➤➤ ವಿಶೇಷ ಲೇಖನ ಉಗ್ಗುವಿಕೆ ✍️ ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಡಿ. 09. ಉಗ್ಗುವಿಕೆ ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಮಾತಿಗೆ ಸಂಬಂಧಪಟ್ಟ ಸಮಸ್ಯೆಯಾಗಿದ್ದು, ನಿರರ್ಗಳವಾದ ಮತ್ತು ಸರಾಗವಾಗಿ ಮಾತನಾಡಲು ಕಷ್ಟವಾಗುವಂತಹ ಮತ್ತು ಮುಜುಗರ ಉಂಟುಮಾಡುವಂತಹ ಸಮಸ್ಯೆಯಾಗಿರುತ್ತದೆ. ಉಗ್ಗುವಿಕೆ ಅಂದರೆ ಶಬ್ದಗಳು, ಉಚ್ಚಾರಾಂಶಗಳು ಅಥವಾ ಪದಗಳ ಪುನರಾವರ್ತನೆಯನ್ನು ಒಳಗೊಂಡಂತಹ ಮಾತಿಗೆ ಸಂಬಂಧಿಸಿದ ತೊಂದರೆಯಾಗಿರುತ್ತದೆ. ಈ ರೀತಿ ಸಾಮಾನ್ಯವಾಗಿ ಸುಗಮವಾದ ನಿರರ್ಗಳ ಮಾತಿನ ಪ್ರಕ್ರಿಯೆಯಲ್ಲಿ ತಡೆ ಉಂಟಾಗುವುದನ್ನು ಉಗ್ಗುವಿಕೆ ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ‘ಸ್ಟಾಮರಿಂಗ್’ ಎನ್ನುತ್ತಾರೆ. ಇದೊಂದು ಸಂಪೂರ್ಣವಾದ ಮಾತಿನ ತೊಂದರೆಯಾಗಿದ್ದು, ಭಾಷಾ ಸಾಮಾರ್ಥ್ಯದ ಮೇಲೆ ಈ ತೊಂದರೆಯು ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ.

ಕಾರಣಗಳು ಏನು: ಉಗ್ಗುವಿಕೆ ಸಮಸ್ಯಗೆ ನಿರ್ದಿಷ್ಟವಾದ ನಿಖರವಾದ ಕಾರಣಗಳು ಇಲ್ಲ. ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದೆ. ಹತ್ತು ಹಲವು ಕಾರಣಗಳು ಒಟ್ಟು ಸೇರಿ ಮಕ್ಕಳಲ್ಲಿ ಈ ಉಗ್ಗುವಿಕೆ ಸಮಸ್ಯೆ ಕಂಡುಬರುತ್ತದೆ ಎಂದು ಅಂದಾಜಿಸಲಾಗಿದೆ.

೧. ಅನುವಂಶೀಯ ಕಾರಣಗಳು: ವಂಶಪಾರಂಪರ್ಯವಾಗಿ ಹೆತ್ತವರಿಂದ ಮಕ್ಕಳಿಗೆ ಬಳುವಳಿಯಾಗಿ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕುಟುಂಬದಲ್ಲಿ ಯಾರಿಗಾದರೂ ಉಗ್ಗುವಿಕೆ ಸಮಸ್ಯೆ ಇದ್ದಲ್ಲಿ, ಹುಟ್ಟುವ ಮಕ್ಕಳಿಗೆ ಈ ಸಮಸ್ಯೆ ಬರುವ ಸಾಧ್ಯತೆ ಕೂಡಾ ಇರುತ್ತದೆ.

