(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 21. ಫ್ಲ್ಯಾಟ್‌ವೊಂದರಲ್ಲಿ ಬಿಸಿಯಾಗಿದ್ದ ಇಸ್ತ್ರಿ ಪೆಟ್ಟಿಗೆಯಿಂದ ಹಾಸಿಗೆಗೆ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿದ ಘಟನೆ ದೇರಳಕಟ್ಟೆಯ ಕ್ಷೇಮ ಆಸ್ಪತ್ರೆ ಬಳಿಯಿರುವ ಫ್ಲಾಮ ನೆಸ್ಟ್ ಫ್ಲ್ಯಾಟ್‌ನಲ್ಲಿ ಸಂಭವಿಸಿದೆ.
ಇಲ್ಲಿನ ರೂಂ ಒಂದರಲ್ಲಿ ವಾಸಿಸುತ್ತಿರುವ ದಂತ ವೈದ್ಯಕೀಯ ವಿದ್ಯಾರ್ಥಿನಿಯರಿಬ್ಬರು ಬೆಳಗ್ಗೆ ಬಟ್ಟೆಗೆ ಇಸ್ತ್ರಿ ಹಾಕಿದ ಬಳಿಕ ಸ್ವಿಚ್ ಆಫ್ ಮಾಡಿ ಬಿಸಿಯಾಗಿದ್ದ ಇಸ್ತ್ರಿಪೆಟ್ಟಿಗೆಯನ್ನು ಮಲಗುವ ಹಾಸಿಗೆಯ ಮೇಲೆಯೇ ಇಟ್ಟು ಹೋಗಿದ್ದರು. ಇಸ್ತ್ರಿ ಪೆಟ್ಟಿಗೆ ಬಿಸಿ ಇದ್ದುದರಿಂದ ಹಾಸಿಗೆ ಕರಚಿ ಫ್ಲ್ಯಾಟ್‌ನಲ್ಲಿ ಹೊಗೆ ಆವರಿಸಿತ್ತು. ಹೊಗೆಯ ವಾಸನೆ ಬಂದ ಹಿನ್ನೆಲೆ ಫ್ಲ್ಯಾಟ್ ಮ್ಯಾನೇಜರ್, ಮಹಮ್ಮದ್ ಶಾಹಿದ್ ಶಫೀಕ್ ಅವರು ಫ್ಲ್ಯಾಟ್‌ನ ಎಲ್ಲಾ ಕೊಠಡಿಗಳನ್ನು ಹುಡುಕಾಡಿದರು. ಈ ವೇಳೆ ಕೊಠಡಿಯೊಂದರಲ್ಲಿ ಹೊಗೆ ಕಾಣಿಸಿದ್ದು, ಬಾಗಿಲು ಹಾಕಿದ್ದರಿಂದ ಕೂಡಲೇ ಆ ಕೊಠಡಿಯಲ್ಲಿ ವಾಸವಾಗಿದ್ದ ವಿದ್ಯಾರ್ಥಿನಿಯರಿಗೆ ಕರೆ ಮಾಡಿ ತತ್‌ಕ್ಷಣ ಆಗಮಿಸುವಂತೆ ಹೇಳಿದ್ದರು. ಕೂಡಲೇ ವಿದ್ಯಾರ್ಥಿನಿಯರು ಆಗಮಿಸಿ ಕೊಠಡಿ ಬಾಗಿಲು ತೆರೆದರು. ಬಳಿಕ ಮ್ಯಾನೇಜರ್ ಶಫೀಕ್ ಕೊಠಡಿಯೊಳಗೆ ನುಗ್ಗಿ ಕಿಟಕಿ ಬಾಗಿಲು ತೆರೆದಿದ್ದಾರೆ. ಹೊಗೆ ನಿಧಾನವಾಗಿ ಹೊರ ಹೋದ ಬಳಿಕ ಹೊಗೆಗೆ ನಿಖರ ಕಾರಣ ತಿಳಿದು ಬೆಂಕಿ ಆವರಿಸಿದ್ದ ಹಾಸಿಗೆಯನ್ನು ಹೊರಗೆಳೆದು ಬೆಂಕಿ ನಂದಿಸಿದ್ದಾರೆ. ಮ್ಯಾನೇಜರ್ ಶಫೀಕ್ ಅವರ ಸಮಯಪ್ರಜ್ಞೆಯಿಂದ ಬೆಂಕಿ ಇತರೆಡೆಗೂ ವ್ಯಾಪಿಸುವುದು ತಪ್ಪಿದಂತಾಗಿದೆ.