(ನ್ಯೂಸ್ ಕಡಬ) newskadaba.com ಡಿ. 09. ಜಪಾನೀಸ್ ಎನ್‌ಸೆಫಲೈಟಿಸ್ ವೈರಸ್ ಎಂಬ ವೈರಾಣುವಿನಿಂದ ಈ ರೋಗ ಹರಡುತ್ತದೆ. ಮೊದಲ ಬಾರಿ ಈ ರೋಗ ಜಪಾನಿನಲ್ಲಿ 1871ರಲ್ಲಿ ಕಂಡು ಬಂದ ಕಾರಣ ಈ ಜ್ವರಕ್ಕೆ ಜಪಾನೀಸ್ ಎನ್‌ಸೆಫಲೈಟಿಸ್ ಎಂದು ನಾಮಕರಣ ಮಾಡಲಾಯಿತು. ಸಾಮಾನ್ಯವಾಗಿ ಹಂದಿಗಳಲ್ಲಿ ಕಂಡು ಬರುವ (ಕೆಲವೊಂದು ಪ್ರಬೇಧದ ಹಕ್ಕಿಗಳಲ್ಲಿಯೂ ಕಂಡು ಬರುತ್ತದೆ) ಈ ವೈರಾಣು, ಹಂದಿಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಈ ರೋಗಾಣು ಇರುವ ಹಂದಿಗಳನ್ನು ಕಡಿದ ಕ್ಯೂಲೆಕ್ಸ್ ಸೊಳ್ಳೆಗಳು ಮನುಷ್ಯರನ್ನು ಕಚ್ಚಿದಾಗ, ರೋಗ ಮನುಷ್ಯನಿಗೆ ಹರಡುತ್ತದೆ. ಚಿಕ್ಕ ಮಕ್ಕಳಲ್ಲಿ 2 ರಿಂದ 3 ವರ್ಷಗಳಲ್ಲಿ ಹೆಚ್ಚಾಗಿ ಈ ರೋಗ ಕಾಣಿಸುತ್ತದೆ. 16 ವರ್ಷಗಳ ಕೆಳಗಿನ ಮಕ್ಕಳಿಗೆ ಹೆಚ್ಚು ಬಾಧಿಸುತ್ತದೆ. ಭಾರತದಲ್ಲಿ ಮೊದಲ ಬಾರಿಗೆ ಈ ರೋಗವನ್ನು 1955ರಲ್ಲಿ ತಮಿಳುನಾಡಿನಲ್ಲಿ ಪತ್ತೆ ಹಚ್ಚಲಾಯಿತು. ಕ್ರಮೇಣ ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶಗಳಿಗೆ ಹರಡಿತು. ಯಾವುದೇ ರೀತಿಯ ಪರಿಣಾಮಕಾರಿಯಾದ ಚಿಕಿತ್ಸೆ ಈ ರೋಗಕ್ಕೆ ಇಲ್ಲ. ಆದರೆ ಪರಿಣಾಮಕಾರಿಯಾದ ಲಸಿಕೆಗಳು ಲಭ್ಯವಿದ್ದು ಪ್ರತಿ 3 ವರ್ಷಗಳಿಗೊಮ್ಮೆ ತೆಗೆದುಕೊಳ್ಳತಕ್ಕದ್ದು. 1930, 40ರ ದಶಕದಲ್ಲಿಯೇ ಪರಿಣಾಮಕಾರಿಯಾದ ಲಸಿಕೆಗಳು ಮಾರುಕಟ್ಟೆಗೆ ಬಂದರೂ ಹೆಚ್ಚಿನ ದರದಿಂದಾಗಿ ಭಾರತದಲ್ಲಿ 2000ನೇ ಇಸವಿ ಬಳಿಕ ಹೆಚ್ಚು ಬಳಕೆಗೆ ಬಂದಿದೆ. ನಿಷ್ಕಿಯಗೊಳಿಸಿದ ವೈರಾಣುಗಳನ್ನು ಈ ಲಸಿಕೆಗಳ ಮುಖಾಂತರ ನೀಡಿ, ದೇಹದಲ್ಲಿ ಪ್ರತಿ ಬಂಧಕಗಳು (ಆಂಟಿಬಾಡಿಗಳು) ಉತ್ಪತ್ತಿಯಾಗುವಂತೆ ಮಾಡಿ ರೋಗವನ್ನು ತಡೆಯಲಾಗುತ್ತದೆ. ಅದೇ ರೀತಿ ಒಮ್ಮೆ ಈ ರೋಗ ಬಂದ ಬಳಿಕ, ಮಗದೊಮ್ಮೆ ಬರುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಹೆಚ್ಚಾಗಿ ನೇರವಾಗಿ ಮೆದುಳನ್ನು ಈ ವೈರಾಣು ದಾಳಿ ನಡೆಸುವುದರಿಂದ ಈ ರೋಗವನ್ನು “ಮೆದುಳು ಜ್ವರ” ಎಂದೂ ಕರೆಯುತ್ತಾರೆ.
