ಕುಟ್ರುಪ್ಪಾಡಿಯ ಸರಕಾರಿ ಶಾಲೆಯಲ್ಲಿ ತರಕಾರಿ ಸಂತೆ ► ಕೇಪು ಶಾಲೆಯಲ್ಲಿ ಗಮನ ಸೆಳೆದ ಮೆಟ್ರಿಕ್ ಮೇಳ

(ನ್ಯೂಸ್ ಕಡಬ) newskadaba.com ಕಡಬ, ನ.26. ಕುಟ್ರುಪ್ಪಾಡಿ ಗ್ರಾಮದ ಕೇಪು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ  ವಿದ್ಯಾರ್ಥಿಗಳಲ್ಲಿ ವ್ಯಾಪಾರ, ಲೆಕ್ಕಾಚಾರ, ವ್ಯವಹಾರ ಜ್ಞಾನ ವೃದ್ಧಿಸುವ ಮತ್ತು ಲಾಭ ನಷ್ಟದ ಅನುಭವವನ್ನು ಪಡೆಯುವ ಉದ್ದೇಶದಿಂದ ಆಯೋಜಿಸಲಾಗಿದ್ದ ಮೆಟ್ರಿಕ್ ಮೇಳವು ವಿದ್ಯಾರ್ಥಿಗಳ ತರಕಾರಿ ಸಂತೆಯ ಮೂಲಕ ಗಮನ ಸೆಳೆಯಿತು.

ಸಂತೆ ಮಾರುಕಟ್ಟೆಯಲ್ಲಿ ತರಕಾರಿ ಮಾರುವ ವ್ಯಾಪಾರಿಗಳಂತೆ ಶಾಲಾ ವರಾಂಡ ಮತ್ತು ರಂಗ ಮಂದಿರದಲ್ಲಿ ತಾವು ತಂದಿದ್ದ ತರಕಾರಿಗಳನ್ನು ಮುಂದಿಟ್ಟುಕೊಂಡು ಕುಳಿತ ವಿದ್ಯಾರ್ಥಿಗಳು ಬೆಳಗ್ಗೆ 10.30 ರಿಂದ 11.30 ರ ತನಕ ಪಕ್ಕಾ ನುರಿತ ವ್ಯಾಪಾರಿಗಳಂತೆ ವ್ಯವಹಾರ ನಡೆಸಿ ತಮ್ಮಲ್ಲಿದ್ದ ವಸ್ತುಗಳನ್ನು ಮಾರಾಟ ಮಾಡಿ ಒಟ್ಟು 6500/- ರೂ. ಗಳಿಸಿದರು. ವ್ಯಾಪಾರಕ್ಕೆ ಕುಳಿತ 35 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪೈಕಿ 7ನೇ ತರಗತಿಯ ನಿತೀಶ್ ಕೇವಲ ನೆಲ್ಲಿಕಾಯಿ ಮಾರಾಟ ಮಾಡಿ 542 ರೂ. ಸಂಪಾದಿಸಿದರೆ, ಬಹುತೇಕ ವಿದ್ಯಾರ್ಥಿಗಳು ತರಕಾರಿ ವ್ಯಾಪಾರ ಮಾಡಿ 250/- ರೂ. ಗಳಿಗಿಂತ ಹೆಚ್ಚು  ಹಣ ಗಳಿಸಿದರು. 6ನೇ ತರಗತಿಯ ಪ್ರಥಮ್ ಕೆ. ತನ್ನ ಮಾತಿನ ಮೋಡಿಯಿಂದ ಗ್ರಾಹಕರನ್ನು ಕರೆದು ಕೇವಲ 10 ನಿಮಿಷದಲ್ಲಿ ತಾನು ತಂದಿದ್ದ ಎಲ್ಲಾ ತರಕಾರಿಯನ್ನು ಮಾರಾಟ ಮಾಡಿ ಗಮನ ಸೆಳೆದಿದ್ದಾನೆ.

Also Read  ನಾಪತ್ತೆಯಾದ ಫೋಟೋಗ್ರಾಫರ್ ಕೊಲೆಯಾಗಿ ಪತ್ತೆ ➤ ಆಸ್ತಿ ಆಸೆಗೆ ಅಳಿಯನನ್ನೇ ಕೊಲೆಗೈದು ಕಾಡಿನಲ್ಲಿ ಹೂತು ಹಾಕಿದ ಮಾವ..! ➤➤ ನಾಲ್ವರ ಅರೆಸ್ಟ್

ಬಸಳೆ ಕಟ್ಟು, ಬದನೆ, ಬೆಂಡೆಕಾಯಿ, ನುಗ್ಗೆ, ಕದಳಿ ಬಾಳೆಕಾಯಿ, ನೇಂದ್ರ ಬಾಳೆಕಾಯಿ, ಔಂಡ ಬಾಳೆಕಾಯಿ, ತೆಂಗಿನಕಾಯಿ, ಎಳನೀರು, ಕರಿಬೇವಿನ ಸೊಪ್ಪು, ಸಾಂಬಾರ್ ಸೊಪ್ಪು, ಒಂದೆಲಗ, ಕೆಸುವಿನ ಗೆಡ್ಡೆ, ಸುವರ್ಣ ಗೆಡ್ಡೆ, ಅವರೆ ಕಾಯಿ, ಸಿಹಿಗೆಣಸು, ನೆಲ್ಲಿ ಕಾಯಿ, ಅಲಸಂಡೆ, ಸೌತೆ, ಕೆಸುವಿನ ದಂಟು, ಕೆಸುವಿನ ಗೆಡ್ಡೆ, ಮೂಂಡಿ ಗೆಡ್ಡೆ, ಅಂಬಟೆಕಾಯಿ ಹೀಗೆ ತರಹೇವಾರಿ ತರಕಾರಿಗಳನ್ನು ವಿದ್ಯಾರ್ಥಿಗಳು ಮಾರಾಟ ಮಾಡಿದರು.

