(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 21. ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆ ಹೋಗುವ ರಸ್ತೆ ಬದಿ ಪಾದಚಾರಿ ಮಾರ್ಗದಲ್ಲಿ ಅನುಮತಿ ಪಡೆಯದೆ ಕೇಬಲ್ ದುರಸ್ತಿಗೆ ಹೊಂಡ ಅಗೆದ ಏರ್ ಟೆಲ್ ಕಂಪನಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಕೋರಿ ಮಂಗಳೂರು ಮಹಾನಗರ ಪಾಲಿಕೆಯಿಂದ ಬಂದರು ಠಾಣೆಗೆ ಮನವಿ ಸಲ್ಲಿಸಲಾಗಿದ.
ಏರ್ ಟೆಲ್ ಕಂಪನಿಯು ಮಹಾನಗರ ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೇ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆ ಹೋಗುವ ರಸ್ತೆ ಬದಿ ಪಾದಚಾರಿ ಮಾರ್ಗದಲ್ಲಿ ಕೇಬಲ್ ದುರಸ್ತಿಗಾಗಿ ಹೊಂಡ ಅಗೆದಿದ್ದು, ಅಲ್ಲದೇ ಹೊಂಡ ಅಗೆಯುವ ಸಮಯದಲ್ಲಿ ಮತ್ತು ಕೇಬಲ್ ದುರಸ್ತಿಯಾದ ಬಳಿಕವೂ ಯಾವುದೇ ಸುರಕ್ಷತಾ ಕ್ರಮಗಳನ್ನು ಕಂಪನಿ ತೆಗೆದುಕೊಂಡಿಲ್ಲ. ಹೊಂಡ ಮುಚ್ಚದೇ ಇರುವುದರಿಂದ ಡಿ.19 ರಂದು ಮಹಿಳೆಯೊಬ್ಬರು ಈ ಹೊಂಡಕ್ಕೆ ಬಿದ್ದುಗಾಯಗೊಂಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಸದ್ಯ ಪಾಲಿಕೆಯು ಹೊಂಡವನ್ನು ಮುಚ್ಚಿದ್ದು, ಯಾವುದೇ ಅನುಮತಿ ಪಡೆಯದೆ ಹೊಂಡ ತೆಗೆದಿರುವುದು ಮತ್ತು ಸಾರ್ವಜನಿಕರಿಗೆ ತೊಂದರೆಯುಂಟಾಗಿರುವುದರಿಂದ ಕಂಪನಿಯ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಪಾಲಿಕೆ ಸಹಾಯಕ ಅಭಿಯಂತರರು ಒತ್ತಾಯಿಸಿದ್ದಾರೆ.