ಕೋಸ್ಟಲ್ ವುಡ್ ಗೆ ಎಂಟ್ರಿ ಕೊಟ್ಟ ಗ್ರಾಮೀಣ ಪ್ರತಿಭೆ ► ರಾಮಕುಂಜದ ಹಾಸ್ಯ ಕಲಾವಿದ ರವಿ

(ನ್ಯೂಸ್ ಕಡಬ) newskadaba.com ಕಡಬ, ನ.25. ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಗೋಳಿತ್ತಡಿಯ ನಾಟಕದ ಹಾಸ್ಯ ಕಲಾವಿದ ರವಿ ರಾಮಕುಂಜ ಕೋಸ್ಟಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಇವರು ತುಳು ಚಿತ್ರ ರಂಗದ ‘ಅಮ್ಮೆರ್ ಪೊಲೀಸ್’ ಚಿತ್ರದಲ್ಲಿ ಪ್ರಧಾನ ಹಾಸ್ಯ ಪಾತ್ರಕ್ಕೆ ಜೀವ ತುಂಬಿ ತನ್ನ ಕಲಾ ಜೀವನದ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದ್ದಾರೆ.

ವಿವಿಧ ಗೆಟಪ್ಪಿನ ಹಾಸ್ಯಭರಿತ ಪಾತ್ರದಲ್ಲಿ ಅಧ್ಬುತವಾಗಿ ನಟಿಸುವ ಉದಯೋನ್ಮುಕ ಕಲಾವಿದ ರವಿ ಹಲವಾರು ನಾಟಕದಲ್ಲಿ ಹಾಸ್ಯ ನಟನೆಯ ಮೂಲಕ ಪೇಕ್ಷಕರ ಮನಗೆದ್ದಿದ್ದಾರೆ. ಇವರ ಹಾಸ್ಯದ ನಟನೆಗೆ ಪಿಲಿಬೈಲು ಯಮುನಕ್ಕ ಖ್ಯಾತಿಯ  ಸೂರಜ್ ಶೆಟ್ಟಿ ನಿರ್ದೇಶನದ ಅಮ್ಮೆರ್ ಪೊಲೀಸ್ ತುಳು ಚಿತ್ರದಲ್ಲಿ ಅವಕಾಶ ಸಿಕ್ಕಿದೆ. ಈ ಚಿತ್ರದ ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ.

ಎಳೆಮರೆಯ ಕಾಯಿಯಂತೆ ಹಾಸ್ಯ ಕಲಾವಿದನಾಗಿರುವ ಈ ಯುವಕ ಪ್ರಾಥಮಿಕ ಶಾಲಾ ಶಿಕ್ಷಣದಿಂದಲೇ ಹಾಸ್ಯ ಪ್ರಧಾನ ಪಾತ್ರದಲ್ಲಿ ಮಿಂಚುತ್ತಿದ್ದರು. ಆತೂರು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಸಂದರ್ಭ ತನ್ನ ಶಾಲೆಯಿಂದ ಆತೂರಿನಲ್ಲಿ ನಡೆಯುತ್ತಿದ್ದ ಗಣೇಶೋತ್ಸವದ ಅಂಗವಾಗಿ ವಿವಿಧ ಶಾಲೆಗಳ ನಡುವೆ ನಡೆಯುತ್ತಿದ್ದ ನಾಟಕ ಸ್ಪರ್ಧೆಯಲ್ಲಿ ಶಾಲಾ ವತಿಯಿಂದ ನಡೆದ ನಾಟಕ ಸ್ಪರ್ಧೆಗೆ ರವಿ ರಾಮಕುಂಜ ಅವರನ್ನು ಅಂದಿನ  ಶಾಲಾ ಶಿಕ್ಷಕ ದೇರಾಜೆ ಸೀತರಾಮ ಗೌಡ ಹಾಸ್ಯ ನಟನೆಗೆ ಅವಕಾಶ ಮಡಿಕೊಟ್ಟರು. ಅಂದು ಪ್ರಥಮವಾಗಿ ವೇದಿಕೆ ಹತ್ತಿ ನಟನೆ ಪ್ರಾರಂಭಿಸಿದ ರವಿ ಅವರು ಇಂದಿಗೂ ಹಾಸ್ಯ ನಟನೆಯನ್ನು ತನ್ನದೆ ಶೈಲಿಯಲ್ಲಿ ಅಭಿನಯಿಸಿ ಸೈ ಎನಿಸಿಕೊಳ್ಳುತ್ತಿದ್ದಾರೆ. 2007 ರಲ್ಲಿ ಕೊೖಲದಲ್ಲಿ ನಡೆಯುತ್ತಿದ್ದ ಪಿ ಬಿ ರೈ ಬೆಳ್ಳಾರೆ ಮಾಗದರ್ಶನದ ನಂದಿಕೇಶ್ವರ ನಾಟಕ ಸಂಘದ ನಾಟಕದಲ್ಲಿ ಹಾಸ್ಯ ನಟರಾಗಿ ಪ್ರಥಮ ಅವಕಾಶ ಸಿಕ್ಕಿತ್ತು. ಬಳಿಕ ರಾಮಕುಂಜೇಶ್ವರ ಮಿತ್ರವೃಂದ , ರಾಮಕುಂಜ ಓಂ ಪ್ರೆಂಡ್ಸ್‌ ಕ್ಲಬ್, ಅಮ್ಮ ಕಲಾವಿದೆರ್ ಕುಡ್ಲ, ಐಸಿರಿ ಕಲಾವಿದೆರ್ ಮಂಜೇಶ್ವರದ ನಾಟಕ ತಂಡದಲ್ಲಿ ಹಾಸ್ಯ ಕಲಾವಿದರಾಗಿ ಮಿಂಚಿ ಜನಮಾನಸದಲ್ಲಿ ಅಚ್ಚೊತ್ತುತ್ತಿದ್ದಾರೆ.