ವೈರಾಣು ದೇಹ ಸೇರಿದ ಬಳಿಕ ಅತಿಯಾದ ಜ್ವರ (104-105 ಡಿಗ್ರಿ), ಸ್ನಾಯು ಸಂಕುಚಿತತೆ, ನಡುಕ, ಕುತ್ತಿಗೆ ನೋವು, ಅಪಸ್ಮಾರ, ತಲೆನೋವು, ವಾಂತಿ, ಮೈ ಕೈ ನೋವು ಮುಂತಾದವು ಒಂದೆರಡು ದಿನಗಳಲ್ಲಿಯೇ ಕಾಣಿಸಿಕೊಂಡು ಕೋಮಾವಸ್ಥೆಗೂ ತಲುಪಬಹುದು. ಸೋಂಕು ತಗುಲಿದ ಎಲ್ಲ ಮಕ್ಕಳು ತೀವ್ರತರವಾದ ಜ್ವರದಿಂದ ಬಳಲುವ ಸಾಧ್ಯತೆ ಕಡಿಮೆ 250ರಲ್ಲಿ ಒಂದು ಮಗು ಈ ರೀತಿಯ ತೀವ್ರತರ ಜ್ವರಕ್ಕೆ ತುತ್ತಾಗಬಹುದು. ಉಳಿದ 249 ಮಕ್ಕಳಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೇ ರೋಗಕ್ಕೆ ಪ್ರತಿಬಂಧತೆ ಪಡೆಯುತ್ತಾರೆ. ದೇಹದೊಳಗೆ ಈ ವೈರಸ್ ಸೇರಿದ ಬಳಿಕ 2ರಿಂದ 15 ದಿನಗಳ ಒಳಗೆ ರೋಗದ ಲಕ್ಷಣಗಳು ಕಂಡು ಬರುವ ಸಾಧ್ಯತೆ ಇರುತ್ತದೆ. ELISA ಎಂಬ ಪರೀಕ್ಷೆ ಮುಖಾಂತರ ಈ ವೈರಾಣುವಿನ ವಿರುದ್ಧ ಉತ್ಪತ್ತಿಯಾದ IgG ಪ್ರತಿಬಂಧಕಗಳನ್ನು ರಕ್ತದಲ್ಲಿ ಪತ್ತೆ ಹಚ್ಚಿ ರೋಗವನ್ನು ಗುರುತಿಸಲಾಗುತ್ತದೆ. ಯಾವುದೇ ಪರಿಣಾಮಕಾರಿ ಚಿಕಿತ್ಸೆ ಮತ್ತು ಔಷಧಿ ಲಭ್ಯವಿಲ್ಲದಿದ್ದರೂ ರೋಗದ ತೀವ್ರತೆಯನ್ನು ಕಡಿಮೆ ಮಾಡಲು, ಒಳರೋಗಿಯಾಗಿ ಚಿಕಿತ್ಸೆ ಪಡೆಯತಕ್ಕದ್ದು. ಸರಿಯಾದ ಆಹಾರ ರಕ್ತನಾಳಗಳ ಮೂಲಕ ಪೂರೈಕೆ, ಉಸಿರಾಟಕ್ಕೆ ತೊಂದರೆಯಾಗದಂತೆ ಸೂಕ್ತ ಆಮ್ಲಜನಕ ಪೂರೈಕೆ ಮತ್ತು ಅಪಸ್ಮಾರ ಬರದಂತೆ ತಡೆಯಲು ಔಷಧಿ ನೀಡಲಾಗುತ್ತದೆ. ವೈರಾಣು ಸೋಂಕಿತ ಮೆದುಳು ಊದಿಕೊಂಡು ಮೆದುಳಿನೊಳಗಿನ ಆಂತರಿಕ ಒತ್ತಡ ಜಾಸ್ತಿಯಾಗುವ ಸಾಧ್ಯತೆ ಇರುವುದರಿಂದ ಒಳರೋಗಿಯಾಗಿ ದಾಖಲಾತಿ ಮಾಡಿ, ತಲೆಯೊಳಗಿನ ಒತ್ತಡ ಹೆಚ್ಚದಂತೆ ತೀವ್ರ ನಿಗಾ ವಹಿಸಲಾಗುತ್ತದೆ. ಅದಲ್ಲದೆ ಜ್ವರ ಕಡಿಮೆ ಮಾಡಲು ಮತ್ತು ನೋವು ನಿವಾರಿಸಲು ಔಷಧಿ ನೀಡಲಾಗುತ್ತದೆ ಈ ರೋಗ ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಹರಡುವುದಿಲ್ಲವಾದ್ದರಿಂದ ರೋಗಿಯನ್ನು ಬೇರೆ ರೋಗಿಯಿಂದ ಬೇರ್ಪಡಿಸುವ ಅವಶ್ಯಕತೆ ಇರುವುದಿಲ್ಲ. ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ 9 ರಿಂದ 10 ದಿನಗಳಲ್ಲಿ ಮರಣ ಸಂಭವಿಸಬಹುದು.
