(ನ್ಯೂಸ್ ಕಡಬ) newskadaba.com ಹೈದರಾಬಾದ್, ಡಿ. 14. ತಂದೆಯ ಸಾಲ ತೀರಿಸಲು ತನ್ನ ಕಿಡ್ನಿ ಮಾರಲು ಹೋದ ವಿದ್ಯಾರ್ಥಿನಿಯೋರ್ವಳು ಸೈಬರ್ ವಂಚಕರಿಂದ ವಂಚನೆಗೊಳಗಾಗಿ 16 ಲಕ್ಷ ರೂ. ಕಳೆದುಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಹೈದರಾಬಾದ್‌ನ ಗುಂಟೂರಿನಲ್ಲಿ ನರ್ಸಿಂಗ್ ಕಲಿಯುತ್ತಿದ್ದ ವಿದ್ಯಾರ್ಥಿನಿ, ತನ್ನ ತಂದೆ ಮಾಡಿದ್ದ 2 ಲಕ್ಷ ರೂ. ಸಾಲ ತೀರಿಸಲು ಮೂತ್ರಪಿಂಡವನ್ನೇ ಮಾರಾಟ ಮಾಡಲು ಯತ್ನಿಸಿದ್ದಾಳೆ. ಇದಕ್ಕಾಗಿ ಆಕೆ ಆನ್‌ಲೈನ್ ಮೂಲಕ ಅಪರಿಚಿತರನ್ನು ಸಂಪರ್ಕಿಸಿದಾಗ ಪ್ರವೀಣ್‌ರಾಜ್ ಎಂಬಾತ 3 ಕೋಟಿ ರೂ. ಆಫರ್ ನೀಡಿದ್ದ. ಅಲ್ಲದೇ ಶೇ. 50 ಹಣವನ್ನು ಮೊದಲು ಕೊಡುವುದಾಗಿಯೂ ಉಳಿದದ್ದನ್ನು ಆಪರೇಶನ್ ಮುಗಿದ ನಂತರ ಕೊಡುವುದಾಗಿಯೂ ಹೇಳಿದ್ದಾನೆ. ಬಳಿಕ ಪೊಲೀಸ್ ವೆರಿಫಿಕೇಶನ್ ಹಾಗೂ ತೆರಿಗೆ ಹಣವಾಗಿ 16 ಲಕ್ಷ ರೂ. ಪಾವತಿಸಬೇಕೆಂದು ಆತ ಕೇಳಿದ್ದನು. ಆತನ ಮಾತನ್ನು ನಂಬಿದ ವಿದ್ಯಾರ್ಥಿನಿ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಿ 16 ಲಕ್ಷ ರೂ.ಗಳನ್ನು ಪಾವತಿಸಿದ್ದಾಳೆ. ಬಳಿಕ 16 ಲಕ್ಷ ರೂ.ಗಳನ್ನು ಕೇಳಿದಾಗ ಅಪರಿಚಿತ ವ್ಯಕ್ತಿಗಳು ದೆಹಲಿಗೆ ಬಂದು ಹಣ ಪಡೆದುಕೊಳ್ಳುವಂತೆ ಹೇಳಿದ್ದು, ಆಕೆ ಅಪರಿಚಿತರು ನೀಡಿದ ವಿಳಾಸಕ್ಕೆ ಹೋಗಿ ನೋಡಿದಾಗ ವಿಳಾಸ ನಕಲಿಯಾಗಿರುವುದು ಕಂಡು ಬಂದಿದೆ. ಕೂಡಲೇ ವಂಚನೆಯ ಅರಿವಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ.