ದ.ಕ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹೇಮಾವತಿ ವಿ ಹೆಗ್ಗಡೆ ಆಯ್ಕೆ

(ನ್ಯೂಸ್ ಕಡಬ) bewskadaba.com ಮಂಗಳೂರು, ಡಿ. 27. ಫೆ. 3 ರಿಂದ 5ರವರೆಗೆ ನಡೆಯಲಿರುವ 25ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಹೇಮಾವತಿ ವಿ. ಹೆಗ್ಗಡೆ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಉಜಿರೆಯ ರಾಮಕೃಷ್ಣ ಸಭಾ ಮಂಟಪದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ  ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷರಾದ ಡಾ.ಎಂ.ಪಿ.ಶ್ರೀನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ವೀ. ಹೆಗ್ಗಡೆಯವರು ಕರ್ನಾಟಕ ರಾಜ್ಯದ ಲಕ್ಷಾಂತರ ಗ್ರಾಮೀಣ ಮಹಿಳೆಯರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಅವರ ದೂರದೃಷ್ಟಿ ಆಲೋಚನೆಗಳು ಮತ್ತು ಚಿಂತನೆಗಳು ಕರ್ನಾಟಕ ರಾಜ್ಯಾದ್ಯಂತ ವಿವಿಧ ಮಹಿಳಾ ಸಬಲೀಕರಣ ಕಾರ್ಯಕ್ರಮಗಳನ್ನು ರೂಪಿಸಿ ರಾಜ್ಯದ ಗ್ರಾಮೀಣ ಮಹಿಳೆಯರ ಜೀವನದಲ್ಲಿ ಸಮಗ್ರವಾದ ಸಬಲೀಕರಣವನ್ನುಂಟು ಮಾಡಿದೆ. ಜ್ಞಾನವಿಕಾಸ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಅನಕ್ಷರಸ್ಥ ಮಹಿಳೆಯರಿಗೆ ಜೀವನ ಶಿಕ್ಷಣವನ್ನು ಧಾರೆಯೆರೆದಿದ್ದಾರೆ. ಗ್ರಾಮೀಣ ಮಹಿಳೆಯರಿಂದ ಸ್ವಸಹಾಯ ಸಂಘವನ್ನು ರಚಿಸಿ, ಅವರನ್ನು ಸಬಲೀಕರಿಸಿದರು. ವಾತ್ಸಲ್ಯ ಕಾರ್ಯಕ್ರಮದ ಮೂಲಕ ಕುಟುಂಬದವರಿಂದ ನಿರ್ಲಕ್ಷ್ಯಕ್ಕೊಳಗಾದವರಿಗೆ ಆಸರೆಯಾದರು. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮೂಲಕ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣದತ್ತ ಚಿಂತನೆ ನಡೆಸಿದರು. ಹೀಗೆ ಹತ್ತು ಹಲವು ಸಾಮಾಜಿಕ ಕಾರ್ಯಗಳ ಮೂಲಕ ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಅಪಾರ ಸೇವೆ ಸಲ್ಲಿಸಿದ್ದಾರೆ. ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು 1951 ರ ಏಪ್ರಿಲ್ 2 ರಂದು ಪೆರಾಡಿ ಬೀಡಿನಲ್ಲಿ ಶ್ರೀ ರಘುಚಂದ್ರ ಶೆಟ್ಟಿ ಮತ್ತು ಶ್ರೀಮತಿ ಪುಷ್ಪಾವತಿ ದಂಪತಿಗಳಿಗೆ ಜನಿಸಿದರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿದರು. 1972ರ ಡಿಸೆಂಬರ್ 27ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಮದುವೆಯಾದರು. ಬಾಲ್ಯದಿಂದಲೇ ಸಮಾಜ ಸೇವೆಯ ಚಿಂತನೆಯನ್ನು ಹೊತ್ತ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಪೂಜ್ಯ ಹೆಗ್ಗಡೆಯವರ ಸಹಧರ್ಮಿಣಿಯಾದ ನಂತರ ಸೇವಾ ಕೈಂಕರ್ಯಗಳನ್ನು ಕೈಗೊಳ್ಳಲು ಸೇವಾ ಸಾಗರಕ್ಕೇ ಧುಮಿಕಿದಂತಾಯಿತು. ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಸೇವಾ ಪಯಣ ಪ್ರಾರಂಭವಾದದ್ದು ಒಂದು ಸ್ತ್ರೀಶಕ್ತಿಯ ರಚನೆಯೊಂದಿಗೆ ಧರ್ಮಸ್ಥಳದಲ್ಲಿ ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದಿದ್ದ ಸೀಯರನ್ನು ಗುರುತಿಸಿ, ಕನ್ಯಾಕುಮಾರಿ ಯುವತಿ ಮಂಡಳಿಯನ್ನು 1973ರಲ್ಲಿ ಪ್ರಾರಂಭಿಸಿದರು. ಸ್ತ್ರೀಶಕ್ತಿ ಸಂಘದ ಪರಿಕಲ್ಪನೆಯಲ್ಲಿ ಎಲ್ಲ ಮಹಿಳೆಯರು ಆರ್ಥಿಕ ಸ್ವಾವಲಂಬನೆಯ ಬದುಕನ್ನು ನಡೆಸಲು ಕಾರಣೀಭೂತರಾದರು.

Also Read  ಕಾರವಾರ ಬಳಿ ಅಪರೂಪದ 'ಒಕ್ಕಣ್ಣಿನ ನಾಗರಹಾವು' ಪತ್ತೆ

error: Content is protected !!
Scroll to Top