(ನ್ಯೂಸ್ ಕಡಬ) newskadaba.com ಅಮೃತಸರ, ಡಿ. 14 . ಭದ್ರತಾ ಪಡೆಯ ಸೈನಿಕನೋರ್ವ ತನ್ನ ಕರ್ತವ್ಯದ ಗನ್ ನಿಂದ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ನಂತರ ತನ್ನ ಮೇಲೂ ಗುಂಡು ಹಾರಿಸಿಕೊಂಡಿರುವ ಘಟನೆ ಪಂಜಾಬ್ ನ ಅಮೃತಸರ ಜಿಲ್ಲೆಯ ಖಾಸಾದಲ್ಲಿರುವ ಬಿ ಎಸ್ ಎಫ್ ಪಡೆಯ ಪ್ರಧಾನ ಕಚೇರಿಯೊಳಗೆ ಸಂಭವಿಸಿದೆ.
ಮೃತಪಟ್ಟವರನ್ನು ಬಿಹಾರದ ಹೆಡ್ ಕಾನ್ಸ್ಟೇಬಲ್ ಗಳಾದ ರಾಮ್ ಬಿನೋದ್, ಮಹಾರಾಷ್ಟ್ರದ ಡಿಎಸ್ ತೊರಸ್ಕರ್, ಜಮ್ಮುಕಾಶ್ಮೀರದ ರತ್ತನ್ ಸಿಂಗ್ ಮತ್ತು ಹರಿಯಾಣದ ಪಾಣಿಪತ್ ನ ಬಲ್ವಿಂದರ್ ಕುಮಾರ್ ಹಾಗೂ ಗುಂಡು ಹಾರಿಸಿರುವ ಕರ್ನಾಟಕ ಮೂಲದ ಸೆಟ್ಟೆಪ್ಪ ಎಂದು ಗುರುತಿಸಲಾಗಿದೆ. ಗುಂಡು ಹಾರಿಸಿದ ಯೋಧ ತನ್ನ ಕರ್ತವ್ಯ ಸಮಯದ ವೇಳಾಪಟ್ಟಿಯ ಕುರಿತು ಅಸಮಾಧಾನ ಹೊಂದಿದ್ದು, ಇದೇ ಕಾರಣಕ್ಕೆ ಗುಂಡಿನ ದಾಳಿ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ತನಿಖೆಯ ಬಳಿಕವಷ್ಟೇ ಸತ್ಯಾಂಶ ತಿಳಿಯಲಿದೆ.