(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 02. ಇಲ್ಲಿನ ಸಿಸಿಬಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್ ಪ್ರಸಾದ್ ಅವರನ್ನು ಸುರತ್ಕಲ್ ಠಾಣಾ ಇನ್ಸ್ಪೆಕ್ಟರ್ ಆಗಿ ನೇಮಕಗೊಳಿಸಿ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಕೆಲ ದಿನಗಳ ಹಿಂದೆ ಮಹೇಶ್ ಪ್ರಸಾದ್ ಅವರನ್ನು ಸಿಐಡಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು. ಆದರೆ ಇದೀಗ ವರ್ಗಾವಣೆಯನ್ನು ಬದಲಾವಣೆ ಮಾಡಿ ಸುರತ್ಕಲ್ ಠಾಣಾ ಇನ್ಸ್ಪೆಕ್ಟರ್ ಆಗಿ ನೇಮಿಸಿ ಅದೇಶಿಸಲಾಗಿದೆ.
ಮೂಲತಃ ಪುತ್ತೂರಿನವರಾದ ಮಹೇಶ್ ಪ್ರಸಾದ್, ಮಂಗಳೂರಿನ ಉಳ್ಳಾಲದಲ್ಲಿ ಕಾರ್‍ಯಾಚರಣೆ ನಡೆಸಿ ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇವರ ಕಾರ್ಯ ದಕ್ಷತೆಯನ್ನು ಪರಿಗಣಿಸಿದ ಕೇಂದ್ರ ಗೃಹ ಸಚಿವಾಲಯವು ಉಗ್ರರ ವಿರುದ್ಧ ವಿಶೇಷ ಕಾರ್‍ಯಾಚರಣೆ ನಡೆಸಿದ ಪೊಲೀಸರಿಗೆ ನೀಡುವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು. ಪೊಲೀಸ್ ಇಲಾಖೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ಹಾವೇರಿ, ಬೆಂಗಳೂರು, ಹಿರಿಯಡ್ಕ, ಕೋಟ, ಬಂಟ್ವಾಳ ಮತ್ತು ಶೃಂಗೇರಿಯಲ್ಲಿ ಕಾರ್‍ಯ ನಿರ್ವಹಿಸಿದ್ದ ಇವರು ಬಳಿಕ ಇನ್ಸ್‌ಪೆಕ್ಟರ್ ಆಗಿ ಭಡ್ತಿ ಪಡೆದು ಕಾರವಾರ, ಮಣಿಪಾಲ, ಪುತ್ತೂರು ಮತ್ತು ಕಾಪು ಠಾಣೆಗಳಲ್ಲಿ ಕಾರ್ಯ ನಿರ್ವಹಿಸಿದ್ದು, ಪ್ರಸ್ತುತ ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.