(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಡಿ. 06. ದತ್ತಪೀಠದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ದತ್ತಜಯಂತಿ ನಡೆಯಲಿದ್ದು, ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಹೇರಲಾಗಿದೆ. ದತ್ತಜಯಂತಿ ಪ್ರಯುಕ್ತ ಚಿಕ್ಕಮಗಳೂರಿನ ಎಂಜಿ ರಸ್ತೆ, ಐಜಿ ರಸ್ತೆ, ಬಸವನಹಳ್ಳಿ ರಸ್ತೆಯಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು. ವಿವಿಧ ಜಿಲ್ಲೆಗಳಿಂದ ಚಿಕ್ಕಮಗಳೂರಿಗೆ 4500 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಮೂರು ದಿನ ನಡೆಯುವ ದತ್ತ ಜಯಂತಿ ಕಾರ್ಯಕ್ರಮದಂದು ಸಂಚಾರ ವ್ಯವಸ್ಥೆಯಲ್ಲಿ ಕೆಲವು ಮಾರ್ಪಡುಗಳನ್ನು ಮಾಡಲಾಗಿದೆ. ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಕ್ಯಾಮೆರಾ, ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎರಡು ಸಮುದಾಯಗಳ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟರ್ ಹಾಕದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅನ್ಯ ಧರ್ಮದ ಜನರ ಭಾವನೆಗೆ ಧಕ್ಕೆಯಾಗುವಂತಹ ಘೋಷಣೆಗಳನ್ನು ಕೂಡಾ ಕೂಗದಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ತಿಳಿಸಿದ್ದಾರೆ.