(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 22. ಕನ್ನಡ ಭಾಷೆ ಎನ್ನುವುದು ವಿಶ್ವದ ಅತ್ಯಂತ ಪುರಾತನ ಭಾಷೆಯಾಗಿದೆ. ಇಂಡಸ್ ನಾಗರೀಕತೆಯ ಕಾಲದಲ್ಲಿಯೂ ಕನ್ನಡ ಬಳಕೆ ಇತ್ತು ಎಂದೂ ಚರಿತ್ರೆಗಳಿಂದ ತಿಳಿದು ಬಂದಿದೆ. ಇತ್ತೀಚೆಗೆ ನಡೆದ ಪುರಾತತ್ವ ಶಾಸ್ತ್ರದ ಸರ್ವೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು ಏಷ್ಯಾ ಉಪಖಂಡ ಎಲ್ಲಾ ಭಾಷೆಗಳಿಗೂ ಮೂಲ ಕನ್ನಡ ಎಂದು ಸಾಬೀತಾಗಿದೆ. ಸಂಸ್ಕೃತದಷ್ಟೇ ಪುರಾತನವಾದ ಮತ್ತು ಉತ್ಕೃಷ್ಟವಾದ ಭಾಷೆ ಕನ್ನಡ ಎಂದರೆ ತಪ್ಪಾಗಲಾರದು. ಪಂಪ, ರನ್ನ, ಜನ್ನ, ಪೊನ್ನರಿಂದ ಹಿಡಿದು ಕುವೆಂಪು, ಕಾರಂತ, ಬೇಂದ್ರೆ ಮತ್ತು ಕಣವಿಯವರೆಗೆ ಕನ್ನಡದ ಕಂಪು ವಿಶ್ವಾದೆಲ್ಲೆಡೆ ಪಸರಿಸಿದೆ. ಕನ್ನಡಿಗರಾಗಿ ಈ ಕನ್ನಡ ನಾಡಿನಲ್ಲಿ ಜನಿಸಿರುವುದೇ ನಮ್ಮ ಭಾಗ್ಯ. ಇಂತಹಾ ಕನ್ನಡದ ಭಾಷೆಯನ್ನು ನಾವು ಅತ್ಯಂತ ಹೆಮ್ಮೆಯಿಂದ ಮತ್ತು ಗರ್ವದಿಂದ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಬಳಸಿಕೊಳ್ಳಬೇಕು. ಕನ್ನಡದ ಬಗ್ಗೆ ಇರುವ ಕೀಳರಿಮೆಯನ್ನು ಯುವ ಜನರು ತೊಡೆದು ಹಾಕಬೇಕು. ನಮ್ಮ ಮಾತೃ ಭಾಷೆಯಾದ ಕನ್ನಡದಲ್ಲಿ ವ್ಯವಹರಿಸಿದರೆ ನಮ್ಮ ಮನಸ್ಸಿಗೆ ಸಿಗುವ ಆನಂದ ಮತ್ತು ಸಂತೋಷ ಇನ್ನೊಂದು ಭಾಷೆಯಲ್ಲಿ ಸಿಗಲು ಸಾಧ್ಯವಿಲ್ಲ ಎಂದು ಕ ಸಾ ಪ ಮಂಗಳೂರು ತಾಲೂಕು ಇದರ ಕರ್ಯದರ್ಶಿಯಾದ ಡಾ|| ಮುರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು.
