(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 08. ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದ ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್ಟಿಎಸ್‌ಸಿ-2 (ಪೋಕ್ಸೋ) ನ್ಯಾಯಾಲಯ ತೀರ್ಪು ನೀಡಿದೆ.
ಶಿಕ್ಷೆಗೊಳಗಾದವರನ್ನು ಕೋಟೆಕಾರಿನ ಡೆರ್ವಿನ್ ಡಿಸೋಜಾ, ಸಂತ್ರಸ್ತೆಯ ತಾಯಿ ಮತ್ತು ಕಲ್ಲಾಪುವಿನ ಮೆಲ್ವಿನ್ ಡಿಸೋಜಾ ಎಂದು ಗುರುತಿಸಲಾಗಿದೆ. ಪೈಂಟರ್ ವೃತ್ತಿ ಮಾಡುತ್ತಿದ್ದ ಡೆರ್ವಿನ್ ಡಿಸೋಜಾ ಎಂಬಾತ ಮಹಿಳೆಯೋರ್ವರ ಸ್ನೇಹ ಬೆಳೆಸಿಕೊಂಡು ಆಕೆಯ ಮನೆಗೆ ಹೋಗುತ್ತಿದ್ದು, ಆಕೆಗೆ ಆರ್ಥಿಕ ಸಹಾಯ ಮಾಡುತ್ತಿದ್ದ. ಬಳಿಕ ಆಕೆಯ ಅಪ್ರಾಪ್ತ ವಯಸ್ಸಿನ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಎನ್ನಲಾಗಿದೆ. ಈ ವಿಷಯ ತಿಳಿದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಅನಂತರ ಡೆರ್ವಿನ್ ಬಾಲಕಿಯನ್ನು ತನ್ನ ಸ್ನೇಹಿತ ಮೆಲ್ವಿನ್‌ನ ಮನೆಗೆ ಕರೆದೊಯ್ದು ಅಲ್ಲಿ ಅಕ್ರಮವಾಗಿ ಕೂಡಿ ಹಾಕಿ, ಬಾಲಕಿ ಮನೆಯಿಂದ ಹೊರಹೋಗದಂತೆ ನೋಡಿಕೊಂಡು ಅಲ್ಲಿಯೂ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ. ಈ ಕುರಿತು 2016ರ ಡಿಸೆಂಬರ್‌ನಲ್ಲಿ ಮಕ್ಕಳ ರಕ್ಷಣಾ ಘಟಕಕ್ಕೆ ಸಾರ್ವಜನಿಕರು ಮಾಹಿತಿ ನೀಡಿ, ರಕ್ಷಣಾ ಘಟಕದವರು ಬಾಲಕಿಯನ್ನು ರಕ್ಷಿಸಿದ್ದರು. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.