(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 25. ಇನ್ನೇನು 2022ರ ಕಾಲಘಟ್ಟ ಮುಗಿಯುವ ಹಂತದಲ್ಲಿದ್ದು, ಯುವಜನತೆ 2023ರ ಹೊಸವರ್ಷದ ಗುಂಗಿನಲ್ಲಿದ್ದಾರೆ. ಅದರಲ್ಲೂ ಡಿಸೆಂಬರ್ ತಿಂಗಳಿನಲ್ಲಿ ಶಾಲಾ, ಕಾಲೇಜುಗಳು, ಖಾಸಗಿ ಕಂಪನಿಗಳಿಗೆ ಸಾಲು-ಸಾಲು ರಜೆಗಳಿರುವುದರಿಂದ, ಕುಟುಂಬದ ಜೊತೆ ಪ್ರೇಕ್ಷಣಿಯ ಸ್ಥಳಗಳು, ದೇವಸ್ಥಾನಗಳಿಗೆ ತೆರಳುವವವರೇ ಹೆಚ್ಚು. ಆದ್ದರಿಂದ ಮಂಗಳೂರು ಕೆಎಸ್ಆರ್ಟಿಸಿ ವಿಭಾಗದಿಂದ ಕೇರಳ ಪ್ರವಾಸ ಪ್ಯಾಕೇಜ್ ಹಾಗೂ ಮಡಿಕೇರಿ ಪ್ರವಾಸ ಪ್ಯಾಕೇಜ್ ಕಾರ್ಯಾಚರಣೆ ಡಿಸೆಂಬರ್ 31ರವರೆಗೆ ನಡೆಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಟೂರ್ ಪ್ಯಾಕೇಜ್ ವಿವರ:-
ಮಂಗಳೂರು ಬಸ್ ನಿಲ್ದಾಣದಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬೆಳಗ್ಗೆ 8 ರಿಂದ 10ರವರೆಗೆ, ಕುಂಬ್ಳೆ ಶ್ರೀ ಅನಂತಪದ್ಮನಾಭ ದೇವಸ್ಥಾನ ಬೆಳಗ್ಗೆ 10.15 ರಿಂದ 11ರವರೆಗೆ, ಮಧೂರು ಶ್ರೀ ಮದನಂತೇಶ್ವರ, ಗಣಪತಿ ದೇವಸ್ಥಾನ 11.15 ರಿಂದ 12 ರವರೆಗೆ, ಮಲ್ಲ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ 12.30ರಿಂದ 1.30ರ ವರೆಗೆ, ನಂತರ ಕಾಂಞಗಾಡ್ ನಿತ್ಯಾನಂದ ಆಶ್ರಮ ಮಧ್ಯಾಹ್ನ 3 ರಿಂದ 4ರ ವರೆಗೆ, ಬೇಕಲ್ ಫೋರ್ಟ್ ಬೀಚ್ 4:15ರಿಂದ ಸಂಜೆ 6ರ ವರೆಗೆ ಪ್ರವಾಸ ಮಾಡಬಹುದಾಗಿದೆ. ಮತ್ತೆ ಕೆಎಸ್‌ಆರ್‌ಟಿಸಿ ಬಸ್ ರಾತ್ರಿ 8 ಗಂಟೆಗೆ ಮಂಗಳೂರು ಬಸ್ ನಿಲ್ದಾಣ ತಲುಪಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಟಿಕೆಟ್ ದರದ ಸಂಪೂರ್ಣ ವಿವರ
ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರವನ್ನು ಗಮನಿಸುವುದಾದರೆ, ವಯಸ್ಕರಿಗೆ 750 ರೂಪಾಯಿ ಇರುತ್ತದೆ. ಇದರಲ್ಲಿ ಕೇರಳದ ಬಾರ್ಡರ್ ಟ್ಯಾಕ್ಸ್ 310 ರೂಪಾಯಿ ಹಾಗೂ ಟೋಲ್ ದರ 10 ರೂಪಾಯಿ ಕೂಡ ಒಳಗೊಂಡಿರುತ್ತದೆ. ಹಾಗೆಯೇ 6ರಿಂದ 12 ವರ್ಷದ ಮಕ್ಕಳಿಗೆ 700 ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಬಸ್ ತಲುಪುವ ಮಾರ್ಗಗಳು:-
ಬೆಳಗ್ಗೆ 7 ಕ್ಕೆ ಮಂಗಳೂರಿನಿಂದ ಹೊರಟು ಪುತ್ತೂರು, ಸುಳ್ಯ ಮಾರ್ಗವಾಗಿ ಬೆಳಗ್ಗೆ 11ಕ್ಕೆ ಮಡಿಕೇರಿ ರಾಜಾಸೀಟ್ ತಲುಪುತ್ತದೆ. ಮಧ್ಯಾಹ್ನ 2:30 ರಿಂದ 3:15ರ ವರೆಗೆ ಅಬ್ಬಿಫಾಲ್ಸ್, ಸಂಜೆ 4:30ರಿಂದ 4:45ರ ವರೆಗೆ ನಿಸರ್ಗಧಾಮ, ಸಂಜೆ 5:15ರಿಂದ 5:30ರವರೆಗೆ ಗೋಲ್ಡನ್ ಟೆಂಪಲ್, ಹಾರಂಗಿ ಡ್ಯಾಮ್ ನಂತರ ಸಂಜೆ 6:15ಕ್ಕೆ ಹಾರಂಗಿ ಡ್ಯಾಮ್‌ನಿಂದ ಹೊರಟು ರಾತ್ರಿ 10:30ಕ್ಕೆ ಮಂಗಳೂರು ತಲುಪಲಿದೆ. ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರವನ್ನು ನೋಡುವುದಾದರೆ, ವಯಸ್ಕರಿಗೆ 500 ರೂಪಾಯಿ ಹಾಗೂ ಮಕ್ಕಳಿಗೆ 450 ರೂಪಾಯಿ ನಿಗದಿಪಡಿಸಲಾಗಿದ್ದು, ಇದು 6 ವರ್ಷದಿಂದ 12 ವರ್ಷದ ಮಕ್ಕಳಿಗೆ ಮಾತ್ರ ಅನ್ವಯವಾಗಿರುತ್ತದೆ. ಪ್ಯಾಕೇಜ್ ಪ್ರವಾಸಕ್ಕೆ www.ksrtc.in ಅಲ್ಲಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು KSRTC ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.