ಕರಾವಳಿಯಲ್ಲಿ ಹರಡುತ್ತಿರುವ ಕೆಂಗಣ್ಣು ಕಾಯಿಲೆ ಸಮಸ್ಯೆ…!

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 26. ಕರಾವಳಿಯ ಕೆಲವು ಕಡೆಗಳಲ್ಲಿ ಕೆಂಗಣ್ಣು ಕಾಯಿಲೆ ಸಮಸ್ಯೆ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ವೈದ್ಯರು ತಿಳಿಸಿದ್ದಾರೆ.


ಸುಮಾರು 10 ದಿನಗಳ ಹಿಂದೆ ಪಡುಪೆರಾರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಡೀಲ್‌ ಪ್ರದೇಶದ ಹಲವಾರು ಮನೆಗಳ ಸದಸ್ಯರು ಈ ಕಾಯಿಲೆಗೆ ತುತ್ತಾಗಿದ್ದು, ಪೆರ್ಮುದೆ, ಎಕ್ಕಾರು ಗ್ರಾಮ ಪಂಚಾಯತ್‌, ಬಜಪೆ ಪಟ್ಟಣ ಪಂಚಾಯತ್‌ ವ್ಯಾಪ್ತಿಗೂ ಹರಡಿದ್ದು, ಪರಿಸರದಲ್ಲಿ ಕಪ್ಪು ಕನ್ನಡಕ ಧರಿಸಿ ಓಡಾಡುವವರ ಸಂಖ್ಯೆ ಹೆಚ್ಚುತ್ತಿದೆ. ಬಾಧಿತರಲ್ಲಿ ವಿದ್ಯಾರ್ಥಿಗಳು, ವ್ಯಾಪಾರಿಗಳೂ ಇದ್ದು, ಅವರ ಮೂಲಕ ಇತರರಿಗೆ ಹರಡುವ ಸಾಧ್ಯತೆ ಇದೆ.

 

ಏನಿದು ಕಾಯಿಲೆ?
“ಮದ್ರಾಸ್‌ ಐ’ ಎಂದೂ ಕರೆಯಲ್ಪಡುವ ಕೆಂಗಣ್ಣು ಅಥವಾ ಕಂಜಕ್ಟಿವಿಟಿಸ್‌ಗೆ ಕಾರಣ ವೈರಾಣು ಅಥವಾ ಬ್ಯಾಕ್ಟೀರಿಯಾ ಸೋಂಕು. ಕಣ್ಣಿನ ಬಿಳಿಭಾಗದ ಮೇಲ್ಮೈ ಮತ್ತು ಕಣ್ರೆಪ್ಪೆಗಳ ಒಳಭಾಗ ಉರಿಯೂತಕ್ಕೀಡಾಗಿ ಕೆಂಪು ಅಥವಾ ಗುಲಾಬಿ ಬಣ್ಣ ಹೊಂದಿ ಊದಿಕೊಳ್ಳುವುದು ಇದರ ಲಕ್ಷಣ. ಇದು ಸುಲಭವಾಗಿ ಹರಡುವ ಸೋಂಕು ರೋಗ. ಇದಕ್ಕೆ ನಿರ್ದಿಷ್ಟ ಔಷಧಿ ಇಲ್ಲದೇ ಇರುವ ಕಾರಣ ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಐ ಡ್ರಾಪ್‌ನಂತಹ ಔಷಧಗಳನ್ನು ವೈದ್ಯರು ಸೂಚಿಸುತ್ತಾರೆ. ಕೆಂಗಣ್ಣು ರೋಗ ಪ್ರದೇಶದಲ್ಲಿ ಇರುವಾಗ ಕಣ್ಣುಗಳನ್ನು ಮುಟ್ಟಿ ಕೊಳ್ಳದಿರುವುದು, ಆಗಾಗ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು, ರೋಗಪೀಡಿತರ ಸಂಪರ್ಕದಿಂದ ದೂರ ಇರುವ ಮೂಲಕ ಕೆಂಗಣ್ಣು ಸೋಂಕು ಪ್ರಸರಣ ತಪ್ಪಿಸಬಹುದು.

Also Read  ಬೀದಿಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳ ಮಧ್ಯೆ ಹೊಡೆದಾಟ

error: Content is protected !!
Scroll to Top