(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 06. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಸಕಾಲದಲ್ಲಿ ರಕ್ತದಾನ ಮಾಡುವುದರಿಂದ ರೋಗಿಯ ಜೀವ ಉಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಿರಂತರವಾಗಿ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ರಕ್ತದಾನ ಮಾಡಬೇಕು. ಹೀಗೆ ಮಾಡುವುದರಿಂದ ಸಮಾಜದಲ್ಲಿ ರಕ್ತದ ಕೊರತೆ ಉಂಟಾಗುವುದಿಲ್ಲ ಮತ್ತು ಎಲ್ಲ ಅಗತ್ಯ ರೋಗಿಗಳಿಗೆ ಸಕಾಲದಲ್ಲಿ ರಕ್ತ ದೊರೆತರೆ ರೋಗಿಯ ಜೀವ ಉಳಿಸುವಲ್ಲಿ ವೈದ್ಯರಿಗೆ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರು ರಕ್ತದಾನ ಶಿಬಿರ ಆಯೋಜಿಸಿ ರಕ್ತದಾನಕ್ಕೆ ಮುಂದಾಗುವುದು ಧನಾತ್ಮಕ ಬೆಳವಣಿಗೆ ಎಂದು ಖ್ಯಾತ ವೈದ್ಯ ಡಾ|| ಕಿಶನ್ ರಾವ್ ಬಾಳಿಲ ಅವರು ನುಡಿದರು.
60ನೇ ಅಖಿಲ ಭಾರತ ಗೃಹರಕ್ಷಕದಳದ ಉತ್ತಾನ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಪಡೆಯ ವತಿಯಿಂದ ನಗರದ ಮೇರಿಹಿಲ್‌ನಲ್ಲಿರುವ ಗೃಹರಕ್ಷಕದಳ ಕಛೇರಿಯಲ್ಲಿ ನಿಯೋಜಿಸಲಾದ ರಕ್ತದಾನ ಶಿಬಿರವನ್ನು ಸ್ವತಃ ರಕ್ತದಾನ ಮಾಡಿ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಟೋನಿ ಫೆರ್ನಾಂಡಿಸ್ ಅವರು 67ನೇ ಬಾರಿ ರಕ್ತದಾನ ಮಾಡಿದರು. ಗೃಹರಕ್ಷಕಿ ರೇವತಿ ದಿನೇಶ್ 32ನೇ ಬಾರಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ರಕ್ತದಾನದ ಮಹತ್ವದ ಬಗ್ಗೆ ವಿವರ ನೀಡಿದರು. ಪ್ರತಿ ಆರೋಗ್ಯವಂತ ಪುರುಷ 18 ವರ್ಷದ ಬಳಿಕ 65 ವರ್ಷದವರೆಗೆ 4 ಬಾರಿ ರಕ್ತದಾನ ಮಾಡಬಹುದು. ದೇಹದಲ್ಲಿ ಹಿಮೋಗ್ಲೋಬಿನ್ ಅಂಶ 15ಕ್ಕಿಂತ ಜಾಸ್ತಿ ಇದ್ದು ದೇಹದ ತೂಕ 45ಕ್ಕಿಂತ ಜಾಸ್ತಿ ಇರಬೇಕು. ಮಹಿಳೆಯರು ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಬಹುದು ಎಂದು ನುಡಿದರು.
ಉಪಸಮಾದೇಷ್ಟ ಶ್ರೀ ರಮೇಶ್, ಕಛೇರಿ ಅಧೀಕ್ಷಕ ಶ್ರೀ ರತ್ನಾಕರ, ಘಟಕಾಧಿಕಾರಿಗಳಾದ ಮಾರ್ಕ್ ಶೇರಾ, ಮಂಗಳೂರು ಘಟಕ, ರಮೇಶ್ ಸುರತ್ಕಲ್ ಘಟಕ, ಭಾಸ್ಕರ್ ಎಂ. ಉಳ್ಳಾಲ ಘಟಕ, ಹರೀಶ್ಚಂದ್ರ ಸುಬ್ರಹ್ಮಣ್ಯ ಘಟಕ, ಐತ್ತಪ್ಪ ಬಂಟ್ವಾಳ ಘಟಕ, ಪಾಂಡುರಾಜ್ ಮೂಡಬಿದ್ರೆ ಘಟಕ, ಜಯಾನಂದ ಬೆಳ್ತಂಗಡಿ ಘಟಕ, ಶಿವಪ್ಪನಾಯ್ಕ್ ಪಣಂಬೂರು ಘಟಕ, ತೇಜಸ್ವಿನಿ ಆಸ್ಪತ್ರೆಯ ವೈದ್ಯರಾದ ಡಾ|| ವಾಸುದೇವ ಪ್ರಭು ಮುಂತಾದವರು ಉಪಸ್ಥಿತರಿದ್ದರು. ತೇಜಸ್ವಿನಿ ಆಸ್ಪತ್ರೆಯ ತಂತ್ರಜ್ಞರು ಈ ಶಿಬಿರವನ್ನು ನಡೆಸಿಕೊಟ್ಟರು. ಸುಮಾರು ಇಪ್ಪತ್ತು ಮಂದಿ ಗೃಹರಕ್ಷಕರು ರಕ್ತದಾನ ಮಾಡಿದರು.