➤ ➤ ವಿಶೇಷ ಲೇಖನ ಡಿಸೆಂಬರ್-16. ವಿಜಯ್ ದಿವಸ್ ✍️ ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಡಿ. 16. ಪ್ರತಿ ವರ್ಷ ಡಿಸೆಂಬರ್ 16 ರಂದು ಭಾರತ ದೇಶದಲ್ಲಿ ವಿಜಯ್ ದಿವಸ್ ಎಂದು ಆಚರಿಸಿ ಸಂಭ್ರಮಿಸಲಾಗುತ್ತದೆ. 1971, ಡಿಸೆಂಬರ್ 16 ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧ ಅಧಿಕೃತವಾಗಿ ಅಂತ್ಯವಾಗಿ ಭಾರತ ಸೇನೆ ವಿಜಯ ಪತಾಕೆಯನ್ನು ಹಾರಿಸಿತ್ತು. 13 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಿ ಅವರ ಆತ್ಮಗಳಿಗೆ ಸದ್ಗತಿ ಕೋರುವ ಮತ್ತು ಅವರ ತ್ಯಾಗ ಬಲಿದಾನಗಳನ್ನು ದೇಶದೆಲ್ಲೆಡೆ ಕೊಂಡಾಡಲಾಗುತ್ತದೆ. ಈ ದಿನದಂದು  1971 ರಲ್ಲಿ ಪಾಕಿಸ್ತಾನದ ಸೇನಾ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಭಾರತ ಮತ್ತು ಈಸ್ಟ್ ಪಾಕಿಸ್ತಾನ ಎಂದರೆ ಈಗಿನ ಬಾಂಗ್ಲಾದೇಶದ ಸೈನ್ಯಕ್ಕೆ ಶರಣಾಗತಿಯಾಗಿ ತನ್ನ 93,000 ಸೈನಿಕರನ್ನು ಒತ್ತೆಯಾಳಾಗಿ ನೀಡಿದ ಸುಮಧುರವಾದ ಕ್ಷಣ ಎಂದರೂ ತಪ್ಪಾಗಲಾರದು. ಈ ಹಿಂದೆಯೂ 1948 ಮತ್ತು 1965ರಲ್ಲಿ  ಎರಡು ಬಾರಿ ಪಾಪಿ ಪಾಕಿಸ್ತಾನ ಕಾಲು ಕೆರೆದು ಭಾರತದ ಜೊತೆ ಅನಗತ್ಯವಾಗಿ ಜಗಳವಾಡಿ ಸೋತು ಸುಣ್ಣವಾಗಿದ್ದರೂ, ಮಗದೊಮ್ಮೆ ತನ್ನ ಹಳೆ ಚಾಳಿಯನ್ನು ಮುಂದುವರಿಸಿ ಮತ್ತೊಮ್ಮೆ ಜಗಳವಾಡಿ ಸೋತು ಸುಣ್ಣವಾಗಿ ಭಾರತದ ಸೇನೆಗೆ ಮಂಡಿಯೂರಿ ಶರಣಾಗತಿಯಾಗಿ ತಾನೆಂದೂ ಭಾರತದ ಎದುರು ತನ್ನ ಬಾಲ ಬಿಚ್ಚಲು ಸಾಧ್ಯವಿಲ್ಲ ಎಂದೂ ತಪ್ಪು ಒಪ್ಪಿಕೊಂಡು ಶರಣಾಗತಿಯಾದ ಮಹತ್ವದ ದಿನ ಡಿಸೆಂಬರ್ 16, 1971 ಎಂದರೆ ಅತಿಶಯೋಕ್ತಿಯಾಗದು. 2ನೇ ಮಹಾಯುದ್ಧದ ಬಳಿಕ ಅತೀ ದೊಡ್ಡ ಮಿಲಿಟರಿ ಶರಣಾಗತಿ ಎಂದು ಚರಿತ್ರೆಯಲ್ಲಿ ಈ ದಿನ ದಾಖಲಾಗಿದೆ.  ಆರಂಭದಲ್ಲಿ  ಈಸ್ಟ್ ಪಾಕಿಸ್ತಾನದ ಸೇನೆ  ಇಸ್ಲಾಮಾಬಾದ್ ಸರಕಾರದ ವಿರುದ್ಧ  ಸೆಟೆದು ನಿಂತಿತು. ಈಸ್ಟ್ ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳು ಮತ್ತು ಬೆಂಗಾಲಿಗಳ ಮೇಲೆ ನಿರಂತರವಾಗಿ ಪಾಕಿಸ್ತಾನದ ಸೈನಿಕರಿಂದ ದೌರ್ಜನ್ಯ ನಡೆಯುತ್ತಿತ್ತು.  ಸುಮಾರು 3 ರಿಂದ 5 ಲಕ್ಷ ಸಾರ್ವಜನಿಕ ಮುಗ್ಧ ಜನರು ಪಾಕಿಸ್ತಾನದ ಸೈನಿಕರಿಂದ ಹತ್ಯೆಯಾಗಿದ್ದರು ಎಂದು ಅಧಿಕೃತ ವರದಿ ತಿಳಿಸಿದೆ.

