➤➤ ವಿಶೇಷ ಲೇಖನ ಟೊಮೇಟೋಗೆ ಬೆಂಬಲ ಬೆಲೆ ಸಿಗಬೇಕಿದೆ ✍ ಜ್ಯೋತಿ ಜಿ. ಮೈಸೂರು

(ನ್ಯೂಸ್ ಕಡಬ) newskadaba.com ಡಿ. 07. ರೈತ ತನ್ನ ದೈನಂದಿಕ ಬದುಕಿನಲ್ಲಿ ಮುಖ್ಯವಾದ ಸ್ನೇಹಿತ. ಆತನಿಲ್ಲದೇ ಈ ಮನುಕುಲ ಬದುಕಲು ಅಸಾಧು. ಹೀಗಾಗಿ ಪ್ರತಿನಿತ್ಯ ಆತನನ್ನ ನೆನೆದು ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲೇ ಬೇಕು ಅಲ್ಲವೆ..? ರೈತರಿಗೆ ಪ್ರತಿ ಬೆಳೆಯನ್ನು ತಗೆಯಲು ಅವರಿಗೆ ಕರಾಳ ದಿನಗಳೆಂದೇ ಹೇಳಬಹುದು.

 

ತಾನು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಹೋದರೆ ದಲ್ಲಾಳಿಗಳ ಮೋಸ, ಇತ್ತ ಸರ್ಕಾರದ ನೀತಿ ನಿಯಮಗಳಂತೂ ಕೇಳುವವರೇ ಇಲ್ಲ. ಹೀಗಾಗಿ ರೈತನ ಕಷ್ಟ ಯಾರಿಗೆ ಹೇಳಬೇಕು ಸ್ವಾಮಿ. ತನಗಾದ ಮೋಸ, ವಂಚನೆಯನ್ನು ಎಲ್ಲಿಯೂ ಹೇಳದೆ ಮನೆಯ ಕುಟುಂಬದ ಜೊತೆ ಜೊತೆಗೆನೇ ಹಂಚಿಕೊಂಡು, ಮತ್ತೆ ಅದೇ ಕಾಯಕದಲ್ಲಿ ಮುಂದುವರಿಯುತ್ತಾ, ಸಾಲ ಶೂಲವಂತು ಆತನಿಗೆ ಆಪ್ತ ಗೆಳೆಯನಂತೆ. ಇಷ್ಟೆಲ್ಲ ನೋವು ನಲಿವುಗಳ ಮಧ್ಯದಲ್ಲಿಯೇ ಅನೇಕ ಸಂಕಷ್ಟಗಳನ್ನು ಹೆದರಿಸುವ ಎದೆಗಾರಿಕೆ ಇರುವುದು ಮಾತ್ರ ರೈತ ಸಮುದಾಯಕ್ಕೆ ಮಾತ್ರ ಎಂದೇಳಬಹುದು. ಏತನ್ಮಧ್ಯೆ ಈಗ ಪ್ರಸ್ತತವಾಗಿ ಪ್ರತಿ ಮಾರುಕಟ್ಟೆಯಲ್ಲಿ ಟಮೋಟೋ ಬೆಳೆದ ರೈತರ ಕಥೆ ಹೇಳತೀರದು. ಸರ್ಕಾರ ಇಂತಹ ಸಂದರ್ಭದಲ್ಲಿ ಟಮೋಟೋಗೆ ಬೆಂಬಲ ಬೆಲೆ ನೀಡಲು ಮುಂದಾಗಬೇಕಾಗಿದೆ. ಟೊಮೇಟೋ ಬೆಳೆದ ರೈತ ಸಂಪೂರ್ಣ ಕಂಗಾಲಾಗಿ ಬೀದಿಗೆ ಬಂದಿರುವದನ್ನು ದಿನ ನಿತ್ಯ ಕಾಣುತ್ತಿದ್ದೇವೆ. ರೈತರ ಜೀವನ ಸುಧಾರಿಸುವುದು ಇಲ್ಲವಾದರೆ ಅವರು ಆತ್ಮಹತ್ಯೆಗಳಿಗೆ ಶರಣಾಗುವುದರಲ್ಲಿ ಯಾವುದೇ ಮಾತಿಲ್ಲ. ಬದುಕಿನಲ್ಲಿ ಒಂದು ಕಡೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು ಜನಸಾಮಾನ್ಯರು ಹೈರಾಣಾಗುತ್ತಿದ್ದರೆ, ಮತ್ತೊಂದೆಡೆ ಲಕ್ಷ ಲಕ್ಷ ಖರ್ಚು ಮಾಡಿ ರೈತರು ಬೆಳೆದ ಬೆಳೆಗಳ ಬೆಲೆ ಪಾತಾಳಕ್ಕಿಳಿದರೆ, ಅನ್ನದಾತರು ಅಕ್ಷರಶಃ ನಲುಗಿ ಹೋಗಿದ್ದಾರೆ. ಒಂದು ಕೆಜಿ ಟಮೋಟೋಗೆ ಒಂದು ರೂ.