(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 22. ನಗರದ ಜಪ್ಪು ಮಹಾಕಾಳಿ ಪಡ್ಪು ಕೆನರಾ ಪಿಂಟೋ ಗ್ಯಾರೇಜ್ ಬಳಿಯಿಂದ ನೇತ್ರಾವತಿ ರೈಲ್ವೆ ಲೆವೆಲ್ ಕ್ರಾಸಿಂಗ್ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದರಿಂದ ಸದ್ರಿ ರಸ್ತೆಯಲ್ಲಿ ತಾತ್ಕಾಲಿಕ ವಾಹನ ಸಂಚಾರ ನಿಷೇಧ ಆದೇಶ ಹೊರಡಿಸುವುದರ ಜೊತೆಗೆ ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಿ ಕಾಮಗಾರಿ ಮುಕ್ತಾಯವಾಗುವವರೆಗೆ ಅಪರ ದಂಡಾಧಿಕಾರಿಗಳೂ ಆಗಿರುವ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಎನ್. ಅವರು ಮೋಟಾರ್ ವಾಹನ ಕಾಯಿದೆ1988ರ ಕಲಂ 115ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 2022ರ ಡಿ.19 ರಿಂದ 2023ನೇ ಡಿಸೆಂಬರ್ 19 ರವರೆಗೆ ಸದರಿ ರಸ್ತೆಯಲ್ಲಿ ತಾತ್ಕಾಲಿಕವಾಗಿ 12 ತಿಂಗಳುಗಳ ಕಾಲ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ತಾತ್ಕಾಲಿಕ ರಸ್ತೆ:
ಕಾಮಗಾರಿ ನಡೆಯುವ ವೇಳೆ ಜಪ್ಪು ಮಹಾಕಾಳಿ ಪಡ್ಡು ಕೆನರಾ ಪಿಂಟೋ ಗ್ಯಾರೇಜ್ ಬಳಿಯಿಂದ ನೇತ್ರಾವತಿ ರೈಲ್ವೆ ಕ್ರಾಸಿಂಗ್ ವರೆಗೆ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿದೆ. ಕಾಮಗಾರಿ ನಡೆಯುವ ವೇಳೆ ಮಂಗಳೂರು ನಗರದ ಮೋರ್ಗನ್ಸ್ ಗೇಟ್ ಮಹಾಕಾಳಿ ಪಡ್ಡು ಮುಖಾಂತರ ರಾಷ್ಟ್ರೀಯ ಹೆದ್ದಾರಿ-66 ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ವೆಲೆನ್ಸಿಯಾ ರಸ್ತೆ ಮೂಲಕ ಕರಾವಳಿ ವೃತ್ತಕ್ಕೆ ಬಂದು ಅಲ್ಲಿಂದ ಬಲಕ್ಕೆ ತಿರುಗಿ ರಾಷ್ಟ್ರೀಯ ಹೆದ್ದಾರಿ-66ನ್ನು ಪ್ರವೇಶಿಸಿ ಮುಂದಕ್ಕೆ ಸಂಚರಿಸಬೇಕು. ಕಾಮಗಾರಿಯ ವೇಳೆ ರಾಷ್ಟ್ರೀಯ ಹೆದ್ದಾರಿ-66 ರಿಂದ ಮಹಾಕಾಳಿ ಪಡ್ಡು ಮೂಲಕ ನಗರಕ್ಕೆ ಬರುವ ಎಲ್ಲಾ ವಾಹನಗಳು ಮಹಾವೀರ ವೃತ್ತದಲ್ಲಿ ಎಡಕ್ಕೆ ತಿರುಗಿ ಹಳೆ ಕಂಕನಾಡಿ ರಸ್ತೆ ಮೂಲಕ ನಗರಕ್ಕೆ ಪ್ರವೇಶಿಸಿ ಮುಂದಕ್ಕೆ ವೆಲೆನ್ಸಿಯಾ ರಸ್ತೆಯಲ್ಲಿ ಸಂಚರಿಸುವಂತೆ ಸೂಚಿಸಿದ್ದಾರೆ.