(ನ್ಯೂಸ್ ಕಡಬ) newskadaba.com ಹಾಸನ, ಡಿ. 28. ಕೊರಿಯರ್ ಮೂಲಕ ಬಂದಿದ್ದ ಮಿಕ್ಸರ್ ಒಂದು ಸ್ಫೋಟಗೊಂಡಿದ್ದು, ಅಂಗಡಿ ಮಾಲಕ ಗಂಭೀರ ಗಾಯಗೊಂಡಿರುವ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.
ಮಂಗಳವಾರದಂದು ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಸ್‌ಪಿ ಹರಿರಾಮ್ ಶಂಕರ್, ಇದೊಂದು ವೈಯಕ್ತಿಕ ದ್ವೇಷದಿಂದ ನಡೆದಿರುವ ಘಟನೆ ಎಂದು ತಿಳಿಸಿದ್ದಾರೆ. ಇದು ಉಗ್ರ ಸಂಘಟನೆ ಕೈವಾಡವಲ್ಲ, ಬದಲಿಗೆ ಪಾರ್ಸಲ್ ಪಡೆಯಬೇಕಾಗಿದ್ದ ವ್ಯಕ್ತಿಯನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಲಾಗಿದೆ. ಇದರಲ್ಲಿ ಉಗ್ರರು ನಡೆಸುವ ಯಾವುದೇ ರೀತಿಯ ತಂತ್ರಜ್ಞಾನ ಬಳಸಿಲ್ಲ. ಮೈಸೂರಿನ ಎಫ್‌ಎಸ್‌ಎಲ್ ತಂಡ ಕೆಲವು ಅವಶೇಷಗಳನ್ನು ಪಡೆದು ಪರಿಶೀಲಿಸಿದ್ದಾರೆ. ಇದರಲ್ಲಿ ಯಾವುದೇ ಉಗ್ರರ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೊರಿಯರ್ ಪಡೆದು ವಾಪಸ್ ನೀಡಿದವರನ್ನು ಹಾಗೂ ಕೊರಿಯರ್ ಮಾಡಿದವರನ್ನು ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ತನಿಖೆಯಿಂದ ಶೀಘ್ರ ಸತ್ಯಾಂಶ ಹೊರಬೀಳಲಿದೆ ಎಂದರು. ಸುಳ್ಳು ಸುಳ್ಳು ಸುದ್ದಿಗಳನ್ನು ಹಬ್ಬಿಸುವುದನ್ನು ಯಾರೂ ನಂಬಬಾರದು. ಇಲೆಕ್ಟ್ರಾನಿಕ್ ಶಾರ್ಟ್ ಸರ್ಕ್ಯೂರ್ಟ್ ನಿಂದ ಇಷ್ಟೊಂದು ಪ್ರಮಾಣದ ಸ್ಫೋಟವಾಗುವುದಿಲ್ಲ. ಮಿಕ್ಸಿಯಲ್ಲಿ ಸಣ್ಣ ಪ್ರಮಾಣದ ಸ್ಫೋಟಕದ ವಸ್ತುಗಳನ್ನು ಇರಿಸಿ ಸ್ಫೋಟಿಸಲಾಗಿದೆ. ಯಾವುದೇ ಊಹಾಪೋಹಗಳನ್ನು ನಂಬಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.