ಕುಟ್ರುಪ್ಪಾಡಿ ತಾ.ಪಂ.ಸದಸ್ಯ ಗಣೇಶ್ ಕೈಕುರೆ ತರಕಾರಿ ಸಂತೆಗೆ ಚಾಲನೆ ನೀಡಿದರು. ಗ್ರಾ.ಪಂ.ಸದಸ್ಯ ಶಿವಪ್ರಸಾದ್ ರೈ ಮೈಲೇರಿ ಮೆಟ್ರಿಕ್ ಮೇಳ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗುಡ್ಡಪ್ಪ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಿದಾನಂದ  ಗೌಡ, ಉಪಾಧ್ಯಕ್ಷ ಮನಮೋಹನ ರೈ, ಜೇಸಿಐ ಕಡಬ ಕದಂಬ ನಿಕಟಪೂರ್ವಾಧ್ಯಕ್ಷ ತಸ್ಲೀಂ ಮರ್ದಾಳ, ಅಧ್ಯಕ್ಷ ವೆಂಕಟೇಶ್ ಪಾಡ್ಲ, ಪೂರ್ವಾಧ್ಯಕ್ಷ ಜಯರಾಮ ಆರ್ತಿಲ ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯಶಿಕ್ಷಕ ಹರಿಪ್ರಸಾದ್ ಉಪಾಧ್ಯಾಯ ಸ್ವಾಗತಿಸಿ, ಶಿಕ್ಷಕಿ ಮಿನಿ ವರ್ಗೀಸ್ ವಂದಿಸಿದರು. ದಾಮೋದರ ಕೆ., ಭುವನೇಶ್ವರಿ ಡಿ., ಗೀತಾಕುಮಾರಿ ಸಹಕರಿಸಿದರು. ವಿದ್ಯಾರ್ಥಿಗಳ ಪೋಷಕರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾಭಿವೃದ್ಧಿ ಸಮಿತಿಯವರು, ಜೇಸಿ ಕಾರ್ಯಕರ್ತರು ಹಾಗೂ ಊರವರು ಮಕ್ಕಳಿಂದ ತರಕಾರಿ ಖರೀದಿಸಿ ಪ್ರೋತ್ಸಾಹಿಸಿದರು.

Also Read  ಮೊಸರು ವಡೆ ಮಾಡುವ ವಿಧಾನ

ಮಕ್ಕಳಿಗೆ ಪಠ್ಯ ಚಟುವಟಿಕೆಗಳೊಂದಿಗೆ ಈ ರೀತಿಯ ಪಠ್ಯಪೂರಕ ಚಟುವಟಿಕೆಗಳೂ ಅಗತ್ಯ ಎನ್ನುವ ಉದ್ದೇಶದಿಂದ ಮೆಟ್ರಿಕ್ ಮೇಳ ಮತ್ತು ತರಕಾರಿ ಸಂತೆಯನ್ನು ನಡೆಸಿದ್ದೇವೆ. ವಿದ್ಯಾರ್ಥಿಗಳು ಲೆಕ್ಕಾಚಾರ, ವ್ಯವಹಾರ ಜ್ಞಾನ ವೃದ್ಧಿಸುವ ಮತ್ತು  ಲಾಭ ನಷ್ಟದ ಅನುಭವವನ್ನು ಈ ಕಾರ್ಯಕ್ರಮದಿಂದ ಕಂಡುಕೊಳ್ಳಲು ಸಾಧ್ಯವಾಗಿದೆ. ಈ ರೀತಿಯ ಕಲಿಕೆ ಅವರು ಮುಂದಿನ ಜೀವನಕ್ಕೆ ಅನುಕೂಲವಾಗಲಿದೆ.

– ಹರಿಪ್ರಸಾದ ಉಪಾಧ್ಯಾಯ, ಮುಖ್ಯಶಿಕ್ಷಕರು,

ನಮಗೆ ಇದೊಂದು ಹೊಸ ಅನುಭವ. ಗ್ರಾಹಕರೊಂದಿಗೆ ಚೌಕಾಶಿ ಮಾಡಿ ನಮ್ಮ ವಸ್ತುಗಳನ್ನು ಅವರಿಗೆ ಮಾರಾಟ ಮಾಡಿದಾಗ ಸಿಗುವ ಆನಂದವೇ ಬೇರೆ. ನಾವು ಪೇಟೆಯಲ್ಲಿ ವಸ್ತುಗಳನ್ನು ಖರೀದಿ ಮಾಡುವಾಗ ಯಾವ ರೀತಿಯಲ್ಲಿ ವ್ಯವಹರಿಸಬೇಕು ಎನ್ನುವ ಪಾಠವೂ ನಮಗೆ ಈ ತರಕಾರಿ ಸಂತೆಯಿಂದ ಸಿಕ್ಕಿದೆ.

-ಪ್ರಥಮ್ ಕೆ. ವಿದ್ಯಾರ್ಥಿ

error: Content is protected !!
Scroll to Top