ಸಂಸದ ಪ್ರತಾಪ್ ಸಿಂಹ ‘ಪ್ರತಾಪ’ಕ್ಕೆ ಬಿಜೆಪಿಯಲ್ಲಿಯೇ ಅಸಮಾಧಾನ ► ಬಿಜೆಪಿ ಹೈಕಮಾಂಡ್ ಗೆ ರಾಜ್ಯ ಘಟಕದಿಂದ ದೂರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.06. ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ನಡವಳಿಕೆಯು ಬಿಜೆಪಿ ವಲಯದಲ್ಲೇ ಬೇಸರ ಸೃಷ್ಟಿಸಿದ್ದು, ಪಕ್ಷದ ಹೈಕಮಾಂಡ್‍ಗೆ ಅವರ ವಿರುದ್ಧ ರಾಜ್ಯ ಘಟಕದ ಕೆಲವರು ದೂರು ನೀಡಿದ್ದಾರೆ.

ಯುವಮೋರ್ಚಾ ಕಾರ್ಯಕರ್ತರನ್ನು ಹುರಿದುಂಬಿಸಲು ಹೋಗಿ ಫೇಸ್‍ಬುಕ್‍ನಲ್ಲಿ ಲೈವ್ ಕೊಟ್ಟು ಪಕ್ಷದೊಳಗೆ ನಡೆದ ವಿಷಯಗಳನ್ನು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಹೆಸರನ್ನು ಅನಗತ್ಯವಾಗಿ ಎಳೆದು ತಂದು ಮುಜುಗರ ತಂದಿದ್ದಾರೆ ಅಲ್ಲದೇ ಪಕ್ಷಕ್ಕೆ ಮತ್ತಷ್ಟು ಇರಿಸು-ಮುರಿಸು ಉಂಟಾಗುವಂತೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

ಅವರು ಈ ಹಿಂದೆಯೂ ಗುಂಡ್ಲುಪೇಟೆ-ನಂಜನಗೂಡು ಉಪಚುನಾವಣೆ ಸಂದರ್ಭದಲ್ಲಿ ಮಹದೇವ ಪ್ರಸಾದ್ ಅವರ ಪತ್ನಿ ಮೋಹನ್‍ಕುಮಾರಿ ಅವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿ ಮುಜುಗರ ಉಂಟುಮಾಡಿದ್ದರು. ಇದೀಗ ಹುಣಸೂರಿನಲ್ಲಿ ಹನುಮ ಜಯಂತಿ ಕಾರ್ಯಕ್ರಮಕ್ಕೆ ತೆರಳುವಾಗ ಅನಗತ್ಯವಾಗಿ ಪೊಲೀಸ್ ಬ್ಯಾರಿಕೇಡ್ ಮೇಲೆ ಕಾರು ಹತ್ತಿಸಿ ಮತ್ತೆ ವಿವಾದ ಎಳೆದುಕೊಂಡಿದ್ದಾರೆ.

Also Read  ಸವಣೂರು : ಇನ್ಸ್ಟಾಗ್ರಾಂ ಮೂಲಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮೆಸ್ಕಂ ಉದ್ಯೋಗಿ ➤ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡಲು ಸಾಕಷ್ಟು ಅಸ್ತ್ರಗಳಿರುವಾಗ ಪ್ರತಾಪ್ ಸಿಂಹ ಹೋರಾಟ ಮಾಡಲು ಹೋಗಿ ವಿವಾದ ಹುಟ್ಟುಹಾಕುವುದರ ಮೂಲಕ ಪಕ್ಷಕ್ಕೆ ಹಾಗೂ ಪಕ್ಷದ ನಾಯಕರಿಗೆ ಮುಜುಗರ ಉಂಟುಮಾಡುತ್ತಿದ್ದಾರೆ ಎಂದು ಬಿಜೆಪಿ ಹೈಕಮಾಂಡ್‍ಗೆ ರಾಜ್ಯ ಘಟಕದ ಕೆಲವರು ವರದಿ ನೀಡಿದ್ದಾರೆ. ಅಲ್ಲದೆ, ರಾಜ್ಯಾಧ್ಯಕ್ಷರಿಗೂ ಪ್ರತಾಪ್ ಸಿಂಹ ವಿರುದ್ಧ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

error: Content is protected !!
Scroll to Top