ಬೆಳ್ತಂಗಡಿ: ವಿಧಾನಸಭೆ ಚುನಾವಣೆಗೆ ಎಸ್‌ಡಿಪಿಐ ಪಕ್ಷ ಯಾರಿಗೆ ಮನೆ ಹಾಕಲಿದೆ.?

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 26. ಮುಂಬರುವ ವಿಧಾನಸಭಾ ಕ್ಷೇತ್ರ ಚುನಾವಣೆಯ ಕಾವು ಎಲ್ಲೆಡೆಯೂ ಜೋರಾಗಿದ್ದು ಅದರಂತೆಯೇ ಎಲ್ಲಾ ಪಕ್ಷಗಳು ಅಭ್ಯರ್ಥಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದೆ. ಅದರಂತೆ ಎಸ್‌ಡಿಪಿಐ ಪಕ್ಷವು ಈಗಾಗಲೇ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಕಡೆಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದು, ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಗ್ರಹ ಸ್ಥಳೀಯ ನಾಯಕರಿಂದ ಮತ್ತು ಕಾರ್ಯಕರ್ತರಿಂದ ಅಭಿಪ್ರಾಯ ಕೇಳಿಬಂದಿದ್ದು, ಸ್ಫರ್ದಿಸುವ ಬಗ್ಗೆ ಈ ಹಿಂದೆಯೇ ತೀರ್ಮಾನವಾಗಿತ್ತು. ಈಗಾಗಲೇ ಕ್ಷೇತ್ರ ಸಮಿತಿ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಯುವ ನಾಯಕ ನವಾಝ್ ಶರೀಫ್ ಕಟ್ಟೆ ಪಕ್ಷದ ನೂತನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಬೆಳ್ತಂಗಡಿ ವಿಧಾನಸಭೆ ಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿಯಾಗಿ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಅಥವಾ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ ಈ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟು ಕಣಕ್ಕಿಳಿಸುವುದೆಂದು ಜಿಲ್ಲಾ ಸಮಿತಿಯಲ್ಲಿ ಮತ್ತು ರಾಜ್ಯ ಸಮಿತಿಯಲ್ಲಿ ಅಂತಿಮವಾಗಿದೆ. ಮೊದಲ ಪ್ರಾಶಸ್ತ್ಯ ಪಟ್ಟಿಯಲ್ಲಿ ಬೆಳ್ತಂಗಡಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಿದ್ದಾರೆ ಎಂಬ ವರದಿಯಿದೆ. ಅಲ್ಪಸಂಖ್ಯಾತ ವಿಭಾಗಕ್ಕೆ ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ತುಂಬಾ ಘಟನೆಗಳು ನಡೆದಿದ್ದು, ಈ ಸಂದರ್ಭದಲ್ಲಿ ಸ್ಪಂದನೆ ನೀಡುವ ನಾಯಕತ್ವ ಬೆಳ್ತಂಗಡಿ ಭಾಗದಲ್ಲಿ ಸಿಗದೆ ಇರುವ ಕಾರಣದಿಂದ ಜನತೆ ಬದಲಾವಣೆ ಬಯಸುತ್ತಿದ್ದು ಈ ಬಾರಿ ಎಸ್‌ಡಿಪಿಐ ಕೈ ಹಿಡಿಯಲಿದ್ದಾರೆ. ಅದಲ್ಲದೇ ಕೋವಿಡ್ ಹಾಗೂ ನೆರೆ ಪ್ರವಾಹ ಸಂದರ್ಭದಲ್ಲಿ ಬೆಳ್ತಂಗಡಿ ಜನರ ಎಲ್ಲಾ ಅಗತ್ಯಗಳಿಗೆ ಕಾರ್ಯಕರ್ತರು ಸ್ಪಂದಿಸಿದ್ದು ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ದಲಿತ ಅಲ್ಪಸಂಖ್ಯಾತ ಅನ್ಯಾಯದ ವಿರುದ್ಧ ಧ್ವನಿಯಾಗಿ ಕೆಲಸ ಮಾಡುತ್ತಿದ್ದು, ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಕರ್ತರ ಪಡೆ ಹೊಂದಿದೆ. ಸುಮಾರು 30 ರಷ್ಟು ಗ್ರಾಮ ಪಂಚಾಯತ್ ಸದಸ್ಯರು ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ವಿಜಯ ಶಾಲಿಯಾಗಿದ್ದು, ಅಧಿಕೃತ ವಿರೋಧ ಪಕ್ಷವಾಗಿ ಬಿಜೆಪಿಗೆ ಪ್ರತಿಸ್ಪರ್ಧೆ ನೀಡಿದೆ. ತಾಲೂಕಿನ ಕುವೆಟ್ಟು, ಬಳಂಜ, ತಣ್ಣೀರುಪಂಥ, ಬಾರ್ಯ, ಇಳಂತಿಲ, ತೆಕ್ಕಾರು, ಮಡಂತ್ಯಾರು, ಲಾಯಿಲ, ಚಾರ್ಮಾಡಿ, ಕಾಜೂರು ಪ್ರದೇಶದಲ್ಲಿ ಈಗಾಗಲೇ ತನ್ನ ಪಂಚಾಯತ್ ಸದಸ್ಯರನ್ನು ಹೊಂದಿದೆ. ಬೆಳ್ತಂಗಡಿಯಲ್ಲಿ ಪಕ್ಷವು ಆಂತರಿಕವಾಗಿ ತುಂಬಾ ಬಲಿಷ್ಠವಾಗಿದೆ. ಬಿಜೆಪಿಯ ಆಡಳಿತ ವೈಫಲ್ಯವನ್ನು ಹಾಗೂ ಜನವಿರೋಧಿ ನೀತಿಗಳನ್ನು ಸಮರ್ಥವಾಗಿ ವಿರೋಧಿಸಿ ಪ್ರತಿಭಟಿಸುವಲ್ಲಿ ಕಾಂಗ್ರೆಸ್ ಪಕ್ಷವು ವಿಫಲವಾಗಿದೆ. ಪರಸ್ಪರ ನಾಯಕತ್ವಕ್ಕಾಗಿಯ ಕಚ್ಚಾಟವೂ ಅಧಿಕವಾಗಿದೆ. ಈಗಾಗಲೇ ಬೆಳ್ತಂಗಡಿ ಕಾಂಗ್ರೆಸ್ ಮೂರು ಭಾಗವಾಗಿದೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರವಾಗುತ್ತಿರುವ ನಾಯಕರ ಪಟ್ಟಿಯೂ ಉದ್ದವಿದೆ. ಮಾತ್ರವಲ್ಲದೆ, ಬಿಜೆಪಿಯನ್ನು ಸೋಲಿಸಲು ಕಾರ್ಯತಂತ್ರ ರೂಪಿಸುವಲ್ಲಿಯೂ ಕಾಂಗ್ರೆಸ್ ಎಡವುತ್ತಿದೆ. ಇದೆಲ್ಲದರ ಲಾಭ ಈ ಬಾರಿ ಎಸ್‌ಡಿಪಿಐ ಪಕ್ಷವು ಪಡೆಯಲಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

