ಮರಳು ವಾಹನಗಳಿಗೆ ಜಿಪಿಎಸ್ ಕಡ್ಡಾಯ ► ಜಿಲ್ಲಾಧಿಕಾರಿ ಶಶಿಕುಮಾರ್ ಸೆಂಥಿಲ್

(ನ್ಯೂಸ್ ಕಡಬ) newskadaba.com ಮಂಗಳೂರು, ನ.23. ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಲಾರಿ ಹಾಗೂ ಬೋಟುಗಳಿಗೆ ಜಿಪಿಎಸ್ ಮೆಷಿನ್ ಅಳವಡಿಕೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ. ಸಸಿಕುಮಾರ್ ಸೆಂಥಿಲ್ ತಿಳಿಸಿದ್ದಾರೆ.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮರಳುಗಾರಿಕೆಯಲ್ಲಿ ಬಳಸಲಾಗುವ ಎಲ್ಲಾ ವಿಧದ ಬೋಟುಗಳಿಗೆ ಆಯಾ ನದಿಗೆ ಸಂಬಂಧಪಟ್ಟಂತೆ ನಿರ್ದಿಷ್ಟ ಬಣ್ಣ ಅಳವಡಿಸಬೇಕಾಗುತ್ತದೆ. ಅದೇ ರೀತಿ ಲಾರಿಗಳಿಗೂ “ಮರಳು ಸಾಗಾಟದ ವಾಹನ” ಎಂದು ನಮೂದಿಸಬೇಕಾಗುತ್ತದೆ. ಈಗಾಗಲೇ ಜಿಪಿಎಸ್ ಪೂರೈಕೆಗೆ ಟೆಂಡರ್ ಕರೆಯಲಾಗಿದ್ದು, ಜಿಪಿಎಸ್ ಪೂರೈಸುವ ಸಂಸ್ಥೆಗೆ ಕಾರ್ಯಾದೇಶ ನೀಡಿದ 15 ದಿನಗಳೊಳಗೆ ಜಿಪಿಎಸ್ ಅಳವಡಿಕೆಯನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ಬೋಟುಗಳಿಗೆ ಆಯಾ ಸ್ಥಳಗಳಿಗೆ ತೆರಳಿ ಜಿಪಿಎಸ್ ಅಳವಡಿಕೆಗೆ ಏರ್ಪಾಡು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮರಳು ಸಾಗಾಟದ ಪರ್ಮಿಟ್‍ನಲ್ಲಿಯೇ ವಾಹನದ ಸಂಖ್ಯೆ ನಮೂದಿಸಲಾಗುವುದು. ಮರಳುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ವಾಹನಗಳ ಮಾಹಿತಿಯನ್ನು ಕಡ್ಡಾಯವಾಗಿ ಗಣಿ ಇಲಾಖೆಗೆ ನೀಡಬೇಕಿದೆ ಎಂದು ಅವರು ತಿಳಿಸಿದರು.

Also Read  ಎಡಮಂಗಲ ದಲಿತ ಮಹಿಳೆಯ ಮನೆ ಧ್ವಂಸ ಪ್ರಕರಣ ➤ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು- ಸಚಿವ ಎಸ್‌.ಅಂಗಾರ

ಅಕ್ರಮವಾಗಿ ಸಾಗಿಸಿ ವಶಪಡಿಸಿಕೊಂಡ ಮರಳು ಹಾಗೂ ವಾಹನಗಳನ್ನು ರಕ್ಷಿಸಿಡಲು ಪ್ರತೀ ತಾಲೂಕಿನಲ್ಲಿ ಯಾರ್ಡ್ ನಿರ್ಮಿಸಿ, ಬಂದೋಬಸ್ತ್ ಒದಗಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳವನ್ನು ಸಂಪರ್ಕಿಸುವ 12 ರಸ್ತೆ ಹಾಗೂ ಜಿಲ್ಲೆಯಿಂದ ಹೊರಜಿಲ್ಲೆಗಳನ್ನು ಸಂಪರ್ಕಿಸುವ 8 ರಸ್ತೆಗಳಲ್ಲಿ ತನಿಖಾ ಠಾಣೆ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಸಸಿಕುಮಾರ್ ಸೆಂಥಿಲ್ ಹೇಳಿದರು.

ಎರಡು ಪಟ್ಟು ಬ್ಯಾಂಕ್ ಗ್ಯಾರೆಂಟಿ:
ರಾಜ್ಯ ಸರಕಾರ ತಿದ್ದುಪಡಿ ಮಾಡಿರುವ ಖನಿಜ ನಿಯಮಾವಳಿಯಂತೆ ಅಕ್ರಮವಾಗಿ ಮರಳು ಸಾಗಿಸುವುದು ಕಂಡುಬಂದಲ್ಲಿ ಅಂತಹ ಲಾರಿಯನ್ನು  ವಶಪಡಿಸಿ, ಪ್ರಕರಣ ದಾಖಲಿಸಲಾಗುವುದು. ಇಂತಹ ವಾಹನಗಳನ್ನು ಬಿಡುಗಡೆ ಮಾಡಲು ನ್ಯಾಯಾಲಯದಲ್ಲಿ ವಾಹನದ ಮೌಲ್ಯದ ಎರಡು ಪಟ್ಟಿನಷ್ಟು  ಬ್ಯಾಂಕ್ ಗ್ಯಾರಂಟಿ ನೀಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ಸಭೆಯಲ್ಲಿ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಕುಮಾರ್, ಡಿಸಿಪಿ ಉಮಾ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಸುಮಿತ್ರಾ ಮತ್ತಿತರರು ಉಪಸ್ಥಿತರಿದ್ದರು.

Also Read  ಪ್ರಾಣಿ ದಯಾ ಸಂಘ ರಚನೆ ➤ ಪದಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ

error: Content is protected !!
Scroll to Top