೨. ವಾತಾವರಣದ ಕಾರಣಗಳು: ಇತರರನ್ನು ಅನುಕರಣೆ ಮಾಡಲು ಮೋಜಿಗಾಗಿ ಉಗ್ಗುವಿಕೆಯನ್ನು ಆರಂಭಿಸಿ ಮತ್ತು ಅದುವೇ ಹವ್ಯಾಸವಾಗಿ ಮುಂದುವರಿಯಲೂಬಹುದು ಅಥವಾ ರೂಢಿಯಾಗುವ ಸಾಧ್ಯತೆ ಇದೆ. ಮನೆಯ ವಾತಾವರಣ, ಬೇರೆಯವರೊಂದಿಗೆ ನಡೆದುಕೊಳ್ಳುವ ರೀತಿಯಲ್ಲಿ ವ್ಯತ್ಯಾಸವಾದರೂ ಉಗ್ಗುವಿಕೆ ಉಂಟಾಗಬಹುದು.

. ಶಾಲೆಯಲ್ಲಿ ಏನಾದರೂ ಮಾನಸಿಕವಾಗಿ ಜರ್ಜರಿತವಾದಾಗ, ಸಂಬಂಧಗಳಲ್ಲಿ ಏನಾದರೂ ವ್ಯತ್ಯಾಸವಾದರೂ, ಕೆಲಸದ ಸಂದರ್ಭದಲ್ಲಿ ಮನಸ್ಸಿಗೆ ಉಂಟಾದ ಆಘಾತಗಳಿಂದಲೂ ಉಗ್ಗುವಿಕೆ ಉಂಟಾಗಬಹುದು.

೪.        ಮಕ್ಕಳಲ್ಲಿ ಯಾವುದೋ ಅವ್ಯಕ್ತ ಭಯ, ಭೀಕರ ಸನ್ನಿವೇಶ, ಅಪಘಾತ ಮತ್ತು ಮನಸ್ಸಿಗೆ ಘಾಸಿಯಾಗುವ ಘಟನೆ ಘಟಿಸಿದ್ದಲ್ಲಿ ಉಗ್ಗುವಿಕೆ ಉಂಟಾಗಲೂಬಹುದು.

ಲಕ್ಷಣಗಳು:

೧. ಪದೇ ಪದೇ ಅಕ್ಷರಗಳನ್ನು ಪುನರುಚ್ಚರಿಸುವುದು ಪದಗಳ ಆರಂಭದ ಅಕ್ಷರವನ್ನು 3-4 ಬಾರಿ ಉಚ್ಚರಿಸುವುದು.

೨. ಅಕ್ಷರಗಳನ್ನು ಸುಧೀರ್ಘವಾಗಿ ಉಚ್ಚರಿಸುವುದು ಕೆಲವು ಶಬ್ಬಗಳನ್ನು ಅಥವಾ ಉಚ್ಚಾರಾಂಶಗಳನ್ನು ಎಳೆದೆಳೆದು ಮಾತನಾಡುವುದು.

೩. ಮಾತಿನ ಪ್ರಕ್ರಿಯೆಗೆ ಅಗತ್ಯವಿರುವ ಗಾಳಿ ಸಂಚಾರ ಕುಂಠಿತವಾಗಿ, ಸರಾಗವಾಗಿ ಹೊರಬರುವ ಮಾತಿಗೆ ತಡೆಯುಂಟಾಗುವುದು. ಈ ರೀತಿಯ ಸ್ತಬ್ದತೆಯಿಂದ ನಿರರ್ಗಳ ಸರಾಗ ಮಾತಿನ ಹಳಿ ತಪ್ಪಿ, ಉಗ್ಗುವಿಕೆಗೆ ನಾಂದಿ ಹಾಡುತ್ತದೆ.

೪. ಮುಂದುವರಿದ ಹಂತದಲ್ಲಿ ಉಗ್ಗುವಿಕೆಯ ತೀವ್ರತೆ ಜಾಸ್ತಿಯಾದಂತೆ, ಇನ್ನಿತರ ಲಕ್ಷಣಗಳು ಗೋಚರಿಸುತ್ತದೆ. ಮಾತನಾಡಲು ಸಂಕೋಚ, ನಕಾರಾತ್ಮಕ ಅಥವಾ ಋಣಾತ್ಮಕ ಮನೋಭಾವ ಕಂಡುಬರುತ್ತದೆ.

