ಬಾಲಗಂಗಾಧರನಾಥ ಸ್ವಾಮೀಜಿಯವರಿಗೆ ಅವರೇ ಸಾಟಿ – ಧರ್ಮಪಾಲನಾಥ ಸ್ವಾಮೀಜಿ ➤ಆದಿಚುಂಚನಗಿರಿ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ೭೮ ನೇ ಜಯಂತ್ಯೋತ್ಸವ ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಡಿ.10  ಸುಧೀರ್ಘ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿರುವ ನಾಥ ಪರಂಪರೆಯ ೭೨ ಜಗದ್ಗುರುಗಳನ್ನು ಕಂಡಿರುವ ಪ್ರಾಚೀನ ಇತಿಹಾಸ ಹೊಂದಿರುವ ಆದಿಚುಂಚನಗಿರಿ ಧರ್ಮ ಪೀಠವನ್ನು  ಭೈರವೈಕ್ಯರಾಗಿರುವ ಬಾಲಗಂಗಾಧರನಾಥ ಸ್ವಾಮೀಜಿಯವರು ಅಲಂಕರಿಸಿದ ಬಳಿಕ ಅಭೂತಪೂರ್ವ ಸಾಧನೆ ಮಾಡಿರುವ  ಸ್ವಾಮೀಜಿಯವರಿಗೆ ಅವರೇ ಸಾಟಿ ಬೇರೆ ಯಾರೂ ಇಲ್ಲ ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು. ಅವರು ಶುಕ್ರವಾರ ಕಡಬ ಒಕ್ಕಲಿಗ ಗೌಡ ಸಮುದಾಯವ ಭವನದಲ್ಲಿ ದಶಂಬರ್ ೨೨ ರಂದು ಪುತ್ತೂರಿನಲ್ಲಿ ನಡೆಯುವ ಆದಿಚುಂಚನಗಿರಿ ಮಠದ ಭೈರವೈಕ್ಯ ಡಾ|ಬಾಲಗಂಗಾಧರನಾಥ ಸ್ವಾಮೀಜಿ ಅವರ ೭೮ ನೇ ಜಯಂತ್ಯೋತ್ಸವ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿದರು.

ಬಾಲಗಂಗಾಧರನಾಥ ಸ್ವಾಮೀಜಿಯವರ ಪಟ್ಟಕ್ಕೆ ಬಂದ ಸಂದರ್ಭದಲ್ಲಿ ಕೇವಲ ೫೪ ಮಕ್ಕಳು ಇದ್ದ   ಮಠವನ್ನು ಬೃಹತ್ ವಟವೃಕ್ಷವನ್ನಾಗಿ ಮಾಡಿ ವಿಶ್ವದ ಭೂಪಟದಲ್ಲಿ ತನ್ನ  ಬಾಹುಳ್ಯವನ್ನು ಪಸರಿಸಿದ್ದಾರೆ. ಕೇವಲ ಮೂರುಮುಕ್ಕಾಳು ದಶಕಗಳಲ್ಲಿ ೪೮೦ ಸಂಸ್ಥೆಗಳನ್ನು ತೆರೆದು ಒಂದು ಲಕ್ಷದ ೫೮ ಸಾವಿರ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ ಅವರಿಗೆ ಭವಿಷ್ಯ ಕಲ್ಪಿಸಿದ್ದಾರೆ. ಅವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರವಾದುದು, ಅವರ ಗುಣಗಳನ್ನು ವ್ಯಕ್ತಿತ್ವವನ್ನು  ಅಲೆಯಲು ಸಾಧ್ಯವಿಲ್ಲ. ಇಂತಹ ಮಹಾ ಸ್ವಾಮೀಜಿಯವರ ಜಯಂತ್ಯೋತ್ಸವ ಆಚರಿಸುವ ಸೌಭಾಗ್ಯ ನಮ್ಮ ಪಾಲಿಗೆ ಒದಗಿ ಬಂದಿದೆ. ಇದನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ  ಎಂದು ಹೇಳಿದ ಸ್ವಾಮೀಜಿ ಪುತ್ತೂರಿನ ಕಾರ್ಯಕ್ರಮದಲ್ಲಿ ಭಾಗವಹಿಸುವ  ಮೂಲಕ ಸಮಾಜದ ಎಲ್ಲಾ ಸ್ತರದ ಜನ ಒಗ್ಗಟ್ಟು ಸೌಹಾರ್ದತೆಯನ್ನು ಪ್ರದರ್ಶಿಸಬೇಕು, ಬದಲಾವಣೆಯ ಕಾಲಘಟ್ಟದಲ್ಲಿ ಸಮಾಜ ಬೆಳೆದಿದೆ, ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿ ಮಾಡಿಕೊಂಡು ಬೆಳೆಯಬೇಕು ಎಂದರು.

Also Read  ಡಿಜಿಟಲ್ ಮಾದರಿಯ ಜಾಹೀರಾತು ಫಲಕ ಅಳವಡಿಕೆ ➤ಸಾರ್ವಜನಿಕರಲ್ಲಿ ಮನವಿ

ಈ ಸಂದರ್ಭದಲ್ಲಿ ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರದಲ್ಲಿ  ದಶಂಬರ್ ೧೮ ನೇ ಭಾನುವಾರ ನಡೆಯಲಿರುವ ವಲಯಮಟ್ಟದ ವಾರ್ಷಿಕ ಕ್ರೀಡಾ ಕೂಟದ ಆಮಂತ್ರಣ ಪತ್ರಿಕೆಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ಪುತ್ತೂರು ತಾಲೂಕು ಅಧ್ಯಕ್ಷ ವಿಶ್ವನಾಥ ಗೌಡ ಪುತ್ತೂರಿನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ನಿಕಟಪೂರ್ವಾಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ಸಭೆಯ ಅಧ್ಯಕ್ಷತೆವಹಿಸಿ ಪುತ್ತೂರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುವ ನಿಟ್ಟಿನಲ್ಲಿ ರಚಿಸಲಾದ ಸಮಿತಿಯನ್ನು ಘೋಷಿಸಿದರು.  ವೇದಿಕೆಯಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಮುಖರಾದ, ಚಂದ್ರಶೇಖರ ಗೌಡ ಕೋಡಿಬೈಲು, ಜನಾರ್ಧನ ಗೌಡ ಪಣೆಮಜಲು,  ರಾಧಾಕೃಷ್ಣ ಗೌಡ, ವೆಂಕಟ್ರಾಜ್ ಗೌಡ, ಶಿವಪ್ರಸಾದ್ ಪುತ್ತಿಲ, ನೀಲಾವತಿ ಶಿವರಾಮ್, ಗಣೇಶ್ ಕೈಕುರೆ, ಮೇದಪ್ಪ ಗೌಡ ಡೆಪ್ಪುಣಿ, ಮತ್ತಿತರರು ಉಪಸ್ಥಿತರಿದ್ದರು.

Also Read  ಉಗ್ರ ಪರ ಗೋಡೆ ಬರಹ ಪ್ರಕರಣ ➤ ಶಾರೀಕ್ ಎಂಬಾತ ಪ್ರಮುಖ ಆರೋಪಿ.!

ಮೋಹನ ಗೌಡ ಕೋಡಿಂಬಾಳ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಪ್ರಸ್ತಾವನೆಗೈದು  ಸ್ವಾಗತಿಸಿದರು.  ಕಾರ್ಯದರ್ಶಿ  ಪ್ರಶಾಂತ್ ಪಂಜೋಡಿ  ವಂದಿಸಿದರು.

ಒಕ್ಕಲಿಗ ಗೌಡ ಸೆವಾ ಸಂಘದ ಕಾರ್ಯದರ್ಶಿ ಮಂಜುನಾಥ ಗೌಡ  ಕೋಲಂತಾಡಿ ಕಾರ್ಯಕ್ರಮ ನಿರೂಪಿಸಿದರು.

 

error: Content is protected !!
Scroll to Top