಗೆ ಕಳೆದ ನಾಲ್ಕು ವರ್ಷಗಳಿಂದ ಡಾಮರೀಕರಣದ ಭರವಸೆ ನೀಡುತ್ತಾ ಬಂದವರು ಇನ್ನೇನು ಕೆಲವೇ ತಿಂಗಳು ಚುನಾವಣೆಗೆ ಬಾಕಿಯಿರುವಾಗಲಾದರೂ ಡಾಮರೀಕರಣ ಮಾಡಿಸುತ್ತಾರಲ್ಲಾ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.