೫. ಮಾತನಾಡಲು ಆರಂಭಿಸುತ್ತಿದ್ದಂತೆಯೇ ಭಾವೋದ್ವೇಗಕ್ಕೆ ಒಳಗಾಗುವುದು. ಮಾತಿಗೆ ಪರದಾಡುವುದು ಕಂಡು ಬರುತ್ತದೆ.

೬. ಮಾತನಾಡಲು ಸಾಧ್ಯವಾಗದೆ ಕೀಳರಿಮೆ ಮತ್ತು ಅಂಜಿಕೆ ಕಂಡುಬರುತ್ತದೆ. ಇದು ಮುಂದುವರಿದಲ್ಲಿ ಸಾಮಾಜಿಕವಾಗಿ ಅಂತರ ಕಾಯ್ದುಕೊಂಡು ಏಕಾಂಗಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ.

Also Read  ಹಾಲು ಕುದಿಯುವಾಗ ಊದುವವರೇ ಎಚ್ಚರ..?

೭. ಉಗ್ಗುವಿಕೆಯಿಂದ ಆತ್ಮ ವಿಶ್ವಾಸ ಕುಗ್ಗಿಹೋಗಿ, ಮಾತನಾಡುವ ಅವಕಾಶದಿಂದ ಹಿಂಜರಿಯುವಿಕೆ, ಜನರಿಂದ ವಿಮುಖರಾಗುವ ಹಂತಕ್ಕೆ ತಲುಪಬಹುದು.

ಆರಂಭಿಕ ಹಂತದಲ್ಲಿಯೇ ಗುರುತಿಸಿ, ಹೆತ್ತವರು ಮಗುವನ್ನು ವೈದ್ಯರ ಆಪ್ತ ಸಮಾಲೋಚನೆ ಮೂಡಿಸಿದಲ್ಲಿ, ಸಮಸ್ಯೆಯನ್ನು ಆರಂಭದಲ್ಲಿಯೇ ನಿವಾರಿಸಿ ಹಾಕಬಹುದಾಗಿದೆ.

ತಪ್ಪು ಕಲ್ಪನೆಗಳು:

೧. ಉಗ್ಗುವಿಕೆ ಮಕ್ಕಳಲ್ಲಿ ಮಾತ್ರ ಕಂಡುಬರುತ್ತದೆ. ಇದು ತಪ್ಪು ಕಲ್ಪನೆ. ಉಗ್ಗುವಿಕೆ ಎಲ್ಲ ವಯಸ್ಸಿನಲ್ಲಿಯೂ ಕಂಡುಬರುತ್ತದೆ. ಆದರೆ ಮಕ್ಕಳಲ್ಲಿ ಜಾಸ್ತಿ ಪ್ರಮಾಣದಲ್ಲಿ ಕಂಡುಬರುತ್ತದೆ.

೨. ಮಕ್ಕಳಲ್ಲಿ ಕಚಗುಳಿ ನೀಡಿದರೆ ಉಗ್ಗುವಿಕೆ ಬರುತ್ತದೆ ಎನ್ನುವುದು ಒಂದು ಮೂಡನಂಭಿಕೆಯಾಗಿದೆ. ಕಚಗುಳಿಗೂ ಉಗ್ಗುವಿಕೆಗೂ ಯಾವುದೇ ಸಂಬಂಧವಿರುವುದಿಲ್ಲ.

