ಲಾಟರಿ ಗೆದ್ದ ಬಳಿಕ ಮನೆಯಲ್ಲಿ ವಾಸಿಸಲೂ ಸಾಧ್ಯವಾಗುತ್ತಿಲ್ಲ ➤‌ 25 ಕೋಟಿ ರೂ. ವಿಜೇತ ಆಟೋ ಚಾಲಕನ ಅಳಲು

(ನ್ಯೂಸ್ ಕಡಬ) newskadaba.com ಕೇರಳ, ಸೆ. 24. ಕೇರಳ ಸರ್ಕಾರದ ಮೆಗಾ ಓಣಂ ಬಂಪರ್ ಲಾಟರಿಯಲ್ಲಿ 25 ಕೋಟಿ ರೂ. ಗೆದ್ದ ಅಟೋರಿಕ್ಷಾ ಚಾಲಕ ಅನೂಪ್, ಲಾಟರಿ ವಿಜೇತನೆಂದು ಘೋಷಿಸಲ್ಪಟ್ಟ ಕೇವಲ ಐದು ದಿನಗಳಲ್ಲಿ ನನ್ನ ಜೀವನದಲ್ಲಾದ ಈ ಅನಾಹುತಕ್ಕೆ ವಿಷಾದಿಸುತ್ತೇನೆ, ಲಾಟರಿ ಗೆದ್ದ ಬಳಿಕ ನಾನು ನನ್ನ ಮನಸ್ಸಿನ ಎಲ್ಲಾ ನೆಮ್ಮದಿಯನ್ನು ಕಳೆದುಕೊಂಡಿದ್ದೇನೆ ಮತ್ತು ನಾನು ನನ್ನ ಸ್ವಂತ ಮನೆಯಲ್ಲಿ ವಾಸಿಸಲೂ ಸಾಧ್ಯವಾಗುತ್ತಿಲ್ಲ ಎಂದು ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.


ಏಕೆಂದರೆ ನಾನು ಮೊದಲ ಬಹುಮಾನವನ್ನು ಗೆದ್ದಿರುವುದರಿಂದ ಜನ ಹಣ ಕೇಳಿಕೊಂಡು, ಸಾಲ ಕೇಳಿಕೊಂಡು ಬರುತ್ತಿದ್ದಾರೆ. ನಾನು ಬಹುಮಾನವನ್ನು ಗೆಲ್ಲುವವರೆಗೂ ಅನುಭವಿಸಿದ ಎಲ್ಲಾ ಮನಸ್ಸಿನ ಶಾಂತಿಯನ್ನು ಈಗ ಕಳೆದುಕೊಂಡಿದ್ದೇನೆ ಎಂದು ಅನೂಪ್ ಹೇಳಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಅವರು ವಿಡಿಯೋ ಹಂಚಿಕೊಂಡಿದ್ದು, ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಲಾಟರಿ ಗೆದ್ದಾಗ ಬಹಳಷ್ಟು ಸಂತಸವಾಗಿತ್ತು. ಆದರೆ ಆ ಸಂತಸ ಈಗ ದಿನ ಕಳೆದಂತೆ ದುಃಖಕ್ಕೆ ದಾರಿ ಮಾಡಿಕೊಡುತ್ತಿದೆ. ಮನೆಯಿಂದ ಹೊರಗೆ ಕಾಲಿಡಲೂ ಆಗುತ್ತಿಲ್ಲ. ಮಗುವಿಗೆ ಆನಾರೋಗ್ಯ ಕಾಡಿದರೆ ಆಸ್ಪತ್ರೆಗೆ ಹೋಗಲೂ ಸಾಧ್ಯವಿಲ್ಲ. ಎಲ್ಲಿ ಹೋದರೂ ಜನ ಹುಡುಕಿಕೊಂಡು ಬರುತ್ತಾರೆ ಎಂದು ಅನೂಪ್ ಹೇಳಿದ್ದಾರೆ. ಬಹುಮಾನದ ಹಣ ಇನ್ನೂ ಕೈಸೇರಿಲ್ಲ ಎಂದು ಹೇಳಿದರೂ ಯಾರೂ ನಂಬುವುದಿಲ್ಲ. ಮಾಧ್ಯಮಗಳು ಸಾಕಷ್ಟು ಸುದ್ದಿ ಹಬ್ಬಿಸಿರುವುದರಿಂದ ಎಲ್ಲಿಗೂ ಹೋಗಲೂ ಸಾಧ್ಯವಾಗುತ್ತಿಲ್ಲ. ಈಗ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

Also Read  ಕಾರ್ಮಿಕರ ಮೇಲೆ ಹರಿದ ಗೂಡ್ಸ್ ರೈಲು ➤6 ಮಂದಿ ಮೃತ್ಯು

error: Content is protected !!
Scroll to Top