(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 06. ಮೆದುಳು ಜ್ವರ ತಡೆಗಟ್ಟಲು ಡಿ.25ರ ವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಜೆಇ ಲಸಿಕಾಕರಣವು ಅತ್ಯಂತ ಸುರಕ್ಷಿತ, ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ. 1 ರಿಂದ 15 ವರ್ಷದ ಮಕ್ಕಳೆಲ್ಲರೂ ಈ ಲಸಿಕೆ ಪಡೆಯುವ ಮೂಲಕ ಸಂಪೂರ್ಣ ಸಹಕರಿಸುವಂತೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಕರೆ ನೀಡಿದರು.
ಅವರು ಸೋಮವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕಸಬ ಬೆಂಗ್ರೆ ಮತ್ತು ಲೇಡಿಹಿಲ್ ಸಂತ ಅಲೋಶಿಯಸ್ ಮಾಧ್ಯಮ ಶಾಲೆಯ ಸಂಯುಕ್ತಾಶ್ರಯದಲ್ಲಿ ನಗರದ ಲೇಡಿಹಿಲ್‍ನ ಸಂತ ಅಲೋಶಿಯಸ್ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಜಪಾನೀಸ್ ಎನ್ಸೆಫಾಲಿಟಿಸ್ (ಜೆಇ) ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
2006ರಲ್ಲಿ ಈ ಲಸಿಕೆಯನ್ನು ಸಂಶೋಧಿಸಲಾಗಿದ್ದು, ಅತ್ಯಂತ ಸುರಕ್ಷಿತವಾಗಿದೆ. ಅದನ್ನು ಪಡೆಯದೆ ಇದ್ದಲ್ಲೀ ಶೇ.30ರಷ್ಟು ಗಂಭೀರ ಖಾಯಿಲೆಗಳು ಬರುವ ಸಾಧ್ಯತೆಗಳಿವೆ, ಗಾಭರಿ, ಅನುಮಾನಗಳಿಗೆ ಆಸ್ಪದ ನೀಡದೇ ಮುಂದಿನ ಮೂರು ವಾರಗಳಲ್ಲಿ ನಡೆಯುವ ಅಭಿಯಾನದಲ್ಲಿ ಲಸಿಕೆ ಪಡೆಯಬೇಕು, ಅದಕ್ಕಾಗಿ ಆರೋಗ್ಯ ಇಲಾಖೆಯಿಂದ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಮಾತನಾಡಿ, ಕೊರೋನಾ ನಂತರ ಈ ಲಸಿಕೆ ನೀಡಲಾಗುತ್ತಿದೆ, ಪೋಷಕರು ಯಾವುದೇ ರೀತಿಯ ತಪ್ಪುಕಲ್ಪನೆ, ಗ್ರಹಿಕೆಗಳಿಗೆ ಅವಕಾಶ ನೀಡದೇ ಪ್ರತಿಯೊಂದು ಅರ್ಹ ಮಗುವಿಗೂ ಲಸಿಕೆ ಕೊಡಿಸಬೇಕು, ಆರೋಗ್ಯ ಕೇಂದ್ರಗಳಿಗಿಂತ ಶಾಲೆಗಳಲ್ಲಿಯೇ ಲಸಿಕೆ ನೀಡಿದರೆ ಉತ್ತಮ, ಯಾವುದೇ ರೀತಿಯ ರೋಗಗಳು ಬರುವುದಕ್ಕೂ ಮುನ್ನ ಬಾರದಂತೆ ಮುನ್ನೆಚ್ಚರಿಕೆ, ಮುಂಜಾಗ್ರತೆ ವಹಿಸುವುದು ಮುಖ್ಯ, ಈ ಅಭಿಯಾನಕ್ಕೆ ಜಿಲ್ಲೆಯಲ್ಲಿ 3500 ಕೇಂದ್ರಗಳನ್ನು ರಚಿಸಲಾಗಿದ್ದು, 4.73 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದರು. ಸೇಂಟ್ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಡಾ. ಪ್ರೆಸಿಲ್ಲ ಡಿ’ಸೋಜಾ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಮಾತನಾಡಿದರು. ಡಬ್ಲ್ಯೂಎಚ್‍ಓ ಸರ್ವೆಲೆನ್ಸ್ ಅಧಿಕಾರಿ ಅನಂತೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಧಾಕರ್, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ರಾಜೇಶ್ ಬಿ.ವಿ., ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಹಾಗೂ ಇತರರು ಭಾಗವಹಿಸಿದ್ದರು.