Also Read  ಯೋಗ ತರಬೇತುದಾರರಿಂದ - ಅರ್ಜಿ ಆಹ್ವಾನ

ಇತ್ತೀಚೆಗೆ ಖಾಸಗಿ ಚಾಲೆನ್ ನಡೆಸಿದ ಬಲೆ ತೆಲಿಪಾಲೆ ಯಶಸ್ವಿ ಕಾರ್ಯಕ್ರಮದಲ್ಲಿ ಕುಡ್ಲ ಕುಸಾಲ್ ತಂಡದಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಪ್ರಸ್ತುತ ಇನ್ನೊಂದು ಖಾಸಗಿ ಚಾನೆಲ್ ನಡೆಸುತ್ತಿರುವ ಸಿಪಿಎಲ್ ಕಾಮಿಡಿ ಪ್ರೀಮಿಯರ್ ಲೀಗ್ ಸ್ಪರ್ಧೆಯಲ್ಲಿ ಕುಡ್ಲ ಕುಸಾಲ್ ತಂಡದಲ್ಲಿ ನಟಿಸುತ್ತಿದ್ದಾರೆ. ಅಮ್ಮೆರ್ ಪೊಲೀಸ್ ಚಿತ್ರದ ಹಾಸ್ಯ ನಟನೆಗೆ ನಟರನ್ನು ಹುಡಕುತ್ತಿರುವ ಸಂದರ್ಭ ಪ್ರಸ್ತುತ ಖಾಸಗಿ ಚಾನೆಲ್ ಪ್ರಸ್ತುತಪಡಿಸುತ್ತಿರುವ ಸಿಪಿಎಲ್ ಕಾಮಿಡಿ ಪ್ರಿಮೀಯರ್ ಲೀಗ್  ನೋಡಲು ಬಂದ ನಿರ್ದೇಶಕರಿಗೆ ರವಿಯ ಅಭಿನಯ ನೋಡಿ ಖುಷಿಪಟ್ಟಿದ್ದಾರೆ. ತಕ್ಷಣ ಈತನಿಗೆ ತನ್ನ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ.

Also Read  ಮಂಗಳೂರು: ಆರೋಪಿಯೊಂದಿಗೆ ಸೇರಿ 8 ಸಿಸಿಬಿ ತಂಡದಿಂದ ಬಾರ್ ಪಾರ್ಟಿ- ವಿಡಿಯೋ ವೈರಲ್ ➤ ಸೂಕ್ತ ತನಿಖೆಗೆ ಕಮಿಷನರ್ ಆದೇಶ

ಅಮ್ಮೆರ್ ಪೊಲೀಸ್ ಚಿತ್ರದಲ್ಲಿ ಹಾಸ್ಯ ನಟನೆ
ಒಂದು ಹೆಣದ ಜೊತೆ ಒಂದು ದಿನ ಕಳೆಯುವ ಸನ್ನಿವೇಶದ ವಿಶ್ಲೇಷನೆ ಅಮ್ಮೆರ್ ಪೊಲೀಸ್  ಚಿತ್ರದ್ದಾಗಿದೆ. ಈ ಚಿತ್ರದಲ್ಲಿ ಪ್ರಧಾನ ಹಾಸ್ಯ ಪಾತ್ರದಲ್ಲಿ ರವಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಆಯಾಮಗಳಲ್ಲಿ ನಟಿಸಿ ಹಾಸ್ಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ತನ್ನ ಪ್ರತಿಭೆಯನ್ನು ಕನ್ನಡ ಚಿತ್ರದಲ್ಲೂ ತೋರ್ಪಡಿಸಿದ್ದಾರೆ. ಇನ್ನೇನು ತೆರೆ ಕಾಣಲಿರುವ ಸಂದೇಶ್ ಸೆಟ್ಟಿ ನಿರ್ದೇಶನದ ಕತ್ತಲ ಕೋಣೆ ಚಿತ್ರದಲ್ಲೂ ಹಾಸ್ಯ ನಟರಾಗಿ ಅಭಿನಯಿಸಿದ್ದಾರೆ. ಮೇರು ಹಾಸ್ಯ ನಟರ ಸಾಲಿನಲ್ಲಿ ಬೆಳೆಯುತ್ತಿರುವ ರವಿ ಅವರು  ನಾಟಕ, ಕನ್ನಡ, ತುಳು ಚಿತ್ರದಲ್ಲಿ ಹಾಸ್ಯ ಪ್ರಧಾನ ಪಾತ್ರದಲ್ಲಿ ಅಭಿನಯಿಸಿ ಜನರ ಮನಸೂರೆಗೊಂಡಿದ್ದಾರೆ. ರವಿ ಅಭಿನಯಕ್ಕೆ ಸದಾ ಆಶೀರ್ವಾದವಿದೆ ಎನ್ನುತ್ತಾರೆ ಕಲಾ ಆಸಕ್ತರು.

ನಟನೆಯ ಪ್ರಭುದ್ಧತೆಯನ್ನು ಹೆಚ್ಚಿಸಿಕೊಳ್ಳಲು ಅವಕಾಶ ಸಿಕ್ಕಿದೆ. ಅವಕಾಶವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನಿರ್ದೇಶಕರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಸುಳ್ಳಾಗಿಸುವುದಿಲ್ಲ ಎನ್ನುತ್ತಾರೆ ರವಿ ಅವರು.

✍? ಪ್ರವೀಣ್ ರಾಜ್ ಕೊಯಿಲ

error: Content is protected !!
Scroll to Top