(ನ್ಯೂಸ್ ಕಡಬ) newskadaba.com ಮಂಡ್ಯ, ಡಿ.03. ರಾಜ್ಯ ಸರಕಾರದ ಬಹು ನಿರೀಕ್ಷಿತ ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್, ಅಣ್ಣ ಕ್ಯಾಂಟೀನ್ ಮಾದರಿಯ ಕೆಲವು ಕ್ಯಾಂಟೀನ್‍ಗಳು ಬಡವರಿಗೆ ಕಡಿಮೆ ದರದಲ್ಲಿ ಹೊಟ್ಟೆ ತುಂಬಿಸುತ್ತಿವೆ. ಇದರ ಜೊತೆಗೆ ಇದೀಗ ಕಡಿಮೆ ದರದಲ್ಲಿ ಊಟ ತಿಂಡಿ ನೀಡುವ ‘ರಮ್ಯಾ ಕ್ಯಾಂಟೀನ್’ ಭಾನುವಾರದಿಂದ ಸೇರ್ಪಡೆಯಾಗಿದೆ.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದ ಪಕ್ಕದ ರಸ್ತೆ ಬದಿಯಲ್ಲಿ ತಳ್ಳುಗಾಡಿಯಲ್ಲಿ ಹೊಟೇಲ್ ನಡೆಸುತ್ತಿದ್ದ ರಘು ಎಂಬವರು ಜಿಲ್ಲಾಸ್ಪತ್ರೆ ಸಮೀಪ ರಮ್ಯಾ ಕ್ಯಾಂಟೀನ್ ತೆರೆದಿದ್ದು, ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ರಮ್ಯಾ ಸ್ಪರ್ಧಿಸಲಿದ್ದಾರೆಂಬ ಗುಮಾನಿಯ ಬೆನ್ನಲ್ಲೇ ರಮ್ಯಾ ಹೆಸರಿನ ಕ್ಯಾಂಟೀನ್ ದಿಢೀರ್ ಆರಂಭವಾಗಿರುವುದು ರಮ್ಯಾ ರಾಜಕೀಯ ಪ್ರವೇಶದ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.
ರಮ್ಯಾ ಹೆಸರಿನಲ್ಲಿ ಕ್ಯಾಂಟೀನ್ ತೆರೆದಿರುವುದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ. ರಮ್ಯಾ ಅಭಿಮಾನಿಯಾಗಿ ಕ್ಯಾಂಟೀನ್‍ಗೆ ಅವರ ಹೆಸರಿಟ್ಟಿದ್ದೇನೆ. 10 ರೂ.ಗೆ ತಿಂಡಿ, ಅನ್ನಸಾಂಬಾರ್ ನೀಡಲು ಉದ್ದೇಶಿಸಿದ್ದೇನೆ ಎಂದು ಮಾಲೀಕ ರಘು ಸ್ಪಷ್ಟಪಡಿಸಿದ್ದಾರೆ.