(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 24. ರಾಜ್ಯದ ಚೆಕ್ ಪೋಸ್ಟ್‌ಗಳಲ್ಲಿ ಸಾರಿಗೆ ಇಲಾಖೆ (ಆರ್‌ಟಿಒ) ಅಧಿಕಾರಿಗಳ ಲಂಚಾವತಾರ, ಕರ್ತವ್ಯಲೋಪ ಬಯಲು ಮಾಡಿರುವ ಲೋಕಾಯುಕ್ತ ಪೊಲೀಸರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್‌ನಲ್ಲಿ ಅತ್ತಿಬೆಲೆ, ವಿಜಯಪುರದ ಝಳಕಿ ಸೇರಿದಂತೆ ರಾಜ್ಯದ ಎಂಟು ಚೆಕ್‌ಪೋಸ್ಟ್‌ಗಳಲ್ಲಿ ಪತ್ತೆಯಾದ 11 ಲಕ್ಷ ರೂ.ಗಳಿಗೂ ಅಧಿಕ ಅನಧಿಕೃತ ಹಣ, ಆರ್‌ಟಿಓ ಅಧಿಕಾರಿಗಳ ನಿಯಮ ಉಲ್ಲಂಘನೆ, ಕರ್ತವ್ಯ ಲೋಪವನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಕುರಿತು ದಾಳಿ ವರದಿ ಪರಿಶೀಲಿಸಿರುವ ಲೋಕಾಯುಕ್ತರು, ಚೆಕ್‌ಪೋಸ್ಟ್‌ಗಳಲ್ಲಿ ಜಪ್ತಿಯಾದ ಅನಧಿಕೃತ ಹಣ ಲಂಚದ ರೂಪದಲ್ಲಿ ಸ್ವೀಕರಿಸಿರುವ ಸಾಧ್ಯತೆಯಿದೆ. ಹೀಗಾಗಿ, ಸಂಬಂಧಪಟ್ಟ ಆರ್‌ಟಿಓ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆಯಡಿ ತನಿಖೆ ನಡೆಸಲು ಆದೇಶಿಸಿದ್ದಾರೆ.