(ನ್ಯೂಸ್ ಕಡಬ) newskadaba.com ಉಡುಪಿ, ನ.24. ದೇಶದಲ್ಲೀಗ ರಾಮಮಂದಿರ ನಿರ್ಮಾಣಕ್ಕೆ ಅನುಕೂಲಕರ ವಾತಾವರಣವಿದ್ದು, 2019 ರ ಒಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಳ್ಳುವ ವಿಶ್ವಾಸವಿದೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್‌ನ ಆಶ್ರಯದಲ್ಲಿ ನಗರದ ರೋಯಲ್ ಗಾರ್ಡನ್‌ನಲ್ಲಿ ಇಂದು ಪ್ರಾರಂಭಗೊಂಡ 12ನೆ ಧರ್ಮ ಸಂಸದ್‌ನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ವರ್ಷದ ಕೊನೆಯೊಳಗೆ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭಗೊಳ್ಳಬೇಕಿದ್ದು, ಒಂದು ವರ್ಷದೊಳಗೆ ಅದು ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.
ರಾಮಮಂದಿರ ಬಗ್ಗೆ ಎದ್ದಿರುವ ವಿವಾದಕ್ಕೆ ಈಗ ಮೂರು ರೀತಿಯ ಪರಿಹಾರಗಳಿದ್ದು, ಒಂದು ಸರಕಾರ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸುವುದು, ಎರಡು ಸುಪ್ರೀಂ ಕೋರ್ಟಿನ ತೀರ್ಪಿಗಾಗಿ ಕಾಯುವುದು ಹಾಗೂ ಮೂರನೇಯದು ಸರಕಾರ ವಿಧೇಯಕದ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡುವುದು ಸೇರಿದೆ ಎಂದರು.