೩. ಉಚ್ಚಾರಣ ದೋಷ ಮತ್ತು ಉಗ್ಗುವಿಕೆಗೆ ಸಂಬಂಧವಿದೆ. ಇದು ತಪ್ಪು ಕಲ್ಪನೆ. ಉಚ್ಚಾರಣೆಗೂ, ಉಗ್ಗುವಿಕೆಗೂ ಯಾವುದೇ ರೀತಿಯ ಕೊಂಡಿ ಇರುವುದಿಲ್ಲ. ಉಚ್ಚಾರಣೆ ದೋಷ ಜ್ಞಾನದ ಕೊರತೆಯಿಂದ ಉಂಟಾಗುತ್ತದೆ. ಉಗ್ಗುವಿಕೆ ಎನ್ನುವುದು ಜ್ಞಾನದ ಕೊರತೆಯಿಂದಲ್ಲ.

೪. ಆತ್ಮವಿಶ್ವಾಸ ಕಡಿಮೆ ಇದ್ದಲ್ಲಿ ಉಗ್ಗುವಿಕೆ ಉಂಟಾಗುತ್ತದೆ: ಇದು ತಪ್ಪು ಕಲ್ಪನೆ. ಆತ್ಮ ವಿಶ್ವಾಸಕ್ಕೂ ಕುಗ್ಗುವಿಕೆಗೂ ಯಾವುದೇ ನೇರ ಸಂಬಂಧವಿಲ್ಲ. ಉಗ್ಗುವಿಕೆಯ ಕಾರಣದಿಂದ ಮಾತನಾಡಲು ಅಂಜಿಕೆ, ಭಯ ಉಂಟಾಗಿ ಆತ್ಮ ವಿಶ್ವಾಸ ಕುಂಠಿತವಾಗಬಹುದು.

೫. ಉಗ್ಗುವಿಕೆ ಇರುವವರಿಗೆ ಬುದ್ಧಿ ಶಕ್ತಿ ಕಡಿಮೆ ಇರುತ್ತದೆ. ಇದು ತಪ್ಪು ಕಲ್ಪನೆ. ಉಗ್ಗುವಿಕೆಗೂ, ಬುದ್ಧಿ ಶಕ್ತಿಗೂ ಯಾವುದೇ ನೇರ ಸಂಬಂಧವಿಲ್ಲ. ವಿಜ್ಞಾನ ಲೋಕದ ದಿಗ್ಗಜ ಚಾಲ್ಸ್ ಡಾರ್ವಿನ್, ಸರ್ ಐಸಾಕ್ ನ್ಯೂಟನ್ ಕೂಡಾ ಉಗ್ಗುವಿಕೆಯಿಂದ ಬಳಲುತ್ತಿದ್ದರು. ಉಗ್ಗುವಿಕೆ ಇದ್ದರೂ ಅವರು ಅಸಾಮಾನ್ಯ ಸಾಧನೆ ಮಾಡಿ ವಿಶ್ವ ವಿಖ್ಯಾತಿ ಪಡೆದಿರುತ್ತಾರೆ. ಅದೇ ರೀತಿ ಮನೋರಂಜನೆ ಕ್ಷೇತ್ರದಲ್ಲಿ ಮಿಸ್ಟರ್ ಬೀನ್ ಎಂದೇ ಚಿರಪರಿಚಿತರಾದ ರೋವನ್ ಅಟಕಿಮ್ಸನ್ ಮತ್ತು ಹೃತಿಕ್ ರೋಷನ್ ಅವರೂ ಕೂಡ ಉಗ್ಗುವಿಕೆ ಇದ್ದರೂ ತಮ್ಮ ಪ್ರತಿಭೆಗೆ ಅಡ್ಡಯಾಗಿದೆ. ಉಗ್ಗುವಿಕೆಯನ್ನು  ಬಹಳ ಚೆನ್ನಾಗಿ ನಿಭಾಯಿಸಿ ಜನರ ಹೃದಯವನ್ನು ಗೆದ್ದಿರುವುದು ನಮಗೆಲ್ಲ ತಿಳಿದೇ ಇದೆ.