ಅಂಕಿ ಅಂಶಗಳು
ಗೋರಖಪುರ ಉತ್ತರ ಪ್ರದೇಶದ ಒಂದು ನಗರವಾಗಿದ್ದು ನಮ್ಮ ದೇಶದ ಮೆದುಳು ಜ್ವರದ ರಾಜಧಾನಿಯಾಗಿದೆ ಎಂದರೂ ತಪ್ಪಲ್ಲ. ಭಾರತ ದೇಶದಲ್ಲಿ 2010ರಿಂದ 2017ರ ವರೆಗೆ ಸುಮಾರು 26656 ಮೆದುಳು ಜ್ವರದ ದಾಖಲೆ ದೊರಕಿದ್ದು, ಸುಮಾರು 4401 ಮಂದಿ ಈ ಜ್ವರದಿಂದ ಸಾವನ್ನಪ್ಪಿದ್ದಾರೆ. 1978ರಿಂದ ಇಲ್ಲಿಯವರೆಗೆ ಗೊರಖಪುರ ನಗರವೊಂದರಲ್ಲಿಯೇ ಸುಮಾರು 6000 ಮಕ್ಕಳು ಈ ರೋಗದಿಂದ ಸಾವನ್ನಪ್ಪಿರುವುದು ಬಹಳ ದೌರ್ಭಾಗ್ಯದ ವಿಚಾರ. ದೇಶಾದ್ಯಂತ ಸರಿಸುಮಾರು ಪ್ರತಿವರ್ಷ 50 ಸಾವಿರ ಮಂದಿಗೆ ಈ ಕಾಯಿಲೆ ಬರುವುದು. ಸುಮಾರು 10 ಸಾವಿರ ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ.
ತಡೆಗಟ್ಟುವುದು ಹೇಗೆ ?
೧) ಎಲ್ಲ ಮಕ್ಕಳಿಗೂ ಖಡ್ಡಾಯವಾಗಿ ಲಸಿಕೆ ಹಾಕತಕ್ಕದ್ದು. 1 ರಿಂದ 15 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕತಕ್ಕದ್ದು. ಮೊದಲ ಲಸಿಕೆ ಹಾಕಿದ ಬಳಿಕ 28 ದಿನಗಳ ನಂತರ ಎರಡನೇ ಲಸಿಕೆ ಹಾಕಿಸಬೇಕು. 3 ವರ್ಷದ ಕೆಳಗಿನ ಮಕ್ಕಳಿಗೆ 0.25ml ಮತ್ತು ದೊಡ್ಡವರಿಗೆ 0.5 ml ನೀಡಬಹುದಾಗಿದೆ. ಭಾರತದಲ್ಲಿಯೇ ತಯಾರಾದ ಜಿನ್-ವ್ಯಾಕ್ ಎಂಬ ಲಸಿಕೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದೆ.
೨) ಮನೆಯ ಸುತ್ತಮುತ್ತ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು, ನಿಂತ ನೀರಲ್ಲಿ, ಕೊಳೆತು ನಾರುವ ಆಹಾರ ಪದಾರ್ಥಗಳಿರುವಲ್ಲಿ ಈ ಸೊಳ್ಳೆ ಹೆಚ್ಚು ಉತ್ಪತ್ತಿಯಾಗುವುದರಿಂದ ಎಲ್ಲೂ ನೀರು ನಿಲ್ಲದಂತೆ ಮತ್ತು ದುರ್ನಾತ ಬೀರದಂತೆ ನೋಡಿಕೊಳ್ಳಬೇಕು.
೩) ಶುದ್ಧ ಕುಡಿಯುವ ನೀರು ಮತ್ತು ಆಹಾರ ಸಿಗುವಂತೆ ಮಾಡಬೇಕು, ಅಶುದ್ಧ ನೀರಿಗೆ ಯಾವತ್ತು ಹೋಗಬಾರದು.
೪) ಕೈ ಕಾಲು ಮುಚ್ಚುವ ಬಟ್ಟೆ ಧರಿಸಬೇಕು ಆಗಸ್ಟ್ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಈ ರೋಗದ ಆರ್ಭಟ ಜಾಸ್ತಿ ಇರುವುದರಿಂದ ಸಾಕಷ್ಟು ಮುಂಜಾಗರೂಕತೆ ವಹಿಸಬೇಕು.
