(ನ್ಯೂಸ್ ಕಡಬ) newskadaba.com ಉಡುಪಿ, ನ.17. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆಯ ಫೋಟೊಗಳನ್ನು ಅಶ್ಲೀಲವಾಗಿ ಚಿತ್ರಿಸಿ ವಾಟ್ಸ್ಆ್ಯಪ್ ನಲ್ಲಿ ರವಾನಿಸಿದ ಆರೋಪದಲ್ಲಿ ಕುಂದಾಪುರದ ಮೂವರು ಬಿಜೆಪಿ ಮುಖಂಡರ ವಿರುದ್ಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ಹಿಂದುಳಿದ ಮೋರ್ಚಾದ ಜಿಲ್ಲಾಧ್ಯಕ್ಷ ಹಾಗೂ ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ. ಕಿಶೋರ್ ಕುಮಾರ್, ಮುಖಂಡ ರಾಜು ಪೂಜಾರಿ ಹಾಗೂ ಇತರರ ವಿರುದ್ಧ ಕುಂದಾಪುರ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ದೂರು ನೀಡಿದ್ದಾರೆ.
ಆರೋಪಿಗಳೆಲ್ಲರು ಕುಂದಾಪುರ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆ ಸಂಬಂಧ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ. ಕುಂದಾಪುರದಲ್ಲಿ ನ.13ರ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ನಡೆದ ಗದ್ದಲ, ಮೂಲ ಬಿಜೆಪಿಗರ ವಿರುದ್ಧ ಯಡಿಯೂರಪ್ಪ ನೀಡಿದ ಹೇಳಿಕೆಯ ನಂತರ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.
ಇವರೆಲ್ಲ ಬಿಜೆಪಿ ಕುಂದಾಪುರ ಎಂಬ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಉಡುಪಿ, ಚಿಕ್ಕಮಂಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ಅವಹೇಳನಕರವಾಗಿ ಬರಹಗಳನ್ನು ಪೋಸ್ಟ್ ಮಾಡಿದಲ್ಲದೇ ಅವರಿಬ್ಬರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಕಳುಹಿಸಿ, ಮಾನಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.