೬. ಬೇರೆಯವರ ಗಮನ ಸೆಳೆಯಲು ಉಗ್ಗುತ್ತಾರೆ ಎನ್ನುವುದು ಕೂಡಾ ತಪ್ಪು ಭಾವನೆ. ಉಗ್ಗುವಿಕೆ ಮಕ್ಕಳ ಹತೋಟಿಯಲ್ಲಿರುವುದಿಲ್ಲ ಅವರಿಗರಿವಿಲ್ಲದೆ ಉಗ್ಗುತ್ತಾರೆ ಯಾರೂ ಸ್ವಇಚ್ಛೆಯಿಂದ ಉಗ್ಗುವುದಿಲ್ಲ.

೭. ಉಗ್ಗುವಿಕೆಯನ್ನು ಔಷದದಿಂದ ಸರಿಪಡಿಸಬಹುದು ಎನ್ನುವುದು ಕೂಡಾ ತಪ್ಪು ಕಲ್ಪನೆ. ಉಗ್ಗುವಿಕೆ ಯಾಕಾಗಿ ಬಂದಿದೆ ಎನ್ನುವುದನ್ನು ತಿಳಿದು, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಉಗ್ಗುವಿಕೆ ಸರಿಪಡಿಸುವ ಔಷಧಿ ಇನ್ನೂ ಬಂದಿಲ್ಲ.

೮. ಉಗ್ಗುವಿಕೆ ದೈವಿಕ ಕಾರಣ ಅಥವಾ ಭೂತದ ತೊಂದರೆಯಿಂದ ಬರುತ್ತದೆ ಎನ್ನುವುದು ಕೂಡಾ ತಪ್ಪು ಕಲ್ಪನೆ. ಉಗ್ಗುವಿಕೆಗೆ ನಿಜವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಸಂಶೋಧನೆಗಳು ಇನ್ನೂ ನಡೆಯುತ್ತಿದೆ.

೯. ಉಗ್ಗುವಿಕೆ ಇರುವ ಮಕ್ಕಳ ನಡವಳಿಕೆಯಲ್ಲಿ ತೊಂದರೆ ಇರುತ್ತದೆ. ಇದು ತಪ್ಪು ಕಲ್ಪನೆ. ಉಗ್ಗುವಿಕೆ ಎನ್ನುವುದು ಸಂಪೂರ್ಣವಾಗಿ ಮಾತಿನ ಸಮಸ್ಯೆಯಾಗಿರುತ್ತದೆ. ನಡವಳಿಕೆ ಮತ್ತು ಸ್ವಭಾವಕ್ಕೂ ಯಾವುದೇ ರೀತಿಯ ಅಡ್ಡ ಪರಿಣಾಮವನ್ನು ಉಗ್ಗುವಿಕೆ ಬೀರುವುದಿಲ್ಲ

Also Read  “ಸೆಪ್ಟೆಂಬರ್ 29: ವಿಶ್ವ ಹೃದಯ ದಿನ” ಸಿ.ಪಿ.ಆರ್. ಅಥವಾ ಹೃದಯ ಪುನಶ್ಚೇತನ ಪ್ರಕ್ರಿಯೆ ಹೇಗೆ..?- ಡಾ. ಮುರಲೀ ಮೋಹನ ಚೂಂತಾರು

 

ತಡೆಗಟ್ಟುವುದು ಹೇಗೆ?

