➤➤ ವಿಶೇಷ ಲೇಖನ ಕನ್ನಡ ಉಳಿಸುವುದೆಂದರೆ… ‘ಕನ್ನಡ ಶಾಲೆ’ಗಳನ್ನು ಗಟ್ಟಿಗೊಳಿಸುವುದು ✍️ರಾಮಕೃಷ್ಣ ಭಟ್ ಚೊಕ್ಕಾಡಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 21. ಕನ್ನಡ ನಾಡಿನಲ್ಲಿ, ಕನ್ನಡ ರಾಜ್ಯ ಭಾಷಾ ಮಾಧ್ಯಮವಾಗುಳ್ಳ ರಾಜ್ಯದಲ್ಲಿ ಕನ್ನಡ ಉಳಿಸಿ, ಕನ್ನಡ ಶಾಲೆಗಳನ್ನು ಉಳಿಸಿ- ಬೆಳೆಸಿ ಎನ್ನುವ ಕೂಗು, ಪ್ರತಿಪಾದನೆ ಎಂಥಹ ವಿಚಿತ್ರ….ವಿಪರ್ಯಾಸದ್ದು ! ಅಲ್ಲವೇ ? ಶೈಕ್ಷಣಿಕ ಬದಲಾವಣೆಗಾಗಿ ಸಾಕಷ್ಟು ಯೋಜನೆಗಳು, ನೀತಿಗಳು ಕಾಲಕಾಲಕ್ಕೆ ಜಾರಿಯಾಗುತ್ತಲೇ ಇವೆ. ಅದೇ ರೀತಿಯಲ್ಲಿ ಸಮಸ್ಯೆ ಸವಾಲುಗಳು ಸಾಕಷ್ಟು ಏರುತ್ತಲೂ ಇವೆ. ಹೊಸ ಶಿಕ್ಷಣ ನೀತಿಯ ಜಾರಿಯಲ್ಲಿ ಹೊಸ ಸಾಧ್ಯತೆಗಳು ಗೋಚರವಾದೀತೆಂಬ ಆಶಾಭಾವ ಎಲ್ಲರದು.

ಕನ್ನಡ ಶಾಲೆಗಳ ಉಳಿವಿನ ಘೋಷಣೆ:

ನಾಡು ನುಡಿ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಯ ಚರ್ಚೆ ಬಂದಾಗ, ಕನ್ನಡ ಶಾಲೆಗಳ ಉಳಿವಿನ ಹಾಗೂ ಅಭಿವೃದ್ಧಿಯ ಉಪಕ್ರಮಗಳೇ ಪ್ರಮುಖ ನೆಲೆಯಾಗಿ ಅಭಿಪ್ರಾಯಗಳು, ಶಿಫಾರಸುಗಳು ವ್ಯಕ್ತವಾಗಿವೆ. ಜೊತೆಯಲ್ಲಿ ಭಾಷೆಯನ್ನು ಕಲಿಸುವ ವ್ಯವಸ್ಥೆ ಮತ್ತು ಕಲಿಸುವ ವಿಧಾನದದ ಬಗ್ಗೆಯೂ ಆದ್ಯತೆ ಪಡಕೊಳ್ಳಬೇಕೆಂಬುದು ಬಲವಾದ ಪ್ರತಿಪಾದನೆಯಾಗಿದೆ. ಮತ್ತೆ ಪರೀಕ್ಷೆ, ಮೌಲ್ಯಮಾಪನ ಮತ್ತು ಫಲಿತಾಂಶ ಸುಧಾರಣೆಯ ವಿಷಯ ಬೇರೆಯೇ ಇದೆ.