೫) ಮಳೆಗಾಲದ ಸಮಯದಲ್ಲಿ ವಿಶೇಷ ಮುತುವರ್ಜಿ ವಹಿಸಿ ಪರಿಸರ ಸ್ವಚ್ಚತೆಗೆ ಹೆಚ್ಚಿನ ಗಮನ ನೀಡಬೇಕು. ದುರ್ನಾತ ಬಿರುವ ಕೊಳಚೆಗಳು ಮತ್ತು ಗುಂಡಿಗಳು ಸೊಳ್ಳೆ ಮತ್ತು ಹಂದಿಗಳಿಗೆ ಸ್ವರ್ಗವಿದ್ದಂತೆ ಅವುಗಳ ಮುಖಾಂತರ ಸುಲಭವಾಗಿ ಮನುಷ್ಯನ ದೇಹಕ್ಕೆ ಸೇರಿ ರುದ್ರ ನರ್ತನವನ್ನು ಆರಂಭಿಸುತ್ತದೆ.
೬) ಸೊಳ್ಳೆ ವಿಕರ್ಷಕ ದ್ರಾವಣಗಳನ್ನು ಬಳಸಿ ರಾತ್ರಿ ಹೊತ್ತು ಖಡ್ಡಾಯವಾಗಿ ಸೊಳ್ಳೆ ಪರದೆ ಬಳಸತಕ್ಕದ್ದು.
ಕೊನೆಮಾತು
ಜ್ವರ ಎನ್ನುವುದು ಕಾಯಿಲೆಯಲ್ಲ ಹಲವಾರು ರೋಗಗಳಲ್ಲಿ ಕಾಣಿಸಿಕೊಳ್ಳುವ ಜ್ವರ, ರೋಗವೊಂದರ ಲಕ್ಷಣ ಮಾತ್ರ. ಅದು ವೈರಸ್ ಸೋಂಕಿನಿಂದ ಬಂದ ಜ್ವರವೂ ಇರಬಹುದು. ಕ್ಷಯರೋಗದ ಜ್ವರವೂ ಇರಬಹುದು, ವಿಷಮಶೀತ ಜ್ವರ ಇರಲೂಬಹುದು ಅಥವಾ ಇನ್ನಾವುದೇ ಕಾರಣದಿಂದ ಜ್ವರ ಬಂದಿರಲೂಬಹುದು. ಆದರೆ ಸೊಳ್ಳೆ ಕಡಿತದ ಬಳಿಕ ಬರುವ ಜ್ವರವನ್ನು ಯಾವತ್ತೂ ನಿರ್ಲಕ್ಷಿಸಲೇಬಾರದು. ಅದೇನು ಬಿಡಿ! ಸೊಳ್ಳೆ ಕಡಿತ ಮಾಮೂಲಿ ಎಂದು ಮೂಗು ಮುರಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಬರುವ ಜ್ವರವನ್ನು ಯಾವತ್ತೂ ಕಡೆಗಣಿಸಲೇಬಾರದು. ಹಾಗೇ ನಿರ್ಲಕ್ಷಿಸಿದಲ್ಲಿ ಪರಿಣಾಮ ನೆಟ್ಟಗಿರಲಿಕ್ಕಿಲ್ಲ. ಜೀವಚ್ಚವವಾಗಿ ಜೀವಮಾನವಿಡೀ ಕೊರಗುವ ಪ್ರಮೇಯ ಬಂದರೂ ಬರಬಹುದು. ಸ್ವಯಂ ಮದ್ದುಗಾರಿಕೆ, ಅಂತರ್ಜಾಲ ಮದ್ದುಗಾರಿಕೆ, ಮೊಬೈಲ್ ಮದ್ದುಗಾರಿಕೆ, ಮನೆ ಮದ್ದುಗಾರಿಕೆ ಯಾವತ್ತೂ ಒಳ್ಳೆಯದಲ್ಲ. ಡಾ| ಗೂಗಲ್ ಸಹವಾಸವಂತೂ ವೈದ್ಯಕೀಯ ಚಿಕಿತ್ಸೆಯ ವಿಚಾರದಲ್ಲಿ ಬೇಡವೇ ಬೇಡ. ಆದ ಕಾರಣ ಸಾಮಾನ್ಯ ಜ್ವರಕ್ಕೂ ವಿಶೇಷ ಮನ್ನಣೆ ನೀಡಿ, ತಜ್ಞ ವೈದ್ಯರ ಸೂಕ್ತ ಸಲಹೆಯೊಂದಿಗೆ ಸಕಾಲದಲ್ಲಿ ಔಷಧಿ ತೆಗೆದುಕೊಳ್ಳುವುದರಲ್ಲಿಯೇ ಜಾಣತನ ಅಡಗಿದೆ.
ಡಾ|| ಮುರಲೀ ಮೋಹನ್ ಚೂಂತಾರು