ಉಗ್ಗುವಿಕೆ ಎಲ್ಲಾ ವಯಸ್ಸಿನಲ್ಲಿ ಕಂಡು ಬರಬಹುದಾದರೂ ೨ ರಿಂದ ೫ ವರ್ಷದ ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತದೆ. ಮಕ್ಕಳಲ್ಲಿ ಕಂಡುಬರುವ ಉಗ್ಗುವಿಕೆಯನ್ನು ಬೆಳವಣಿಗೆ ಸಂಬಂಧಿ ಉಗ್ಗುವಿಕೆ ಎನ್ನಲಾಗುತ್ತದೆ. ಇದಕ್ಕೆ ಹತ್ತಾರು ಕಾರಣ ಇರುತ್ತದೆ. ಇದರಿಂದ 75 ಶೇಕಡಾ ಮಕ್ಕಳು ವಯಸ್ಸಾದಂತೆ ಉಗ್ಗುವಿಕೆಯ ತೀವ್ರತೆ ತನ್ನಿಂತಾನೆ ಸರಿಯಾಗುತ್ತದೆ. ಸುಮಾರು 75 ಶೇಕಡಾ ಮಕ್ಕಳಲ್ಲಿ ಈ ಉಗ್ಗುವಿಕೆ ಮೆದುಳಿನ ತೊಂದರೆ ಅಥವಾ ಆಘಾತ ಅಥವಾ ಇನ್ಯಾವುದೇ ನರಸಂಬಂಧಿ ತೊಂದರೆಯಿಂದ ಉಂಟಾಗುತ್ತದೆ. ಇದನ್ನು ನರ ಸಂಬಂಧಿ ಉಗ್ಗುವಿಕೆ ಎನ್ನುತ್ತಾರೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲೇ ಬೇಕಾಗುತ್ತದೆ.

ಉಗ್ಗುವಿಕೆ ತಡೆಗಟ್ಟಲು ಈ ಕೆಳಗಿನ ತಂತ್ರಗಳನ್ನು ಪಾಲಿಸಬೇಕು:

೧.        ನಿಧಾನವಾಗಿ ಮಾತನಾಡಬೇಕು: ನಿಧಾನವಾಗಿ ಉಸಿರು ಒಳಗೆ ತೆಗೆದುಕೊಂಡು ಆರಾಮವಾಗಿ ಮಾತು ಆರಂಭಿಸಬೇಕು. ಜೋರಾಗಿ ಮಾತನಾಡಲು ಯತ್ನಿಸಿದಲ್ಲಿ ಉಗ್ಗುವಿಕೆ ಹೆಚ್ಚಾಗುತ್ತದೆ.

೨. ಮಾತನಾಡುವ ವ್ಯಾಯಾಮ: ತನ್ನ ಅತ್ಯಂತ ಆತ್ಮೀಯ ಸ್ನೇಹಿತ ಅಥವಾ ಅಣ್ಣ ತಂಗಿಯರ ಜೊತೆ ಕುಳಿತು ಮಾತನಾಡುವ ವ್ಯಾಯಾಮ ಮಾಡಬೇಕು. ಅತ್ಯಂತ ಪ್ರಶಾಂತ ಜಾಗದಲ್ಲಿ ಯಾವುದೇ ಅಡಚಣೆ ಇಲ್ಲದ ಜಾಗದಲ್ಲಿ ನಿರಂತರ ಮಾತನಾಡಲು ಅಭ್ಯಾಸ ಮಾಡಿದಲ್ಲಿ ಉಗ್ಗುವಿಕೆಯನ್ನು ನಿಯಂತ್ರಿಸಬಹುದು.

೩. ಧ್ಯಾನ ಮಾಡುವುದು: ನಿರಂತರ ಧ್ಯಾನ ಮಾಡುವುದರಿಂದ ಮನಸ್ಸಿಗೆ ಏಕಾಗ್ರತೆ ಉಂಟಾಗಿ ನಮ್ಮ ಮಾತಿನ ಬಗ್ಗೆ ನಮಗೆ ಹೆಚ್ಚು ನಿಯಂತ್ರಣ ಬರುತ್ತದೆ ಮತ್ತು ಹೆಚ್ಚು ಆತ್ಮ ವಿಶ್ವಾಸದಿಂದ ನಿರರ್ಗಳವಾಗಿ ಮಾತು ಹೊರಬರುತ್ತದೆ.

