(ನ್ಯೂಸ್ ಕಡಬ) newskadaba.com ಗದಗ, ಡಿ. 23. ಕೆಲ ದಿನಗಳ ಹಿಂದೆ ಗದಗ ಜಿಲ್ಲೆಯ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಿಂದ ಸಹ ಶಿಕ್ಷಕಿ ಹಾಗೂ ಆಕೆಯ ಮಗ ಗಂಭೀರವಾಗಿ ಹಲ್ಲೆಗೊಳಗಾದ ಘಟನೆ ನಡೆದಿದ್ದು, ಶಿಕ್ಷಕಿಯ ಮಗ ಸ್ಥಳದಲೇ ಮೃತ ಪಟ್ಟಿದ್ದನ್ನು. ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕಿ ಗೀತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಫಲಿಸದೆ ಡಿ 22ರಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಶಿಕ್ಷಕಿ ಗೀತಾ ಕರ್ತವ್ಯ ನಿರ್ವಹಿಸುತ್ತಿದ್ದ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುತ್ತಪ್ಪ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಇಬ್ಬರ ನಡುವೆ ಪ್ರೇಮಾಂಕುರವಾಗಿ ಸಲುಗೆಯಿಂದ ಇದ್ದರಲ್ಲದೆ ಮೆಸೇಜ್, ಫೋನ್ ಮಾತುಕತೆಯೂ ನಡೆಯುತ್ತಿತ್ತು. ಆದರೆ ಕೆಲ ದಿನಗಳ ಹಿಂದೆ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದ ವೇಳೆ ಶಿಕ್ಷಕಿ ಗೀತಾ ಸಹ ಶಿಕ್ಷಕ ಸಂಗನ ಗೌಡ ಎಂಬವರೊಂದಿಗೆ ಸಲುಗೆಯಿಂದ ಇರುವುದನ್ನು ನೋಡಿ ಮುತ್ತಪ್ಪ ಕೋಪಗೊಂಡಿದ್ದನು. ಹೀಗಾಗಿ ಪ್ರವಾಸದಿಂದ ಹಿಂತಿರುಗಿದ ಕೂಡಲೇ ಕುಪಿತಗೊಂಡ ಮುತ್ತಪ್ಪ ಶಿಕ್ಷಕಿ ಗೀತಾಳ ಮಗ ಭರತನಿಗೆ ಶಾಲೆಯಲ್ಲಿ ಗಂಭೀರ ಹಲ್ಲೆ ನಡೆಸಿದ್ದಾನೆ.
ಬಳಿಕ ಆತನನ್ನು ತರಗತಿಯಿಂದ ಹೊರಗೆ ಎಳೆದೊಯ್ದು ಮೊದಲ ಮಹಡಿಯಿಂದ ಎಸೆದು ಕೊಲೆಗೈದಿದ್ದ. ಆನಂತರ ಶಿಕ್ಷಕಿ ಗೀತಾಳಿಗೆ ಸಲಾಕೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದ. ಗೀತಾ, ಮುತ್ತಪ್ಪ ಮತ್ತು ಸಂಗನಗೌಡನ ತ್ರಿಕೋನ ಪ್ರೇಮಕತೆಗೆ ಏನೂ ಅರಿಯದ ಮುಗ್ದ ಬಾಲಕ 10 ವರ್ಷದ ಭರತ್ ಬಲಿಯಾಗಿದ್ದ. ಇದೀಗ ಆತನ ತಾಯಿಯೂ ಸಾವನ್ನಪ್ಪಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.