ದ.ಕ: ಡಿ. 05ರಿಂದ ಮೆದುಳು ಜ್ವರ ನಿಯಂತ್ರಣ ಲಸಿಕಾ ಅಭಿಯಾನ ➤ 1ರಿಂದ 15 ವರ್ಷದೊಳಗಿನ ಮಕ್ಕಳಿಗೆ JE ಲಸಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 03. ಮಕ್ಕಳಿಗೆ ಮಾರಣಾಂತಿಕವಾಗಬಲ್ಲ ಮೆದುಳು ಜ್ವರ ನಿಯಂತ್ರಣಕ್ಕೆ ದ.ಕ ಜಿಲ್ಲೆಯಲ್ಲಿ ಡಿ. 5ರಿಂದ ಲಸಿಕಾ ಅಭಿಯಾನ ಆರಂಭಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

 

ಅಭಿಯಾನದ ಮೂಲಕ 1ರಿಂದ 15 ವರ್ಷದ ಮಕ್ಕಳಿಗೆ JE ಲಸಿಕೆಯನ್ನು ನೀಡಲಾಗುವುದು. ಹಾಗೆಯೇ ಮುಂದೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ 9 ಮತ್ತು 16 ತಿಂಗಳ ವಯಸ್ಸಿನ ಮಕ್ಕಳಿಗೆ JE ಲಸಿಕೆಯನ್ನು ಎರಡು ಡೋಸ್‌ ಆಗಿ ನೀಡಲಾಗುವುದು. ಜಿಲ್ಲೆಯಾದ್ಯಂತ ಜಿ.ಇ ಲಸಿಕಾ ಅಭಿಯಾನ ನಡೆಯಲಿದೆ. ಜಿಲ್ಲೆಯಲ್ಲಿ 3,514 ಲಸಿಕಾ ಕೇಂದ್ರಗಳಲ್ಲಿ ಅಭಿಯಾನ ನಡೆಯಲಿದ್ದು, 4,73,770 ಮಕ್ಕಳನ್ನು ಗುರುತಿಸಲಾಗಿದೆ. ಮೊದಲನೇ ವಾರದಲ್ಲಿ ಎಲ್ಲಾ ಶಾಲೆಗಳಲ್ಲಿ ಲಸಿಕಾ ಕೇಂದ್ರಗಳನ್ನು ಆಯೋಜಿಸಿ ಲಸಿಕಾಕರಣ ನಡೆಸಲಾಗುವುದು. ನಂತರ ಎರಡು ವಾರಗಳಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳಲ್ಲಿ ಲಸಿಕಾಕರಣ ನಡೆಸಲಾಗುತ್ತದೆ ಎಂದು ಅವರು ಹೇಳಿದರು. ಡಿ. 5ರಂದು ಲೇಡಿಹಿಲ್ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು. ಇದು ಕ್ಯುಲೆಕ್ಸ್‌ ಜಾತಿಯ ಸೊಳ್ಳೆಯ ಮೂಲಕ ಹರಡುತ್ತದೆ. ಮಾನವನಿಗೆ ಇದು ಆಕಸ್ಮಿಕವಾಗಿ ತಗಲುತ್ತದೆ. ಈ ರೋಗಕ್ಕೆ ಹೆಚ್ಚಾಗಿ ಮಕ್ಕಳು ತುತ್ತಾಗುತ್ತಾರೆ. ಈ ರೋಗವು ತಗುಲಿದ ಶೇ. 20ರಿಂದ 30ರಷ್ಟು ಮಕ್ಕಳು ಮರಣ ಹೊಂದುವ ಸಂಭವವಿದೆ. ಬದುಕುಳಿದ ಶೇಕಡಾ 40 ರಿಂದ 50 ವ್ಯಕ್ತಿಗಳಲ್ಲಿ ನರ ದೌರ್ಬಲ್ಯ, ಬುದ್ಧಿ ಮಾಂದ್ಯತೆ ಮುಂತಾದ ಪರಿಣಾಮಗಳು ಉಂಟಾಗುತ್ತವೆ. ಹಾಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಲಸಿಕೆ ಪಡೆಯುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಜ್ವರ, ತಲೆನೋವು, ಕತ್ತಿನ ಬಿಗಿತ, ತಲೆಸುತ್ತುವಿಕೆ, ಮೈ ನಡುಕ, ಎಚ್ಚರ ತಪ್ಪುವುದು ರೋಗ ಲಕ್ಷಣ ಗಳಾಗಿದ್ದು ಖಾಯಿಲೆಯಿಂದ ಮೆದುಳು ಊತಗೊಂಡು ಸಾವು ಸಂಭವಿಸಬಹುದು ಎಂದು ಅವರು ಮಾಹಿತಿ ನೀಡಿದರು.

error: Content is protected !!

Join the Group

Join WhatsApp Group