(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 13. ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ಮಾಲಕರುಗಳಿಗೆ ಪರಿಹಾರ ನೀಡಲು 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚರ್ಮಗಂಟು ರೋಗದಿಂದ ಬಳಲಿ ಮೃತಪಟ್ಟ ಜಾನುವಾರುಗಳ ಮಾಲಕರು ಮತ್ತು ರೈತರ ಆರ್ಥಿಕ ನಷ್ಟವನ್ನು ತಪ್ಪಿಸಲು ಮೃತ ರಾಸುಗಳಿಗೆ ಪರಿಹಾರ ನೀಡಲು 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಚರ್ಮಗಂಟು ರೋಗವನ್ನು ಹತೋಟಿಗೆ ತರಲಾಗುತ್ತಿದ್ದರೂ, ಈಗಾಗಲೇ 17 ಸಾವಿರ ಜಾನುವಾರುಗಳು ಮೃತಪಟ್ಟಿದ್ದು, ಜಾನುವಾರುಗಳ ಮಾಲಕರ ಆರ್ಥಿಕ ಸ್ಥಿತಿಯನ್ನು ಅರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 30 ಕೋಟಿ ರೂ. ಪರಿಹಾರ ಧನ ನೀಡಿರುವ ಕ್ರಮವನ್ನು ಅಭಿನಂದಿಸಿರುವ ಅವರು, ಕೃತಜ್ಞತೆಗಳನ್ನು ಸಲ್ಲಿಸಿ, ನಮ್ಮ ಸರ್ಕಾರ ಸದಾ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಲಿದೆ, ಜಾನುವಾರುಗಳ ಆರೋಗ್ಯ ರಕ್ಷಣೆಯಲ್ಲಿ ಸರ್ಕಾರ ಸಕ್ರಿಯವಾಗಿದೆ ಎಂದಿದ್ದಾರೆ. ರಾಜ್ಯದಲ್ಲಿ ಈವರೆಗೆ 2 ಲಕ್ಷ ರಾಸುಗಳು ಚರ್ಮಗಂಟು ರೋಗದಿಂದ ಬಳಲುತ್ತಿದ್ದು, ಈ ಪೈಕಿ 1.50 ಲಕ್ಷ ರಾಸುಗಳು ಚೇತರಿಕೆಯಾಗಿವೆ. ಇನ್ನುಳಿದ ರಾಸುಗಳಿಗೆ ಸರ್ಕಾರದಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟ ಜಾನುವಾರುಗಳ ಮಾಲಕರಿಗೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರ ಧನ ವಿತರಣೆ ಮಾಡಲಾಗುತ್ತಿದೆ ಎಂದು ಪ್ರಭು ಚವ್ಹಾಣ್ ಮಾಹಿತಿ ನೀಡಿದ್ದಾರೆ.
ಚರ್ಮಗಂಟು ರೋಗ ಕಾಣಿಸಿಕೊಂಡ ಜಾನುವಾರುಗಳ ಆರೋಗ್ಯ ಸಮಸ್ಯೆ ಹೊತ್ತು ಬರುವ ರೈತರು ಹಾಗೂ ದೂರವಾಣಿ ಕರೆಗಳಿಗೆ ಕೂಡಲೇ ಸ್ಪಂದಿಸಿ, ಸೂಕ್ತ ಚಿಕಿತ್ಸೆ ನೀಡಿ, ರೋಗ ಹರಡದಂತೆ ಪಶು ವೈದ್ಯಾಧಿಕಾರಿಗಳು ಮತ್ತು ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಶ್ರಮಿಸುವಂತೆ ಸೂಚನೆ ನೀಡಿದ್ದಾರೆ. ಜನರಿಗೆ ಆರೋಗ್ಯ ಸಮಸ್ಯೆ ಎದುರಾದರೆ ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ಮಾತು ಬಾರದ ಮೂಕ ಪ್ರಾಣಿಗಳು ತಮ್ಮ ನೋವನ್ನು ಹೇಗೆ ವ್ಯಕ್ತಪಡಿಸುತ್ತವೆ ಎನ್ನುವುದನ್ನು ನಿರ್ಲಕ್ಷ್ಯ ಮಾಡದೇ ಕೂಡಲೇ ಜಾನುವಾರುಗಳ ಚಿಕಿತ್ಸೆ ಧಾವಿಸಿ, ಗೋಮಾತೆ ಸಂರಕ್ಷಿಸೋಣ ಎಂದು ಸಚಿವ ಪ್ರಭು ಚವ್ಹಾಣ್ ಪಶು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.