(ನ್ಯೂಸ್ ಕಡಬ) newskadaba.com ಕಾರವಾರ, ನ.22. ಟಿಪ್ಪರ್ ನ ಚಕ್ರ ಸಿಲುಕಿ ಹಾರಿದ ಕಲ್ಲೊಂದು ರಸ್ತೆ ಬದಿಯಲ್ಲಿ ಮಲಗಿಸಿದ್ದ ಮಗುವಿನ ತಲೆಗೆ ಹೊಡೆದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಮಂಗಳವಾರದಂದು ಕಾರವಾರದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಸಾತೊಡ್ಡಿ ಜಲಪಾತಕ್ಕೆ ಹೋಗುವ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಗೆ ಕೂಲಿಯಾಳಾಗಿ ಬಂದಿದ್ದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ನರೇಗಲ್ ನಿವಾಸಿ ಮಂಜಮ್ಮ ಹರಿಜನ ಎಂಬಾಕೆ ತನ್ನ ಒಂದು ವರ್ಷದ ಮಗು ಅರ್ಪಿತಾಳನ್ನು ರಸ್ತೆಯ ಪಕ್ಕ ಮಲಗಿಸಿ ಕೆಲಸದಲ್ಲಿ ನಿರತರಾಗಿದ್ದರು. ಮಂಗಳವಾರದಂದು ನೀರು ಸಾಗಿಸುವ ಟಿಪ್ಪರ್ ರಸ್ತೆಯ ಮೇಲೆ ಸಂಚರಿಸುವಾಗ ಅದರ ಚಕ್ರಕ್ಕೆ ಸಿಕ್ಕಿದ ಕಲ್ಲೊಂದು ಮಲಗಿದ್ದ ಅರ್ಪಿತಾಳ ತಲೆಗೆ ಹೊಡೆದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅರ್ಪಿತಾ ಹಾದಿ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ತನ್ನ ಮಗುವಿನ ಹೊಟ್ಟೆ ತುಂಬಿಸಲೆಂದೇ ದಿನವಿಡೀ ರಸ್ತೆ ಕೆಲಸ ಮಾಡಿ ಹಣ ಸಂಪಾದಿಸುತ್ತಿದ್ದ ಮಂಜಮ್ಮನ ಆಕ್ರಂದನ ಕರುಳು ಕಿತ್ತು ಬರುವಂತಿತ್ತು.
ವಿಧಿಯಾಟಕ್ಕೆ, ಅಜಾಗರೂಕತೆಗೆ ಕಂದಮ್ಮ ಬಲಿಯಾಗಿದೆ. ಪೊಲೀಸ್ ನಿರೀಕ್ಷಕ ಡಾ.ಮಂಜುನಾಥ ನಾಯಕ, ಪಿಎಸ್ ಐ ಲಕ್ಕಪ್ಪ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.