(ನ್ಯೂಸ್ ಕಡಬ) newskadaba.com ಕಡಬ, ಅ.21. ಬೆಡ್ ಶೀಟ್ ಮಾರಾಟದ ನೆಪದಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಮಂಗಳೂರಿನ ಇಬ್ಬರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಸ್ಲಿಮರಾದ ಕಾರಣ ಗುಂಪೊಂದು ಹಲ್ಲೆ ನಡೆಸಿದ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.
ಪ್ರಕರಣದ ಸಾರಾಂಶ: ಕಡಬ ತಾಲೂಕಿನ ದೋಲ್ಪಾಡಿ ಗ್ರಾಮದ ಕಾಯರ್ ಮನೆ ನಿವಾಸಿ ಕಿಟ್ಟ ಅಜಿಲ ಎಂಬವರ ಮನೆಗೆ ಬೆಡ್ ಶೀಟ್ ಮಾರಾಟದ ನೆಪದಲ್ಲಿ ಕಾರಿನಲ್ಲಿ ಆಗಮಿಸಿದ ಮಂಗಳೂರಿನ ಅಡ್ಡೂರು ನಿವಾಸಿಗಳಾದ ರಫೀಕ್ ಹಾಗೂ ರಮೀಝುದ್ದೀನ್ ಎಂಬವರು ಬೆಡ್ ಶೀಟ್ ಮಾರಾಟದ ನೆಪದಲ್ಲಿ ಕಿಟ್ಟರವರ ಪತ್ನಿ ವೀಣಾ ಎಂಬಾಕೆಯನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದು, ಮಹಿಳೆ ವಿರೋಧಿಸಿದಾಗ ಮೈ, ಕೈ ಮುಟ್ಟಿ ಮಾನಭಂಗಕ್ಕೆ ಯತ್ನಿಸಿದ್ದಲ್ಲದೆ ಮಹಿಳೆ ಬೊಬ್ಬೆ ಹೊಡೆದಾಗ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ವೀಣಾ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದಕ್ಕೆ ಪ್ರತಿಯಾಗಿ ರಮೀಝುದ್ದೀನ್ ಎಂಬವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದು, ತಾನು ರಫೀಕ್ ಎಂಬವರೊಂದಿಗೆ ಬೆಡ್ ಶೀಟ್ ಮಾರಾಟಕ್ಕೆಂದು ಕಡಬ ತಾಲೂಕಿನ ದೋಲ್ಪಾಡಿ ಪರಿಸರಕ್ಕೆ ಗುರುವಾರದಂದು ತೆರಳಿದ್ದ ವೇಳೆ ಅಲ್ಲಿನ ಮನೆಯೊಂದರ ಮಹಿಳೆಯ ಜೊತೆಗೆ ತಕರಾರು ಉಂಟಾಗಿದ್ದು, ಹಿಂತಿರುಗಿ ಕಾಣಿಯೂರು ಕಡೆಗೆ ತೆರಳುತ್ತಿದ್ದ ವೇಳೆ ಬೆದ್ರಾಜೆ ಎಂಬಲ್ಲಿ ಗುಂಪೊಂದು ಪಿಕಪ್ ವಾಹನವನ್ನು ರಸ್ತೆಗೆ ಅಡ್ಡವಾಗಿಟ್ಟು ತಡೆದು ನಿಲ್ಲಿಸಿದ್ದಲ್ಲದೆ, ಕಾರಿನಿಂದ ರಸ್ತೆಗೆ ಬೀಳಿಸಿ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆ ಹಾಗೂ ಕಬ್ಬಿಣದ ರಾಡಿನಿದ ಹೊಡೆದು ಕಾಲಿನಿಂದ ತುಳಿದು ರಸ್ತೆಯಲ್ಲಿ ಎಳೆದಾಡಿ ಕಾರನ್ನು ಧ್ವಂಸಗೈದಿದ್ದಾರೆ ಎಂದು ಪ್ರತಿದೂರು ನೀಡಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಕೋಲಿನಿಂದ ಹೊಡೆಯುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ತನಿಖೆಯ ಹಾದಿ ತಪ್ಪಿಸುವುದಕ್ಕಾಗಿ ಘಟನೆ ನಡೆದ ಕೆಲವೇ ಸಮಯಗಳ ಅಂತರದಲ್ಲಿ ಬೆರಳೆಣಿಕೆಯ ನ್ಯೂಸ್ ವೆಬ್‌ಸೈಟ್‌ಗಳು ಹಲ್ಲೆ ನಡೆಸಿರುವ ಘಟನೆಯನ್ನು ಮರೆಮಾಚಿ ಕಾರು ಅಪಘಾತವೆಂಬಂತೆ ಬಿಂಬಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಟೀಕೆಗೆ ಗುರಿಯಾಗಿವೆ.