Also Read  ರಾಜ್ಯ ಸರ್ಕಾರದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ      ➤ ಮಾಸಿಕ ಗೌರವ ಧನ ಹೆಚ್ಚಳ…!!!


ಎಸ್‌ಡಿಪಿಐ ಬೆಳ್ತಂಗಡಿ ಪಕ್ಷದ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಆಯ್ಕೆ ಮೇಲೆ ನಿಂತಿದೆ. ಹಿರಿಯ ವ್ಯಕ್ತಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದಲ್ಲಿ ಅಕ್ಬರ್ ಬೆಳ್ತಂಗಡಿ ಸ್ಪರ್ಧೆ ಮಾಡಲಿದ್ದಾರೆ, ಕಿರಿಯ ವ್ಯಕ್ತಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಗಿಟ್ಟಿಸಿದರೆ ನವಾಝ್ ಕಟ್ಟೆ ಸ್ಪರ್ಧೆ ಮಾಡಲಿದ್ದಾರೆ ಎಂದು ಈಗಾಗಲೇ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ. ಅಂತಿಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಘೋಷಣೆ ಮಾಡುವ ಬಗ್ಗೆ ದಿನಾಂಕವನ್ನು ಈಗಾಗಲೇ ರಾಜ್ಯಾಧ್ಯಕ್ಷರು ಮಂಗಳೂರಿನಲ್ಲಿ ಘೋಷಣೆ ಮಾಡಿದ್ದಾರೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಚುನಾವಣೆ ಭಾರಿ ಕುತೂಹಲ ಮೂಡಿದೆ.

Also Read  ಗೋಳಿತ್ತಡಿ - ಏಣಿತ್ತಡ್ಕ ರಸ್ತೆ ಕಾಮಗಾರಿಯ ಅವ್ಯವಸ್ಥೆ ► ಸಾರ್ವಜನಿಕರಿಂದ ಪ್ರತಿಭಟನೆಗೆ ಸಿದ್ಧತೆ

error: Content is protected !!
Scroll to Top