Also Read  ➤➤ ವಿಶೇಷ ಲೇಖನ ಉಗ್ಗುವಿಕೆ ✍️ ಡಾ. ಮುರಲೀ ಮೋಹನ ಚೂಂತಾರು

ಪಾಕ್ ಸೈನಿಕರ ನಿರಂತರ ದೌರ್ಜನ್ಯವನ್ನು ಕಂಡು ಆಗಿನ ನಮ್ಮ ದೇಶದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಆಗಿನ ಈಸ್ಟ್ ಪಾಕಿಸ್ತಾನ ಸೈನಿಕರಿಗೆ ಸಹಾಯ ಹಸ್ತ ನೀಡಿದರು. ಪಾಕ್ ಸೈನಿಕರ ಅತ್ಯಾಚಾರ ಮತ್ತು ಬೆದರಿಕೆಯಿಂದ ದೇಶ ಬಿಟ್ಟ ಬಾಂಗ್ಲಾ ಪ್ರಜೆಗಳಿಗೆ ಭಾರತದಲ್ಲಿ ಆಶ್ರಯ ನೀಡಲಾಯಿತು. ಸರಿಸುಮಾರು 8 ರಿಂದ 10 ಮಿಲಿಯನ್ ಮಂದಿ ದೇಶ ಬಿಟ್ಟು ಪಲಾಯನ ಮಾಡಿದ್ದರು ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಭಾರತ ಸೇನೆ ಈಸ್ಟ್ ಪಾಕಿಸ್ತಾನಕ್ಕೆ ನೆರವು ನೀಡಿದಾಗ ಕೆರಳಿದ ಪಾಕಿಸ್ತಾನ ಅಧಿಕೃತವಾಗಿ 1971 ಡಿಸೆಂಬರ್ 3 ರಂದು  ಭಾರತದ ಮೇಲೆ ಅಧಿಕೃತವಾಗಿ ಯುದ್ದ ಸಾರಿತು. ಭಾರತದ ವಾಯುಸೇನಾ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ಮಾಡಿತು.  ಆಗ ನಮ್ಮ ಭಾರತ ಪ್ರಧಾನಿಯವರ ಆದೇಶದಂತೆ ಆಗಿನ ಭೂಸೇನೆಯ ಚೀಫ್ ಜನರಲ್ ಸಾಮ್ ಮಾನಿಕ್‌ಷಾ ಅವರ ನೇತೃತ್ವದಲ್ಲಿ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಒಟ್ಟಾಗಿ ಪಾಕಿಸ್ತಾನದ ಮೇಲೆ ಯುದ್ಧ ಸಾರಿತು ಮತ್ತು ಪಾಕಿಸ್ತಾನ ಸೇನೆಯನ್ನು ಕೇವಲ 13 ದಿನಗಳಲ್ಲಿ ಹೊಸಕಿ ಹಾಕಿ  ನಿರ್ಣಾಮ ಮಾಡಿತು. ನಮ್ಮ ಭಾರತ ಸೇನೆಯ ಆರ್ಭಟಕ್ಕೆ ಬೆದರಿದ ಪಾಕಿಸ್ತಾನ  ಸಂಪೂರ್ಣವಾಗಿ ಸೋತು ತನ್ನ ಉಳಿದ 93,000 ಸೈನಿಕರ ಜೊತೆ ಶರಣಾಗತಿಯಾಗಿ  ಜೀವ ಭಿಕ್ಷೆ ಬೇಡಿದೆ.  