೪. ನಿಮ್ಮ ಮಾತನ್ನು ರೆಕಾಡ್ ಮಾಡಿ ಮತ್ತೆ ಮತ್ತೆ ಕೇಳಬೇಕು. ಹಾಗೆ ಮಾಡುವುದರಿಂದ ನೀವು ಎಲ್ಲಿ ಎಡವುತ್ತಿದ್ದೇವೆ ಎಂಬೂದರ ಅರಿವಾಗುತ್ತದೆ. ಹತ್ತು ಹಲವು ಬಾರಿ ಅದನ್ನು ಕೇಳಿದಾಗ ನಿಮ್ಮ ಉಗ್ಗುವಿಕೆ ನಿಯಂತ್ರಿಸಲು ನಿಮಗೆ ಸಾಧ್ಯವಾಗಬಹುದು.

೫. ಮಾತು ದಾಖಲಿಸುವ ಸಾಧನಗಳನ್ನು ಬಳಸಿ ನಿಮ್ಮ ಮಾತಿನ ವೇಗ, ತೀವ್ರತೆ ಮತತು ಆಳವನ್ನು ದಾಖಲು ಮಾಡಬಹುದಾಗಿದೆ. ಆಗ ನೀವು ಎಲ್ಲಿ ಹೇಗೆ ಎಡವಿದ್ದೀರಿ ಎಂಬುದರ ಬಗ್ಗೆ ಮಾಹಿತಿ ದೊರಕಿ, ಅದನ್ನು ಸರಿಪಡಿಸಿಕೊಂಡಲ್ಲಿ ಉಗ್ಗುವಿಕೆಯನ್ನು ನಿಯಂತ್ರಿಸಬಹುದಾಗಿದೆ.

ಚಿಕಿತ್ಸೆ ಹೇಗೆ?

ಉಗ್ಗುವಿಕೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ನಿರಂತರ ಪ್ರಯತ್ನ ಮತ್ತು ಪೋಷಕರ ಸಹಾಯದಿಂದ ಉಗ್ಗುವಿಕೆಯನ್ನು ಸರಿಯಾಗಿ ನಿಯಂತ್ರಿಸಿ, ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿದೆ.

೧. ಉಗ್ಗುವಿಕೆಗೆ ವಾಕ್ ಭಾಷಾ ತಜ್ಞರು ಮಾತಿನ ತರಬೇತಿ ಅಥವಾ ಬಿಹೇವಿಯರಲ್ ಥೆರಪಿ ಮುಖಾಂತರ ಚಿಕಿತ್ಸೆ ನೀಡುತ್ತಾರೆ. ಇದು ದೀರ್ಘಕಾಲಿಕ ಚಿಕಿತ್ಸೆ ಆಗಿರುತ್ತದೆ. ದಿನ ಬೆಳಗಾಗುವುದರೊಳಗೆ ಸರಿಯಾಗಲು ಸಾಧ್ಯವಿಲ್ಲ. ಉಗ್ಗುವಿಕೆ ಯಾವುದೇ ಔಷಧಿ ಅಥವಾ ಸರ್ಜರಿಗೆ ಬಗ್ಗುವುದಿಲ್ಲ ಮತ್ತು ಅದರಿಂದ ಸರಿಪಡಿಸಲು ಸಾಧ್ಯವಿಲ್ಲ. ನಿರಂತರ ಮಾತಿನ ತರಬೇತಿ ಪಡೆಯುವುದರ ಜೊತೆಗೆ ಆತ್ಮ ವಿಶ್ವಾಸವನ್ನು ವೃದ್ಧಿಸಿಕೊಂಡಲ್ಲಿ ಉಗ್ಗುವಿಕೆಯನ್ನು ನಿಯಂತ್ರಿಸಬಹುದು.