ಗೂ ಕಡಿಮೆ ದರಕ್ಕೆ ಬಿಕರಿಯಾಗುತ್ತಿದ್ದು, ರೈತ ಸಾಲದ ಶೂಲಕ್ಕೆ ಸಿಲುಕುವಂತಾಗಿ ದಿಕ್ಕು ತೋಚದಂತಾಗಿದ್ದಾನೆ. ಹಲವು ಜಿಲ್ಲೆಗಳಲ್ಲಿ ಟೊಮೆಟೊ ಬೆಳೆದು ಮಾರುಕಟ್ಟೆಗೆ ರೈತರೇನೋ ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಬಂಪರ್ ಟೊಮೆಟೊ ಬೆಳೆದು ಲೋಡ್ ಗಟ್ಟಲೇ ಸಾವಿರಾರು ಟನ್ ಟೊಮೆಟೊವನ್ನು ಮಾರುಕಟ್ಟೆಗೆ ಹೊತ್ತು ತರುತ್ತಾರೆ. ಆದರೆ ಈಗ ಚಿಂತಾಮಣಿ ಟೊಮೆಟೊ ಮಾರುಕಟ್ಟೆಯಲ್ಲಿ ಟೊಮೆಟೊ ಖರೀದಿಸುವವರೇ ಕಡಿಮೆಯಾಗಿದ್ದಾರೆ. ಕೆಲವು  ಬೆಳೆಗಾರರು ರಸ್ತೆಗೆ ಟೊಮೆಟೊ ಸುರಿದು ಪ್ರತಿಭಟನೆ ನಡೆಸಿದರೂ ಸರ್ಕಾರಕ್ಕೆ ಅವರ ಕೂಗು ಮಾತ್ರ ಕೇಳಿಸುತ್ತಿಲ್ಲ ರೈತರು ಬೆವರು ಸುರಿಸಿ ಬೆಳೆದ ಬೆಲೆಯು ಹೀಗೆ ದಿಢೀರ್ ಕುಸಿತ ಕಂಡರೆ ಏನು ಮಾಡಬೇಕು..? ಈಗಿನ ದಿನಗಳಲ್ಲಿ ಕೃಷಿ ವೆಚ್ಚವಂತೂ ವಿಪರೀತವಾಗಿ ಏರುತ್ತಿದ್ದು, ಕೂಲಿ ಕಾರ್ಮಿಕರಿಗೆ ಪ್ರತಿ ೬-೮ ತಾಸಿಗೆ ೨೦೦ ರಿಂದ ೩೦೦ ಕೂಲಿ ನೀಡಬೇಕು. ಅಲ್ಲದೇ ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆಗಳು ಹಾಳಾಗಿ ಹೋಗಿವೆ. ಇದರಿಂದ ರೈತರು ಮೊದಲೇ ದಿಕ್ಕು ತೋಚದಂತಾಗಿದ್ದಾರೆ. ಟೊಮೇಟೋ ಬಾಕ್ಸ್ ಗೆ ೨೦-೩೦ ಗಳಿಗೆ ಮಾರಾಟವಾದರೆ, ರೈತರು ಏನು ಮಾಡಬೇಕು ನೀವೆ ಹೇಳಿ..? ಸರ್ಕಾರವು ಅದರಲ್ಲೂ ಕೃಷಿ ಮಂತ್ರಿಗಳು ಇಂತಹ ಜಲ್ವಂತ ಸಮಸ್ಯೆಗಳಿಗೆ ಮೊದಲು ಸ್ಪಂದಿಸಬೇಕಾಗಿದೆ. ಸರ್ಕಾರಕ್ಕೆ ಹೋರಾಟ ಮಾಡಿಯೇ ಹೇಳಬೇಕೆಂದರೆ ಹೇಗೆ..? ಅನ್ನಧಾತರ ಕುರಿತು ಕೊಂಚ ಗಮನ ಸೆಳೆದರೆ ನಿಜಕ್ಕೂ ನಮಗೆಲ್ಲಾ ನೆಮ್ಮದಿಯ ನೆರಳು ದೊರೆತಂತೆ. ಕಾದು ನೋಡೋಣ ಸರ್ಕಾರದ ಕಾಳಜಿಯುತ ಕಾಯಕವನ್ನ.

error: Content is protected !!
Scroll to Top