(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 06. ಅನಧಿಕೃತವಾಗಿ ಮತದಾರನ ಗುರುತಿನ ಚೀಟಿ ವಿತರಣೆ ಮಾಡಿದ ಆರೋಪದಡಿ ತಾಲೂಕು ಕಚೇರಿ ರಸ್ತೆಯಲ್ಲಿರುವ ಜನಸೇವಾ ಕೇಂದ್ರವೊಂದರ ಮೇಲೆ ಎಸಿ ಹಾಗೂ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡವು ದಾಳಿ ನಡೆಸಿ ಅಂಗಡಿಯನ್ನು ಮುಟ್ಟುಗೋಲು ಹಾಕಿರುವ ಘಟನೆ ನಡೆದಿದೆ.
ಮಂಜಲ್ಪಡ್ಪು ನಿವಾಸಿಯ ಮಗನ ವೋಡರ್ ಐಡಿ ಕಳೆದುಹೋಗಿದ್ದರಿಂದ ಅವರು ಜನ ಸೇವಾ ಕೇಂದ್ರಕ್ಕೆ ತೆರಳಿ ವಿಷಯ ತಿಳಿಸಿ ಓಟರ್ ಐಡಿ ಮತ್ತೆ ಪಡೆಯುವ ನಿಟ್ಟಿನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ವೇಳೆ ಕೇಂದ್ರದಲ್ಲೇ ಗುರುತಿನ ಚೀಟಿ ಮುದ್ರಿಸಿ ಕೊಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಇದರಿಂದಾಗಿ ಜನ ಸೇವಾ ಕೇಂದ್ರದಿಂದ ಪಡೆದ ಗುರುತಿನ ಚೀಟಿಯ ಮೇಲೆ ಅನುಮಾನಿಸಿದ ಅವರು, ತಾಲೂಕು ಕಚೇರಿಯ ಚುನಾವಣಾ ಶಾಖೆಗೆ ತೆರಳಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ತಪಾಸಣೆ ನಡೆಸಿದಾಗ ಹೊರಗಿನ ಕೇಂದ್ರದಲ್ಲಿ ಓಟರ್ ಐಡಿ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಅಧಿಕಾರಿಗಳ ತಂಡ ದಾಳಿ ಮಾಡಿ ಸೂಕ್ತ ತನಿಖೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಹಾಯಕ ಆಯುಕ್ತ ಗಿರೀಶ್ ನಂದನ್, ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಅಪರಾಧ ಮಾಡಿರುವುದು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೇಂದ್ರದಲ್ಲಿ ಮತದಾರರ ಗುರುತಿನ ಚೀಟಿ ವಿತರಣೆ ಮಾಡುವ ಅಧಿಕಾರವನ್ನು ನಾವು ಯಾರಿಗೂ ಕೊಟ್ಟಿಲ್ಲ. ಆದರೂ ಈ ಕೇಂದ್ರದಲ್ಲಿ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಕಾರ್ಡ್ ವಶಪಡಿಸಿಕೊಂಡು ಕೇಂದ್ರಕ್ಕೆ ಬೀಗ ಹಾಕಿದ್ದೇವೆ. ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.