ಬಹಳ ಪ್ರಮುಖವಾಗಿ ಕನ್ನಡ ಶಾಲೆಗಳ ಉಳಿವಿನ ಘೋಷಣೆ ಮತ್ತು ಪೋಷಣೆಯಲ್ಲಿ ಸರಕಾರಕ್ಕೆ ಸರಕಾರಿ ಶಾಲೆಗಳೇ ಮುಖ್ಯವೆ. ಆದರೆ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಸರಕಾರಿ ಶಾಲೆಗಳಿಂದ ಪ್ರತ್ಯೇಕಿಸಿ, ಸಮಗ್ರ ಶೈಕ್ಷಣಿಕ ವ್ಯವಸ್ಥೆಯಲ್ಲಿ ಖಾಸಗಿ ಕನ್ನಡ ಶಾಲೆಗಳನ್ನು ಬೇರೆಯಾಗಿಸಿ ಕನ್ನಡ ನೆಲದ ನುಡಿಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಉಪಕ್ರಮಿಸಿದ್ದು ವಿಚಿತ್ರ ಮಾತ್ರವಲ್ಲ ವಿಪರ್ಯಾಸ ಕೂಡ.

ಅಭಿವೃದ್ಧಿ ಎಂದರೆ ಕೇವಲ ಭೌತಿಕ ರಚನೆಯಲ್ಲ. ಬೌದ್ಧಿಕ ವಿಕಾಸ, ಜೀವನ ಕೌಶಲಗಳು, ಮಾನವತೆಯ ಪೋಷಣೆಯೂ ಒಳಗೊಂಡಿವೆಯೆಂದು ಕವಿ ಸಾಹಿತಿಗಳು, ಶೈಕ್ಷಣಿಕ ಸಿದ್ಧಾಂತಿಗಳೂ ಪ್ರತಿಪಾದಿಸಿರುತ್ತಾರೆ. ಈ ರೀತಿಯ ಅಭಿವೃದ್ಧಿಯ ನೆಲೆಯನ್ನು ಗಟ್ಟಿಗೊಳಿಸಲು ಭಾಷಾ ಕಲಿಕೆಯು ಅತ್ಯಂತ ಮಹತ್ವ ಮತ್ತು ನಿರ್ಣಾಯಕ. ಆವಾಗ ಇಲ್ಲಿ ಸರಕಾರಿ , ಖಾಸಗಿಯೆಂಬ ವರ್ಗೀಕರಣ ಅಪ್ರಸ್ತುತ. ಕಲಿಸುವ ವ್ಯವಸ್ಥೆ ಮತ್ತು ಬೋಧನೆಯ ವಿಧಾನವನ್ನು ಗಟ್ಟಿಗೊಳಿಸುವುದೇ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಪ್ರಧಾನ ಕ್ರಮಗಳಾಗಿವೆಯೆಂಬುದು ಸದಾ ಪ್ರತಿಪಾದಿತ ವಿಚಾರವಾಗಿದೆ. ಈ ಹಿನ್ನಲೆಯಲ್ಲಿ ಸಮಗ್ರ ಕನ್ನಡ ಶಾಲೆಗಳ ಅಭಿವೃದ್ಧಿ ಹಾಗೂ ಕನ್ನಡ  ಭಾಷೆ ಸಂಸ್ಕೃತಿಯ ಉಳಿವು ಎಂಬ ಪೋಷಣೆ ಮತ್ತು ಘೋಷಣೆ ಇಂದಿನ ಅಗತ್ಯತೆಯಾಗಿದೆ.

 

ಖಾಸಗಿ ಕನ್ನಡ ಶಾಲೆಗಳ ಕೊಡುಗೆ:

