(ನ್ಯೂಸ್ ಕಡಬ) newskadaba.com ಉಡುಪಿ, ನ.22. ನಾಡ ಬಾಂಬ್ ತಯಾರಿಸಿ ಮಾರಾಟ ಮಾಡುವುದಲ್ಲದೆ ಕಾಡುಪ್ರಾಣಿಗಳನ್ನು ಕೊಲ್ಲುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಕಾರ್ಕಳ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿ, 33 ನಾಡಾ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಶಂಕರನಾರಾಯಣ ಆಲ್ಬಾಡಿ ಗ್ರಾಮದ ಆರ್ಡಿ ಕೊಳಲಾಡಿಯ ಗುಣಕರ ಶೆಟ್ಟಿ (56), ಲಕ್ಷ್ಮಣ ಶೆಟ್ಟಿ ಯಾನೆ ಲಚ್ಚು ಶೆಟ್ಟಿ (67), ಹೆಬ್ರಿ ಕನ್ಯಾನ ಅರ್ಕುಂಜೆಯ ನಾಗೇಶ್ ನಾಯಕ್ (35) ಎಂದು ಗುರುತಿಸಲಾಗಿದೆ.
ಈ ಸಂಬಂಧ ಉಡುಪಿ ಎಸ್ಪಿ ಕಚೇರಿಯಲ್ಲಿ ಬುಧವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಂಜೀವ ಎಂ.ಪಾಟೀಲ್, ಮಂಗಳವಾರದಂದು ಸಂಜೆ 5 ಗಂಟೆಗೆ ಹೆಬ್ರಿ ಪೊಲೀಸ್ ಠಾಣೆ ಉಪನಿರೀಕ್ಷಕ ಜಗನ್ನಾಥ ಟಿ.ಟಿ. ಖಚಿತ ಮಾಹಿತಿ ಮೇರೆಗೆ ಶಿವಪುರ ಗ್ರಾಮದ ಬ್ಯಾಣ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಸವಾರ ನಾಗೇಶ್ ನಾಯಕ್‌ನನ್ನು ವಿಚಾರಿಸಿ, ವಾಹನವನ್ನು ಪರಿಶೀಲಿಸಿದಾಗ ಸೀಟಿನ ಕೆಳಭಾಗದ ಬಾಕ್ಸ್‌ನಲ್ಲಿ 30 ನಾಡ ಬಾಂಬ್ ಗಳು, ಒಂದು ತಲೆಗೆ ಕಟ್ಟುವ ಟಾರ್ಚರ್, ಒಂದು ಚೂರಿ ಹಾಗೂ ರೈನ್‌ಕೋಟ್ ಪ್ತೆಯಾಗಿದ್ದವು ಎಂದು ಎಸ್ಪಿ ತಿಳಿಸಿದರು.
ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿಡದಾಗ ನಾಡ ಬಾಂಬುಗಳನ್ನು ಕಾಡಿನಲ್ಲಿಟ್ಟು ಕಾಡು ಪ್ರಾಣಿಗಳನ್ನು ಕೊಲ್ಲುತ್ತಿದ್ದುದಾಗಿ ತಿಳಿದುಬಂದಿದೆ ಎಂದರು.