ಬ್ಯಾಂಕ್ ಆಫ್ ಬರೋಡ ಇದರ ವತಿಯಿಂದ ಮಂಗಳೂರಿನ ಬಲ್ಮಠ ದಲ್ಲಿರುವ ಬ್ಯಾಂಕ್ ಆಫ್ ಬರೋಡ ಇದರ ಕಚೇರಿಯಲ್ಲಿ ವಲಯ ಕಛೇರಿ ಮತ್ತು ಪ್ರಾದೇಶಿಕ ಕಛೇರಿ ಮಂಗಳೂರು ನಗರ, ಜಂಟಿಯಾಗಿ ಆಚರಿಸಿದ ಕನ್ನಡ ರಾಜ್ಯೋತ್ಸವ 2022 ಇದರಲ್ಲಿ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿ ಮಾತನಾಡಿದರು. ಈ ಕಾರ‍್ಯಕ್ರಮವನ್ನು ಬ್ಯಾಂಕ್ ಆಫ್ ಬರೋಡ ಇದರ ಉಪವಲಯದ ಪ್ರಬಂಧಕರಾದ ಶ್ರೀ ಗೋಪಾಲಕೃಷ್ಣ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀಮತಿ ಉಷಾ ಸತೀಶ್ ಅವರು ಪ್ರಾರ್ಥನೆ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಶ್ರೀ ಬಸವರಾಜ್ ಅವರು ಸ್ವಾಗತ ಭಾಷಣ ಮಾಡಿದರು. ಬ್ಯಾಂಕ್ ಆಫ್ ಬರೋಡದಲ್ಲಿ ನಡೆದ ಕನ್ನಡ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತ ವರದಿಯನ್ನು ಶ್ರೀಮತಿ ಪುಷ್ಪಲತಾ ಅವರು ವಾಚಿಸಿದರು. ಶ್ರೀ ಸಂಜಯ್ ಎನ್, ವಾಲಿ ಕ್ಷತ್ರಿಯ ಮುಖ್ಯಸ್ಥರು ಧನ್ಯವಾದ ಅರ್ಪಣೆ ಮಾಡಿದರು. ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಗೋಪಾಲಕೃಷ್ಣ ಅವರು, ಬ್ಯಾಂಕ್ ಆಫ್ ಬರೋಡ ಕನ್ನಡ ಚಟುವಟಿಕೆಗಳ ಬಗ್ಗೆ ವಿಶೇಷವಾದ ಆಸಕ್ತಿ ಹೊಂದಿದೆ ಮತ್ತು ಕರ್ನಾಟಕ ರಾಜ್ಯದೆಲ್ಲೆಡೆ ಕನ್ನಡದಲ್ಲಿಯೇ ವ್ಯವಹಾರ ಮಾಡುತ್ತಿದ್ದೇವೆ ಮತ್ತು ಕನ್ನಡಕ್ಕೆ ಅತೀ ಹೆಚ್ಚಿನ ಅಧ್ಯತೆ ನೀಡುತ್ತೇವೆ ಎಂದು ನುಡಿದರು. ಕನ್ನಡಿಗರ ಹಿತಾಸಕ್ತಿ ಕಾಯುವ ಕೆಲಸವನ್ನು ಬ್ಯಾಂಕ್ ಆಫ್ ಬರೋಡ ಹಿಂದೆಯೂ ಮಾಡುತ್ತಿದೆ ಮತ್ತು ಮುಂದೆಯೂ ಮಾಡಲಿದೆ ಎಂದು ನುಡಿದರು. ಸಭಾ ಕಾರ‍್ಯಕ್ರಮದ ಬಳಿಕ ಶ್ರೀ ಸಂದೇಶ್ ನೀರುಮಾರ್ಗ ಮತ್ತು ತಂಡದವರಿಂದ ಕನ್ನಡ ರಸಮಂಜರಿ ಕಾರ‍್ಯಕ್ರಮ ಜರುಗಿತು. ಕಾರ‍್ಯಕ್ರಮದ ಕೊನೆಯಲ್ಲಿ ನಾಡಗೀತೆಯನ್ನು ಹಾಡಿ ಸಂಭ್ರಮಿಸಲಾಯಿತು. ಸುಮಾರು ನೂರಕ್ಕೂ ಹೆಚ್ಚು ಮಂದಿ ಕನ್ನಡಾಭಿಮಾನಿಗಳು ಈ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.