ಸರಕಾರದಿಂದ ಅನುದಾನವನ್ನು ಕೇಳುವುದು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಹಕ್ಕಲ್ಲ. ಅನುದಾನವನ್ನು ನೀಡಬೇಕಾದ್ದು ಸರಕಾರದ ಬಾಧ್ಯತೆಯೂ ಅಲ್ಲವೆಂಬ ವಿಚಾರವೂ ಇದೆ. ಆದರೆ ಒಂದು ಸಂಗತಿಯನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು ಏನೆಂದರೆ ; ಖಾಸಗಿ ಕನ್ನಡ ಮಾಧ್ಯಮದ ಶಿಕ್ಷಣ ಸಂಸ್ಥೆಗಳೆಂಬ ವ್ಯವಸ್ಥೆ ಶಿಕ್ಷಣದ ಸಾರ್ವತ್ರೀಕರಣದ ಕಾರ್ಯದಲ್ಲಿ ಮತ್ತು ಸಮಾನವಾಗಿ ಜಾರಿಯಾಗಬೇಕಾಗುವಲ್ಲಿ ಸರಕಾರವೇ ಮಾಡಿಕೊಟ್ಟ ವಿಶೇಷವಾದ ವ್ಯವಸ್ಥೆ. ಅದೊಂದು ಕಾನೂನಾತ್ಮಕ ವಿಷಯವೂ ಆಗಿದೆ. ಈ ನೆಲೆಯಲ್ಲಿ ಖಾಸಗಿ ಕನ್ನಡದ ಮಾಧ್ಯಮ ಶಾಲೆಗಳು ಸರಕಾರೀ ಶಾಲೆಗಳಂತೆ, ಸರಕಾರದ ಎಲ್ಲ ನೀತಿನಿಯಮಗಳಿಗೆ ಅನುಗುಣವಾಗಿಯೇ ನಡೆಸಲ್ಪಟ್ಟುವು. ಸರಕಾರೀ ಶಾಲೆಗಳಿಗಿಂತ ಏನೇನೂ ಭಿನ್ನತೆಯಿಲ್ಲದೆ ಖಾಸಗಿ ಕನ್ನಡ ಶಾಲೆಗಳು ಏಕರೂಪದ, ಸಮಾನತೆಯ ಶಿಕ್ಷಣ ನೀಡುತ್ತಾ ಕನ್ನಡ ನಾಡು, ನುಡಿ ಸಂಸ್ಕೃತಿಯ ಭಾಗವಾಗಿ ಸಾಗಿಬಂದಿವೆ. ಇಂತಹ ಖಾಸಗಿ ಮತ್ತು ಸರಕಾರಿ ಶಾಲೆಗಳಿಗೆ ಸ್ವಾತಂತ್ರ್ಯಾಪೂರ್ವದ ಭವ್ಯವೂ ದಿವ್ಯವೂ ಆದ ಇತಿಹಾಸವಿದೆ.

 

ಖಾಸಗಿ ಕನ್ನಡ ಮಾಧ್ಯಮದ ಶಾಲೆಗಳು ಎಂದೂ ಲಾಭ ನಷ್ಟದ ವ್ಯವಹಾರದಲ್ಲಿ ನಡೆಸಲ್ಪಟ್ಟವುಗಳಲ್ಲ. ವ್ಯಾವಹಾರಿಕ ದೃಷ್ಟಿಯಿಂದ ಉದಿಸಿದವುಗಳಲ್ಲ. ಎಂತೆಂತಹ ಹಳ್ಳಿಗಳಲ್ಲಿ , ಊರುಗಳಲ್ಲಿ ಕನ್ನಡ ಶಾಲೆಗಳನ್ನು ಆರಂಭಿಸಿ ಊರಿನ, ನಾಡಿನ ಶ್ರೇಷ್ಠತೆಗೆ ನೀಡಿದ ಕೊಡುಗೆ ಅಸಾಮಾನ್ಯವಾದುದು. ತನ್ನ ಆಸ್ತಿ, ಮನೆ, ಸಂಪತ್ತು…ಎಲ್ಲವನ್ನು ಮಾರಿಯೋ….ಅಡವಿಟ್ಟೋ… ಖಾಸಗಿ ಕನ್ನಡ ಶಾಲೆಗಳನ್ನು ಆರಂಭಿಸಿ ನಾಡ ಕಟ್ಟಿದವರೇ ಆಗಿದ್ದಾರೆ ಅಂದಿನ ಮಹಾನುಭಾವರು. ನಾಡು ನುಡಿ ಸಂಸ್ಕೃತಿಯ ಸಂರಕ್ಷಣೆ, ಪೋಷಣೆಯಲ್ಲಿ ಅಂತವರ ಪಾತ್ರ ಮತ್ತು ಕೊಡುಗೆಯು ಸಾರ್ವಕಾಲಿಕವಾಗಿ ಮರೆಯಬಾರದ ಸ್ಮರಣೀಯ ತ್ಯಾಗವಾಗಿದೆ. ಈ ರೀತಿಯಾಗಿ ಶುರುವಾದ, ಸಾಗಿಕೊಂಡು ಬಂದ ಖಾಸಗಿ ಕನ್ನಡ ಮಾಧ್ಯಮದ ಶಾಲೆಗಳಿಂದು ಸರಕಾರದ ಶೈಕ್ಷಣಿಕ ನೀತಿಗಳಿಂದ ನಲುಗಿಹೋಗಿವೆ. ಕನ್ನಡದ ನೆಲದಲ್ಲಿ ಕನ್ನಡ ಶಾಲೆಗಳನ್ನು ಆರಂಭಿಸಿರುವುದು, ನಡೆಸುವುದು ಪಾಪಕೃತ್ಯವೋ ಎಂಬಂತೆ ಪರಿತಪಿಸುವಂತಾಗಿರುವುದು ನಾಡಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದುರಂತವಿದು.