Also Read  ಸತಿ-ಪತಿ ಸಮಸ್ಯೆಯೇ? ದಿನ ಭವಿಷ್ಯ ನೋಡಿ. 9945410150

೨. ವಾಕ್ ಶ್ರವಣ ತಜ್ಞರು ಉಗ್ಗುವಿಕೆ ಇರುವ ಮಕ್ಕಳಿಗೆ ನಿರಂತರ ತರಬೇತಿ ಮತ್ತು ಆಪ್ತ ಸಮಾಲೋಚನೆ ಮಾಡುತ್ತಾರೆ. ಆತ್ಮ ವಿಶ್ವಾಸ ತುಂಬುತ್ತಾರೆ ಮತ್ತು ಸರಿಯಾಗಿ ಮಾತನಾಡಲು  ಪೂರಕವಾದ ತಂತ್ರಗಳನ್ನು ತಿಳಿಸಿ ಹೇಳುತ್ತಾರೆ. ನಿರಂತರ ಮಾರ್ಗದರ್ಶನ ಮತ್ತು ಪೋಷಕರ ಸಹಕಾರದಿಂದ ಸಂಪೂರ್ಣವಾಗಿ ಉಗ್ಗುವಿಕೆಯನ್ನು ಮಕ್ಕಳಲ್ಲಿ ನಿಯಂತ್ರಿಸಲು ಸಾಧ್ಯವಾಗಬಹುದು.

ಕೊನೆಮಾತು:

ಉಗ್ಗುವಿಕೆ ಎನ್ನುವುದು ಸಂಕೀರ್ಣ ಸಮಸ್ಯೆಯಾದರೂ ಸಕಾಲದಲ್ಲಿ ಗುರುತಿಸಿ, ಸೂಕ್ತ ಮಾರ್ಗದರ್ಶನ ಸಲಹೆ ಮತ್ತು ಆತ್ಮ ಸಮಾಲೋಚನೆ ನಡೆಸಿದಲ್ಲಿ ಸರಿಪಡಿಸಲು ಸಾಧ್ಯವಿದೆ. ಉಗ್ಗುವಿಕೆಯ ಸಹಜವಾದ ಮಾತಿನ ಬೆಳವಣಿಗೆಯ ಒಂದು ಹಂತವಲ್ಲದ ಕಾರಣ, ಪೋಷಕರು ಈ ಬಗ್ಗೆ ವಿಶೇಷ ಕಾಳಜಿ ವಹಿಸಿ, ಮಗುವಿನ ಮಾತಿನ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸಬೇಕು. ಒಂದೊಮ್ಮೆ ಮಗುವು ಇತರ ಮಕ್ಕಳಂತೆ ಮಾತನಾಡುತ್ತಿಲ್ಲ ಎಂದಾದಲ್ಲಿ ತಕ್ಷಣವೇ ವಾಕ್ ಶ್ರವಣ ತಜ್ಞರನ್ನೂ ಭೇಟಿ ಮಾಡಿ ಆತ್ಮ ಸಮಾಲೋಚನೆ ನಡೆಸಿ, ಸೂಕ್ತ ಸಲಹೆ ಮಾರ್ಗದರ್ಶನ ಪಡೆಯತಕ್ಕದು ಮತ್ತು ತಾಳ್ಮೆ ಹಾಗೂ ಸಂಯಮದಿಂದ ವಾಕ್ ಭಾಷಾ ತಜ್ಞರ ಸಲಹೆಯನ್ನು ಸರಿಯಾಗಿ ಪಾಲಿಸುವುದರಿಂದ ಉಗ್ಗುವಿಕೆಯ ಸಮಸ್ಯೆಯನ್ನು ಪರಿಹಾರ ಪಡೆಯಬಹುದು ಅಥವಾ ತೀವ್ರತೆಯನ್ನು ಕುಗ್ಗಿಸಬಹುದಾಗಿದೆ.

ಡಾ|| ಮುರಲೀ ಮೋಹನ್‌ಚೂಂತಾರು 

error: Content is protected !!
Scroll to Top