ಈ ಯುದ್ಧದಲ್ಲಿ ಸರಿಸುಮಾರು 3800 ಭಾರತದ ಮತ್ತು ಪಾಕಿಸ್ತಾನದ ಸೈನಿಕರು ಜೀವತೆತ್ತರು.  ಈ ಯುದ್ಧದ ಪರಿಣಾಮವಾಗಿ ಆಗ ಈಸ್ಟ್ ಪಾಕಿಸ್ತಾನ ಎಂದು ಕರೆಯಲ್ಪಡುತ್ತಿದ್ದ ಈಗಿನ ಬಾಂಗ್ಲಾದೇಶದ ಉದಯವಾಯಿತು. ಅಲ್ಲಿಯವರೆಗೆ ಪಾಕಿಸ್ತಾನದ ನಿಯಂತ್ರಣದಲ್ಲಿದ್ದ ಈ ಭೂ ಪ್ರದೇಶ ಸಂಪೂರ್ಣವಾಗಿ ಸ್ವತಂತ್ರವಾಗಿ ಬಾಂಗ್ಲಾದೇಶದ ಉದಯವಾಯಿತು. ಈಗಲೂ ಡಿಸೆಂಬರ್ 16 ರಂದು ಬಾಂಗ್ಲಾದೇಶದಲ್ಲಿ ‘ಜಿಜೋಯ್ ದಿವಸ್’ ಎಂದು ಆಚರಿಸಿ ಸಂಭ್ರಮಿಸುತ್ತಾರೆ. ಈ ಯುದ್ಧದಲ್ಲಿ ಮಡಿದ ಮತ್ತು ಬಲಿದಾನಗೈದ ಸೈನಿಕರ ನೆನಪಿಗಾಗಿ ಬಾರತ ದೇಶಾದ್ಯಂತ ವಿಜಯ್ ದಿವಸ’ ಎಂದು ಆಚರಿಸಿ ಅವರ ತ್ಯಾಗ ಬಲಿದಾನವನ್ನು ನೆನಪಿಸಿ ಗೌರವಿಸಲಾಗುತ್ತದೆ. ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ 1972 ಆಗಸ್ಟ್ ತಿಂಗಳಲ್ಲಿ ಬಾಂಗ್ಲಾ  ಶಿಮ್ಲಾ ಒಪ್ಪಂದ ನಡೆಯುತ್ತದೆ. ಈ ಒಪ್ಪಂದದಂತೆ ಭಾರತ  ತನ್ನ ಬಳಿ ಒತ್ತೆಯಾಳಾಗಿದ್ದ 93,000 ಪಾಕಿಸ್ತಾನಿ ಸೈನಿಕರನ್ನು ಬಿಡುಗಡೆ ಮಾಡುತ್ತದೆ. ಈಗಲೂ ಈ ಒಪ್ಪಂದವನ್ನು ಜನರು ಟೀಕಿಸುತ್ತಾರೆ. ಪಾಕ್ ಸೈನಿಕರನ್ನು ಬಿಡುಗಡೆಗೊಳಿಸುವ ಮೊದಲು ಕಾಶ್ಮೀರವನ್ನು ಭಾರತಕ್ಕೆ ಬಿಟ್ಟುಕೊಡಬೇಕೆಂಬ ವಾದ ಮಂಡಿಸಿ ಕಾಶ್ಮೀರ ಸಮಸ್ಯೆಯನ್ನು ಸುಲಭವಾಗಿ ಶಾಶ್ವತವಾಗಿ ಪರಿಹರಿಸುವ ಸುವರ್ಣಾವಕಾಶವನ್ನು ಭಾರತ ಕೈಚೆಲ್ಲಿತು ಎಂದು ಹಲವರು ಈಗಲೂ ವಾದಿಸುತ್ತಾರೆ.

Also Read  ವಿಶ್ವ ಆಹಾರ ದಿನ ಅಕ್ಟೋಬರ್-16; ಡಾ. ಮುರಲೀ ಮೋಹನ ಚೂಂತಾರು

ಕೊನೆಮಾತು:

ಡಿಸೆಂಬರ್ 16 ರಂದು  ವಿಜಯ್ ದಿವಸವನ್ನು  ವಿಕ್ಟರಿ ದಿನವೆಂದೂ ಆಚರಿಸಲಾಗುತ್ತದೆ. ಅದೇ ರೀತಿ ಮೇ 3 ರಿಂದ  ಜುಲೈ 26, 1999 ರವರೆಗಿನ ಪಾಕಿಸ್ತಾನದ ವಿರುದ್ಧದ ಭಾರತದ ಸೇನೆಯ ಜಯವನ್ನು ‘ಕಾರ್ಗಿಲ್ ವಿಜಯ್ ದಿವಸ’ ಎಂದು ಆಚರಿಸಲಾಗುತ್ತದೆ. ಕಾರ್ಗಿಲ್ ಕದನ ಮೇ , 1999ರಲ್ಲಿ  ಆರಂಭವಾಗಿ ಸುಮಾರು 90 ದಿನಗಳ ಕಾಲ ಯುದ್ಧ ನಡೆದು ಜುಲೈ26, 1999ರಂದು ಭಾರತದ ವಿಜಯದಲ್ಲಿ ಮುಕ್ತಾಯವಾಗಿತ್ತು. ಡಿಸೆಂಬರ್ 16, 1971ರಂದು ಬಾಂಗ್ಲಾದೇಶದ ಸ್ವತಂತ್ರ ಸಂಗ್ರಾಮದ 9 ತಿಂಗಳ ಯುದ್ಧ ಬಾಂಗ್ಲಾ ದೇಶದ ಉದಯವಾಗುವುದರಲ್ಲಿ  ಸುಖಾಂತ್ಯಗೊಂಡಿತು. ಬಾಂಗ್ಲಾದೇಶದ ಸ್ವತಂತ್ರ ಕದನದ ಇತಿಹಾಸದ ಒಂದು ದೊಡ್ಡ ಕದನ ಎಂದರೆ ತಪ್ಪಾಗಲಾರದು. ಈ ಯುದ್ಧದಿಂದಾಗಿ ಸುಮಾರು 10 ಮಿಲಿಯನ್ ಮಂದಿ ನಿರಾಶ್ರಿತರು ಹುಟ್ಟಿಕೊಂಡರು ಮತ್ತು ಸುಮಾರು 3 ಮಿಲಿಯನ್ ಮಂದಿ ಹತರಾದರು ಎಂದು ಇತಿಹಾಸ ಹೇಳುತ್ತದೆ. ಈಗಿನ ಪಾಕಿಸ್ತಾನ ಆಗಿನ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ ಅಥವಾ ವೆಸ್ಟ್ ಪಾಕಿಸ್ತಾನ ಎಂದು ಕರೆಯಲ್ಪಡುತ್ತಿತ್ತು. ಈಸ್ಟ್ ಪಾಕಿಸ್ತಾನ ಮತ್ತು ವೆಸ್ಟ್  ಪಾಕಿಸ್ತಾನದ ನಡುವಿನ ಆಂತರಿಕ ಕಲಹದಿಂದಾಗಿ ಭಾರತಕ್ಕೆ ಬಹಳ ಕಿರಿಕಿರಿಯುಂಟಾಗಿ ಲಕ್ಷಾಂತರ ನಿರಾಶ್ರಿತರು ಹುಟ್ಟಿಕೊಂಡು ಭಾರತಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇದಕ್ಕೆ ಶಾಶ್ವತ ಪರಿಹಾರ ಪಡೆಯಲು ಮತ್ತು ವೆಸ್ಟ್ ಪಾಕಿಸ್ತಾನದ ನಿರಂತರ ದೌರ್ಜನ್ಯ ಮತ್ತು ಶೋಷಣೆಯನ್ನು ವಿರೋಧಿಸಿ ಭಾರತ ಈಸ್ಟ್ ಪಾಕಿಸ್ತಾನವನ್ನು  ಬೆಂಬಲಿಸಿ ‘ಮುಕ್ತಿ ಬಾಹಿನಿ’ ಸೈನ್ಯದ ಜೊತೆ ಸೇರಿ ವೆಸ್ಟ್ ಪಾಕಿಸ್ತಾನವನ್ನು ಹೊಸಕಿ ಹಾಕಿ ಹೊಸ ಇತಿಹಾಸ ಬರೆದು ಹೊಸ ಬಾಂಗ್ಲಾದೇಶ ಎಂಬ ದೇಶದ ಉದಯಕ್ಕೆ ಕಾರಣವಾಯಿತು.

Also Read  ತಾಪಮಾನ ತಗ್ಗಿಸಲು ಗಿಡ ನೆಡುವುದೊಂದೇ ದಾರಿ ➤ ಶ್ರೀ ಮಾಧವ ಉಳ್ಳಾಲ್

 ಡಾ|| ಮುರಲೀ ಮೋಹನ್ ಚೂಂತಾರು

error: Content is protected !!
Scroll to Top