ಸಮಾನ ಶೈಕ್ಷಣಿಕ ನೀತಿ ಬೇಕು: 

ಪ್ರಸ್ತುತ ಖಾಸಗಿ ಕನ್ನಡ ಮಾಧ್ಯಮದ ಶಾಲೆಗಳೆಂದರೆ ಇಂಗ್ಲಿಷರ ಶಾಲೆಗಳೋ ಎಂಬಂತೆ ಪರಕೀಯತೆಯನ್ನು ಅನುಭವಿಸುವಂತಾಗಿದೆ. ಶಿಕ್ಷಣದ ಸಾರ್ವತ್ರೀಕರಣದಲ್ಲಿ ಮತ್ತು  ಸಮಾನವಾಗಿ ಜಾರಿಗೊಳಿಸುವಲ್ಲಿ ಖಾಸಗಿ ಕನ್ನಡ ಶಾಲೆಗಳು ನೀಡಿದ ಕೊಡುಗೆ, ಅದರ ಆಡಳಿತವನ್ನು ನಡೆಸುತ್ತಿರುವ ಮಹನೀಯರ ತ್ಯಾಗ , ಸೇವೆಗಳೆಲ್ಲ ನಿಕೃಷ್ಟವಾಯಿತೇ…? ನಾಡು ನುಡಿಯ ರಕ್ಷಣೆ, ಪೋಷಣೆಯನ್ನು ಮಾಡಿದ್ದಕ್ಕೆ ಮತ್ತು ಮಾಡುತ್ತಿರುವುದಕ್ಕೆ ಸರಕಾರ ನೀಡುತ್ತಿರುವ ಗೌರವ , ಬೆಲೆ ಇದೇ ಏನು? ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ನಿರ್ಲಕ್ಷಿಸಿ ಸರಕಾರೀ ಶಾಲೆಗಳನ್ನು ಬಲವರ್ಧಿಸುವುದು ನಾಡ ಭಾಷೆ ಮತ್ತು ಸಂಸ್ಕೃತಿಗೆ ಮಾಡುವ ವಂಚನೆಯಾಗಿದೆ. ಇವತ್ತು ಸರಕಾರಿ ಶಾಲೆಗಳಿಗೆ ಸರಕಾರವು ಶೈಕ್ಷಣಿಕವಾಗಿ ನೀಡುವ ಹತ್ತು ಹಲವು ಸೌಲಭ್ಯಗಳಿಂದ(ಯಾವ್ಯಾವುವು ಎಂದು ಎಲ್ಲರಿಗೂ ಗೊತ್ತಿರುವ ವಿಷಯ) ಖಾಸಗಿ ಕನ್ನಡ ಶಾಲೆಗಳು ವಂಚಿತವಾಗಿವೆ. ಮಕ್ಕಳ ಸೇರ್ಪಡೆಯಿಂದ ತೊಡಗಿ ಅಂತಿಮ ಪರೀಕ್ಷೆಗೆ ಕುಳಿತುಕೊಳ್ಳುವ ತನಕ. ಪಾಠ ಮಾಡುವ ವಿಷಯದಲ್ಲೂ ಮಕ್ಕಳಿಗೆ ನೀಡುವ ಸೌಲಭ್ಯಗಳಲ್ಲೂ ಭೇದ ನೀತಿ. ಸರಕಾರದ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಧೋರಣೆಗಳು ಖಾಸಗಿ ಕನ್ನಡ ಶಾಲೆಗಳಿಗೆ ವಿರುದ್ಧವಾಗಿಯೇ ಇದೆ. ಸಮಾನತೆಯೆಂಬ ಶೈಕ್ಷಣಿಕ ತಟ್ಟೆಯಲ್ಲಿ ಅಸಮಾನತೆಯ ಊಟ ಎನ್ನೋಣವೇ ?

