(ನ್ಯೂಸ್ ಕಡಬ) newskadaba.com ಪುತ್ತೂರು, ನ.21. 2013ರಲ್ಲಿ ಸುಳ್ಯದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಅಪರಾಧಿಗೆ 10 ವರ್ಷ ಕಠಿಣ ಸಜೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಸುಳ್ಯ ಕಸಬಾ ಗ್ರಾಮದ ನಾರಾಜೆ ನಿವಾಸಿ ಹರೀಶ್ ನಾಯ್ಕ ಎಂಬವರ ಪತ್ನಿ ಪದ್ಮಾವತಿ ಮತ್ತು ಮನೆಗೆಲಸಕ್ಕೆಂದು ಬಂದಿದ್ದ ಟಿಪ್ಪರ್ ಚಾಲಕ ಹಿತೇಶ್ ಅವರನ್ನು ಬರ್ಬರವಾಗಿ ಕೊಲೆಗೈದಿದ್ದ ಅಜ್ಜಾವರ ಗ್ರಾಮದ ಮುಳಿಯ ನಿವಾಸಿ ವಸಂತ ಶೇರಿಗಾರ್ ಶಿಕ್ಷೆಗೊಳಗಾದ ಅಪರಾಧಿ.
ಅಪರಾಧಿ ವಸಂತ ಶೇರಿಗಾರ್ ಮತ್ತು ಪದ್ಮಾವತಿ ನಡುವೆ ಅಕ್ರಮ ಸಂಬಂಧ ಇತ್ತೆನ್ನಲಾಗಿದ್ದು, 2013 ಡಿಸೆಂಬರ್ 29 ರಂದು ಪದ್ಮಾವತಿಯವರ ಮನೆಯಲ್ಲಿ ಮಣ್ಣು ಸಾಗಿಸಲೆಂದು ಟಿಪ್ಪರ್ ಬಂದಿತ್ತೆನ್ನಲಾಗಿದೆ. ಈ ನಡುವೆ ಪದ್ಮಾವತಿಯವರು ಟಿಪ್ಪರ್ ಚಾಲಕನೊಂದಿಗೆ ಸ್ನೇಹ ಬೆಳೆಸಿ ಚಾಲಕ ಹಿತೇಶ್ ನೊಂದಿಗೆ ಅಕ್ರಮ ಸಂಬಂಧ ನಡೆಸುತ್ತಿದ್ದುದನ್ನು ನೋಡಿ ಕುಪಿತಗೊಂಡ ವಸಂತ ಶೇರಿಗಾರ್ ಇಬ್ಬರನ್ನೂ ಕೊಡಲಿಯಿಂದ ಕಡಿದು ಹತ್ಯೆ ಮಾಡಿದ್ದಾಗಿ ಆರೋಪಿಸಲಾಗಿತ್ತು.
ಘಟನೆಗೆ ಸಂಬಂಧಿಸಿ ಸುಳ್ಯ ಪೊಲೀಸರು ಆರೋಪಿ ವಸಂತ ಶೇರಿಗಾರನನ್ನು ಬಂಧಿಸಿ ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದಾಗಿ ನ.18 ರಂದು ಘೋಷಿಸಿತ್ತು.
ಇದೀಗ ಅಪರಾಧಿಗೆ 10 ವರ್ಷಗಳ ಕಠಿಣ ಸಜೆ ಮತ್ತು ರೂ. 20 ಸಾವಿರ ದಂಡ ವಿಧಿಸಿದೆ. ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಕಾಲ ಸಾದಾ ಸೆರೆಮನೆ ವಾಸ ಅನುಭವಿಸುವಂತೆ ಆದೇಶಿಸಿದೆ. ಸರಕಾರದ ಪರ ಸರಕಾರಿ ಅಭಿಯೋಜಕ ಉದಯ ಕುಮಾರ್ ಎಂ. ವಾದಿಸಿದ್ದರು.