ಕನ್ನಡ ಉಳಿಸುವುದೆಂದರೆ…

ಕನ್ನಡ ಉಳಿಸಿ ಬೆಳೆಸುವುದೆಂದರೆ….? ಕನ್ನಡ ಶಾಲೆಗಳನ್ನು ಗಟ್ಟಿಗೊಳಿಸುವುದು ಎಂದರ್ಥ. ಇದರಲ್ಲಿ ಖಾಸಗಿ, ಸರಕಾರಿ ಎಂಬ ತಾರತಮ್ಯ ಇಲ್ಲದ, ನಾಡು ನುಡಿ ಸಂಸ್ಕೃತಿ ಸಂರಕ್ಷಣೆಯ ಮತ್ತು ಪೋಷಣೆಯ ಘೋಷಣೆಯಾಗಬೇಕು. ಕನ್ನಡ ಉಳಿಸಿ ಬೆಳೆಸಿ ಎನ್ನುತ್ತೇವೆ. ಇನ್ನೊಂದೆಡೆ ಕನ್ನಡ ಉಳಿಸಿ ಬೆಳೆಸುವ ಕಾಯಕದಲ್ಲಿ ಶತಮಾನಗಳಿಂದ ತೊಡಗಿರುವ ಖಾಸಗಿ ಕನ್ನಡ ಶಾಲೆಗಳನ್ನು ಮರೆಯುತ್ತೇವೆ. ಉದ್ದೇಶಪಟ್ಟೋ…..ಎಂಬಂತೆ ಖಾಸಗಿ ಕನ್ನಡ ಶಾಲೆಗಳು ಕಡೆಗಣಿಸಲ್ಪಡುತ್ತಿವೆ. ಇದು ಕನ್ನಡದ ಶಾಲೆಗಳನ್ನು ಕಟ್ಟಿ, ಬೆಳೆಸಿ ನಾಡುನುಡಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹನೀಯರಿಗೆ ಸಲ್ಲಿಸುವ ಗೌರವವೇನು? ಈಗೀಗ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳ ಮಾತಲ್ಲೂ ಕನ್ನಡ ಶಾಲೆಗಳ ಅಭಿವೃದ್ಧಿ ಎಂಬ ಮಾತೂ ವಿರಳವಾಗಿದೆ. ನಾಡ ಭಾಷೆಯ ಮೂಲಕ ನಾಡ ಅಭಿವೃದ್ಧಿ ಸಾಧಿಸುವ ಯೋಜನೆ ರೂಪಿತವಾಗಬೇಕು. ಸರಕಾರಿ ಶಾಲೆಗಳ ಅಭಿವೃದ್ಧಿ ಎಂಬ ಘೋಷಣೆಯ ಬದಲು ಕನ್ನಡ ಶಾಲೆಗಳ ಅಭಿವೃದ್ಧಿಯೆಂಬ ಘೋಷಣೆ ಕೇಳಿಬರಬೇಕು. ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯು ಮರು ನಿರೂಪಿತವಾದಾಗಲೇ ಕನ್ನಡದ ನೈಜ ಸಬಲೀಕರಣ ಸಾಧ್ಯ.

ರಾಮಕೃಷ್ಣ ಭಟ್ ಚೊಕ್ಕಾಡಿ 

ಬೆಳಾಲು   

error: Content is protected !!

Join the Group

Join WhatsApp Group